ಸುದ್ದಿಗಳು

ಫೆಬ್ರವರಿ 1ರಿಂದ ಸಾಮಾನ್ಯ ವಸ್ತ್ರ ಸಂಹಿತೆ ಅಳವಡಿಸಿಕೊಳ್ಳಲು ವಕೀಲರಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ

Bar & Bench

ವಸ್ತ್ರ ಸಂಹಿತೆಯಿಂದ ವಕೀಲರಿಗೆ ನೀಡಿದ್ದ ವಿನಾಯತಿಯನ್ನು ಕರ್ನಾಟಕ ಹೈಕೋರ್ಟ್‌ ಹಿಂಪಡೆಯಲು ನಿರ್ಧರಿಸಿದ್ದು ಫೆಬ್ರವರಿ ಒಂದನೇ ತಾರೀಖಿನಿಂದ ಸಾಮಾನ್ಯ ವಸ್ತ್ರ ಸಂಹಿತೆ ಅಳವಡಿಸಿಕೊಳ್ಳಲು ಸೂಚಿಸಿದೆ. ಈ ಕುರಿತಂತೆ ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಬಿಡುಗಡೆ ಮಾಡಲಾಗಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಜೂನ್‌ ಜೂನ್ 11ರಂದು ನ್ಯಾಯಾಲಯ ಭೌತಿಕ ವಿಚಾರಣೆ ಮತ್ತು ವಿಡಿಯೋ ಕಲಾಪದಲ್ಲಿ ಪಾಲ್ಗೊಳ್ಳುವ ವಕೀಲರಿಗೆ ವಸ್ತ್ರ ಸಂಹಿತೆ ಸಡಿಲಗೊಳಿಸಿತ್ತು. ಆಗ ವಕೀಲರು ಸಾಮಾನ್ಯ ವಸ್ತ್ರಸಂಹಿತೆಗೆ ಬದಲಾಗಿ, ಸರಳವಾದ ಬಿಳಿ-ಶರ್ಟ್ / ಬಿಳಿ-ಸಲ್ವಾರ್-ಕಮೀಜ್ ಅನ್ನು ಯಾವುದೇ ಹಿತವಾದ ಬಣ್ಣದ ಧಿರಿಸು / ಸೀರೆಯನ್ನು ಸರಳವಾದ ಬಿಳಿ ಕುತ್ತಿಗೆಪಟ್ಟಿಯೊಂದಿಗೆ ಧರಿಸಲು ಅವಕಾಶ ನೀಡಲಾಗಿತ್ತು.

ನೂತನ ಎಸ್‌ಒಪಿಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದ್ದು ಜ. 27 ರಿಂದ ಅದು ಜಾರಿಗೆ ಬರಲಿದೆ. ಅದರಂತೆ:

  • ಬೆಂಗಳೂರಿನ ಪ್ರಧಾನ ಪೀಠದ ಈಗಿನ ಕೌಂಟರ್‌ ಪಕ್ಕದಲ್ಲಿ ಪಿಎಫ್ / ಕೋರ್ಟ್ ಶುಲ್ಕ ಸಲ್ಲಿಸಲು ಮತ್ತು ಸ್ವೀಕರಿಸಲು ಹೆಚ್ಚುವರಿ ಕೌಂಟರ್ ತೆರೆಯಲಾಗುತ್ತಿದೆ.

  • ಎಲ್ಲಾ ಪೀಠಗಳಲ್ಲಿ ಕ್ಯಾಂಟೀನ್‌ ಬಳಕೆ ಮೇಲಿನ ನಿರ್ಬಂಧ ಸಡಿಲಿಕೆ.

  • ಕ್ಯಾಂಟೀನ್‌ಗಳಲ್ಲಿ ಆಸನ ಸಾಮರ್ಥ್ಯ ಈಗಿನ ನಿಯಮಾವಳಿಗಳಂತೆ ಅರ್ಧಕ್ಕೆ ಸೀಮಿತಗೊಳ್ಳಬೇಕು.

  • ಆರು ಅಡಿಗಳ ಅಂತರ ಕಾಪಾಡಿಕೊಳ್ಳತಕ್ಕದ್ದು. ಮತ್ತು ಕ್ಯಾಂಟೀನ್‌ಗಳಲ್ಲಿ ನೈರ್ಮಲ್ಯಕಾರಕಗಳನ್ನು ಒದಗಿಸತಕ್ಕದ್ದು.

  • ಕ್ಯಾಂಟಿನ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಥರ್ಮಲ್‌ ಸ್ಕ್ಯಾನಿಂಗ್ ಮಾಡಬೇಕು.

  • ಕೋವಿಡ್‌ ರೋಗಲಕ್ಷಣ ಇರುವ ಯಾವುದೇ ಸಿಬ್ಬಂದಿಗೆ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಲು ಅವಕಾಶವಿಲ್ಲ. ಮತ್ತು ಎಲ್ಲಾ ಸಿಬ್ಬಂದಿ ಸದಸ್ಯರು ಸಾಮಾಜಿಕ ಅಂತರ ಕಾಪಾಡಿಕೊಳ್ಳತಕ್ಕದ್ದು.

  • ಎಲ್ಲಾ ಸಮಯದಲ್ಲಿ ಸಿಬ್ಬಂದಿ ಮುಖಗವಸು ತೊಡುತ್ತಿರುವ ಬಗ್ಗೆ ಗುತ್ತಿಗೆದಾರ ಖಾತ್ರಿಪಡಿಸಬೇಕು.

  • ನ್ಯಾಯಾಲಯದ ಸಭಾಂಗಣಗಳಲ್ಲಿ ಮತ್ತು ನ್ಯಾಯಾಲಯದ ಆವರಣದಲ್ಲಿ ಲಿಫ್ಟ್‌ಗಳು / ಎಲಿವೇಟರ್‌ಗಳ ನಿರ್ಬಂಧಿತ ಬಳಕೆ ಮುಂದುವರೆಯಲಿದ್ದು ಮಾಸ್ಕ್‌ ಧರಿಸುವುದು ಕಡ್ಡಾಯ.

  • ಈಗಿನ ಎಸ್‌ಒಪಿಯಲ್ಲಿ ಪ್ರಸ್ತಾಪಿಸಿರುವಂತೆಯೇ ಬೆಂಗಳೂರು ಪ್ರಧಾನಪೀಠ, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ಕಕ್ಷಿದಾರರ ಪ್ರವೇಶಕ್ಕೆ ನಿಷೇಧ ಮುಂದುವರೆಯಲಿದೆ.

  • ಪ್ರಾಯೋಗಿಕ ನೆಲೆಯಲ್ಲಿ ಹೊಸ ಎಸ್‌ಒಪಿ ಜಾರಿಗೊಳಿಸಲಾಗುತ್ತಿದ್ದು ವಕೀಲರು ಮತ್ತು ಕಕ್ಷಿದಾರರು ಮುಖಗವಸು ತೊಡದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಹೋದಲ್ಲಿ ವಿನಾಯ್ತಿಗಳನ್ನು ಹಿಂಪಡೆಯಲಾಗುತ್ತದೆ.

ಎಸ್‌ಒಪಿಯನ್ನು ಇಲ್ಲಿ ಓದಬಹುದು:

modified_sop_dress_code.pdf
Preview