ಓಲಾ, ಉಬರ್ ಮತ್ತು ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಸೇವೆಯನ್ನು ಜೂನ್ 15ರವರೆಗೆ ಮುಂದುವರಿಸಲು ಕರ್ನಾಟಕ ಹೈಕೋರ್ಟ್ ಅನುಮತಿಸಿ ಆದೇಶಿಸಿದೆ. ಈ ಹಿಂದೆ ಏಪ್ರಿಲ್ 2ರಂದು ಹೈಕೋರ್ಟ್ ಒಂದೂವರೆ ತಿಂಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ನಿಲ್ಲಿಸುವಂತೆ ನಿರ್ದೇಶಿಸಿತ್ತು.
ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸಲು ಅನುಮತಿಗೆ ನಿರ್ದೇಶನ ಕೋರಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ರೊಪ್ಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮಪ್ರಸಾದ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸುವುದಕ್ಕೆ ಸಂಬಂಧಿಸಿದಂತೆ ಸಂಬಂಧಿತ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸಲಾಗಿತ್ತು. ಈ ಸಂಬಂಧ ರಾಜ್ಯ ಸರ್ಕಾರವು ತಮ್ಮ ಜೊತೆ ಸಮಾಲೋಚನೆ ನಡೆಸಿದ್ದು, ಬ್ಯಾಕ್ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದಂತೆ ಸಮಗ್ರ ನೀತಿ ರೂಪಿಸುವ ಸಾಧ್ಯತೆಯ ಬಗ್ಗೆ ತಿಳಿಸಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಮಧ್ಯಂತರ ಅರ್ಜಿಯಲಿ ರೊಪ್ಪೆನ್ ಟ್ರಾನ್ಸ್‌ಪೊರ್ಟೇಶನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ತಿಳಿಸಿದೆ.
“ಇಡೀ ನಗರಕ್ಕೆ ಸಂಪರ್ಕ ಕಲ್ಪಿಸುವ ಮೂಲಕ ಸಂಚಾರ ದಟ್ಟಣೆ ತಪ್ಪಿಸಿ ಸುಸ್ಥಿರ ನಗರೀಕರಣ ವ್ಯವಸ್ಥೆಗೆ ಬೈಕ್ ಟ್ಯಾಕ್ಸಿ ಸೇವೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಸಕಾರಾತ್ಮಕ ಸ್ಪಂದನೆಯು ಸಾರಿಗೆ ವ್ಯವಸ್ಥೆಯನ್ನು ಆಧುನೀಕರಣಗೊಳಿಸಿ ಕರ್ನಾಟಕವನ್ನು ಮುಂಚೂಣಿಯಲ್ಲಿ ನಿಲ್ಲಿಸಲು ನೆರವಾಗಲಿದೆ” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಏಪ್ರಿಲ್ 2ರಂದು ಹೈಕೋರ್ಟ್ ಮಾಡಿರುವ ಆದೇಶವು ನೋಂದಾಯಿತ ಆರು ಲಕ್ಷ ಬೈಕ್ ಟ್ಯಾಕ್ಸಿ ಚಾಲಕರ ತುತ್ತಿನ ಚೀಲಕ್ಕೆ ಹೊಡೆತ ನೀಡಿದೆ. ಹೀಗಾಗಿ, ಆರು ವಾರಗಳ ಕಾಲ ಗಡುವು ವಿಸ್ತರಿಸುವಂತೆ ಎಲ್ಲಾ ಬೈಕ್ ಟ್ಯಾಕ್ಸಿ ಸೇವಾ ಸಂಸ್ಥೆಗಳು ಕೋರಿದ್ದವು.
ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಓಲಾ ಪರವಾಗಿ ಹಿರಿಯ ವಕೀಲ ಅರುಣ್ ಕುಮಾರ್, ಉಬರ್ ಪರವಾಗಿ ಹಿರಿಯ ವಕೀಲ ಶ್ರೀನಿವಾಸ್ ರಾಘವನ್ ಮತ್ತು ರ‍್ಯಾಪಿಡೊ ಪರವಾಗಿ ವಕೀಲ ಎ ವಿ ನಿಶಾಂತ್ ಹಾಜರಿದ್ದರು.