ತನ್ನ ಬೈಕ್‌ಗಳಲ್ಲಿ 'ಯೆಜ್ಡಿ’ ಟ್ರೇಡ್‌ಮಾರ್ಕ್ ಅಥವಾ ಹೆಸರು ಒಳಗೊಂಡ ಟ್ರೇಡ್‌ಮಾರ್ಕ್ ಬಳಸುವುದಕ್ಕೆ ಕ್ಲಾಸಿಕ್ ಲೆಂಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಮತ್ತದರ ಸಹ ಸಂಸ್ಥಾಪಕ ಬೊಮನ್ ಇರಾನಿ ಅವರನ್ನು ನಿರ್ಬಂಧಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಬದಿಗೆ ಸರಿಸಿದೆ. ಇದರಿಂದ ಬೊಮಾನ್ ಇರಾನಿ ಹಾಗೂ ಕ್ಲಾಸಿಕ್ ಲೆಜೆಂಡ್ಸ್ ಮೇಲುಗೈ ಸಾಧಿಸಿದೆ.
ಟ್ರೇಡ್‌ಮಾರ್ಕ್ ನೋಂದಣಿ ಪ್ರಾಧಿಕಾರವು ಬೊಮನ್ ಇರಾನಿ ಅವರಿಗೆ 'ಯೆಜ್ಡಿ’ ಹೆಸರು ಬಳಕೆಗೆ ಅನುಮತಿ ನೀಡಿದ್ದ ಕ್ರಮವನ್ನು ಪ್ರಶ್ನಿಸಿ ಐಡಿಯಲ್ ಜಾವಾ ಸಂಸ್ಥೆಯ ಅಧಿಕೃತ ಋಣವಿಮೋಚನಾದಾರ (ಲಿಕ್ವಿಡೇಟರ್) ಮತ್ತು ಐಡಿಯಲ್ ಜಾವಾ ನೌಕರರ ಸಂಘ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠವು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಕ್ಲಾಸಿಕ್ ಲೆಜೆಂಡ್ಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಮತ್ತು ಟಿ ವೆಂಟಕೇಶ್ ನಾಯಕ್ ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ.
“ಐಡಿಯಲ್ ಜಾವಾ (ಇಂಡಿಯಾ) ಲಿಮಿಟೆಡ್ 15 ವರ್ಷಗಳ ಕಾಲ ಟ್ರೇಡ್ ಮಾರ್ಕ್ ಬಳಕೆ ಮಾಡಿಲ್ಲ. ಅಲ್ಲದೇ, ಟ್ರೇಡ್ ಮಾರ್ಕ್ ರದ್ದಾದ ಬಳಿಕ ಅದರ ಹಕ್ಕುಗಳನ್ನು ನವೀಕರಿಸಲು ಐಡಿಯಲ್ ಜಾವಾ ಮುಂದಾಗಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
“ಹೀಗಾಗಿ, ಏಕಸದಸ್ಯ ಪೀಠದ ಆದೇಶವನ್ನು ಬದಿಗೆ ಸರಿಸಿ, ಮೇಲ್ಮನವಿಯನ್ನು ಪುರಸ್ಕರಿಸುತ್ತಿದ್ದೇವೆ” ಎಂದು ಹೇಳಿದ್ದು, ಕ್ಲಾಸಿಕ್ ಲೆಜೆಂಡ್ಸ್ ವಾಣಿಜ್ಯ ರೂಪದಲ್ಲಿ ಟ್ರೇಡ್ ಮಾರ್ಕ್ ಬಳಕೆ ಮಾಡಬಹುದಾಗಿದೆ ಎಂದಿದೆ.
ಐಡಿಯಲ್ ಜಾವಾವು ಯೆಜ್ಡಿ ಹೆಸರಿನಲ್ಲಿ ಬೈಕ್‌ಗಳನ್ನು ಮಾರಾಟ ಮಾಡುತ್ತಿತ್ತು. ತನ್ನ ಪರ್ಷಿಯನ್ ಮೂಲದ ನೆನಪಿಗಾಗಿ ಐಡಿಯಲ್ ಜಾವಾದ ಸಂಸ್ಥಾಪಕ ರುಸ್ತೊಮ್ ಎಸ್ ಇರಾನಿ ಅವರು ಯೆಜ್ಡಿ (ಈಗ ಇರಾನ್‌ನಲ್ಲಿರುವ ಮೊದಲಿಗೆ ಪರ್ಷಿಯಾದಲ್ಲಿದ್ದ ಯೆಜ್ಡಿ ಒಂದು ಸ್ಥಳ) ಟ್ರೇಡ್ ಮಾರ್ಕ್ ಬಳಕೆ ಮಾಡಿದ್ದರು. ಇರಾನಿ 1989ರಲ್ಲಿ ನಿಧನರಾಗಿದ್ದು, 90ರಲ್ಲಿ ಐಡಿಯಲ್ ಜಾವಾ ವಿರುದ್ಧ ದಿವಾಳಿ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದು, ಅಂತಿಮವಾಗಿ ಅದು 1996ರಲ್ಲಿ ಯೆಜ್ಡಿ ಮೋಟಾರ್ ಬೈಕ್‌ಗಳ ಉತ್ಪಾದನೆಯನ್ನು ನಿಲ್ಲಿಸಿತ್ತು. 2001ರಲ್ಲಿ ಕಂಪನಿ ನ್ಯಾಯಾಲಯವು ಐಡಿಯಲ್ ಜಾವಾವನ್ನು ಮುಚ್ಚಿ ಅದನ್ನು ಋಣವಿಮೋಚನೆಗೊಳಿಸಲು ಆದೇಶಿಸಿತ್ತು.
