ವಿಚ್ಛೇದನ ಕೋರಿದ್ದ ದಂಪತಿ ಆಧ್ಯಾತ್ಮಿಕ ಗುರುವಿನೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂಬ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದ ಸಲಹೆಯಂತೆ ಪತಿಯ ಕುಟುಂಬಸ್ಥರು ಕೊಪ್ಪಳ ಗವಿಂಠದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರನ್ನು ಭಾನುವಾರ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಸುಮಾರು ಹತ್ತು ನಿಮಿಷಗಳ ಕಾಲ ಕುಟುಂಬಸ್ಥರು ಸ್ವಾಮೀಜಿ ಅವರೊಂದಿಗೆ ಚರ್ಚಿಸಿದರು. ಪತ್ನಿಯ ಕುಟುಂಬಸ್ಥರು ಇನ್ನಷ್ಟೇ ಸ್ವಾಮೀಜಿ ಅವರನ್ನು ಭೇಟಿಯಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಉನ್ನತ ವ್ಯಕ್ತಿಯಿಂದ ಆಶೀರ್ವಾದ ಮತ್ತು ಮಾರ್ಗದರ್ಶನವನ್ನು ಪಡೆಯಬೇಕು ಎಂಬ ನ್ಯಾಯಾಲಯದ ಸಲಹೆಯನ್ನು ದಂಪತಿ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಅವರು ಒಮ್ಮತದಿಂದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿ ಅವರನ್ನು ಸೂಕ್ತವಾಗಿಯೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ವಿಜಯ್ ಕುಮಾರ್ ಪಾಟೀಲ್ ಅವರಿದ್ದ ಪೀಠ ನೀಡಿದ್ದ ಇತ್ತೀಚಿನ ಆದೇಶ ತಿಳಿಸಿತ್ತು.
ತನ್ನ ವಿಚ್ಛೇದನ ಅರ್ಜಿ ವಜಾಗೊಳಿಸಿ ಹಿಂದೂ ವಿವಾಹ ಕಾಯಿದೆಯಡಿ ದಾಂಪತ್ಯ ಹಕ್ಕು ಮರುಸ್ಥಾಪಿಸುವಂತೆ ಪತ್ನಿ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್ ಮೊರೆ ಹೋಗಿದ್ದರು.
ದಂಪತಿ ಆಧ್ಯಾತ್ಮಿಕ ಗುರುಗಳನ್ನು ಭೇಟಿಯಾಗಿ ಸಲಹೆ ಮತ್ತು ಆಶೀರ್ವಾದ ಪಡೆಯಲು ಒಪ್ಪಿಕೊಂಡಾಗ ಇದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಹೈಕೋರ್ಟ್ ನುಡಿದಿತ್ತು.