ಈ ನಡುವೆ, ಇರಾನಿ ಪುತ್ರ ಆರ್ ಬೊಮಾನಿ ಇರಾನಿ ಅವರು ಯೆಜ್ಡಿ ಬ್ರ್ಯಾಂಡ್ ಪುನರ್ ಚಾಲ್ತಿಗೆ ತರಲು www.yezdi.com ಆರಂಭಿಸಿದ್ದರು. ಆನಂತರ ಯೆಜ್ಡಿಯ ಮೇಲಿನ ಐಡಿಯಲ್ ಜಾವಾ ಟ್ರೇಡ್‌ಮಾರ್ಕ್ ಹಕ್ಕು ಮುಗಿದ ಮೇಲೆ ಬೊಮಾನ್ ಇರಾನಿ ಅವರು ಯೆಜ್ಡಿ ಮಾರ್ಕ್ ಅನ್ನು ತನ್ನ ಪರವಾಗಿ ನೋಂದಾಯಿಸಿಕೊಳ್ಳಲು ಪ್ರಕ್ರಿಯೆ ಆರಂಭಿಸಿದ್ದರು. ಇದರ ಭಾಗವಾಗಿ 2015ರಲ್ಲಿ ಬೊಮಾನ್ ಇರಾನಿ ಮತ್ತು ಮಹೀಂದ್ರ ಅಂಡ್ ಮಹೀಂದ್ರ ಜೊತೆಗೂಡಿ ಕ್ಲಾಸಿಕ್ ಲೆಜೆಂಡ್ಸ್ ಹುಟ್ಟು ಹಾಕಿದ್ದರು.
ಅದೇ ವರ್ಷ ಆಗಸ್ಟ್‌ನಲ್ಲಿ ಐಡಿಯಲ್ ಜಾವಾದ ಅಧಿಕೃತ ಋಣವಿಮೋಚನಾದಾರ (ಅಫಿಷಿಯಲ್ ಲಿಕ್ವಿಡೇಟರ್) ಯೆಜ್ಡಿ ಟ್ರೇಡ್‌ಮಾರ್ಕ್ ತನಗೆ ಸೇರಿದ್ದು, ಅದರ ಹಕ್ಕುಗಳನ್ನು ಬೇರೊಬ್ಬರಿಗೆ ನೀಡಲಾಗದು ಎಂದು ಐಡಿಯಲ್ ಜಾವಾವು ಟ್ರೇಡ್‌ಮಾರ್ಕ್ ಪ್ರಾಧಿಕಾರಕ್ಕೆ ಪತ್ರ ಬರೆದಿತ್ತು. ಇದರ ಬೆನ್ನಿಗೇ ಅಧಿಕೃತ ಋಣವಿಮೋಚನಾದಾರರು ಆ ಟ್ರೇಡ್ ಮಾರ್ಕ್ ಮಾರಾಟ ಮಾಡಲು ಅನುಮತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
2018ರಲ್ಲಿ ತನ್ನ ಹೆಸರಿನಲ್ಲಿ ಯೆಜ್ಡಿ ಟ್ರೇಡ್‌ಮಾರ್ಕ್ ನೋಂದಾಯಿಸಿದ ಬೊಮಾನ್ ಇರಾನಿ ಅವರು ಮಾರ್ಕ್ ಬಳಕೆ ಮಾಡುವ ವಿಶೇಷ ಪರವಾನಗಿಯನ್ನು ಕ್ಲಾಸಿಕ್ ಲೆಜೆಂಡ್ಸ್‌ಗೆ ನೀಡಿದ್ದರು. ಇದನ್ನು ಪ್ರಶ್ನಿಸಿ ಅಧಿಕೃತ ಋಣವಿಮೋಚನಾದಾರ ಹೈಕೋರ್ಟ್ ಮೆಟ್ಟಿಲೇರಿದ್ದು, ಬೊಮಾನ್ ಇರಾನಿಗೆ ನೀಡಿರುವ ಟ್ರೇಡ್‌ಮಾರ್ಕ್ ಅನ್ನು ಅಕ್ರಮ ಎಂದು ಘೋಷಿಸುವಂತೆ ಕೋರಿದ್ದರು. ಇದೇ ಮನವಿ ಮಾಡಿ ಐಡಿಯಲ್ ಜಾವಾ ಉದ್ಯೋಗಿಗಳ ಸಂಸ್ಥೆಯೂ ಅರ್ಜಿ ಸಲ್ಲಿಸಿತ್ತು. 2022ರ ಡಿಸೆಂಬರ್‌ನಲ್ಲಿ ಹೈಕೋರ್ಟ್ ಈ ಮನವಿ ಪುರಸ್ಕರಿಸಿತ್ತು.
ಏಕಸದಸ್ಯ ಪೀಠವು “ಋಣವಿಮೋಚನಾ ಪ್ರಕ್ರಿಯೆ ಆರಂಭವಾದಾಗಿನಿಂದ ಐಡಿಯಲ್ ಜಾವಾ ಕಸ್ಟಡಿಯಲ್ಲಿದ್ದ ಟ್ರೇಡ್‌ಮಾರ್ಕ್ ನ್ಯಾಯಾಲಯದ ಕಸ್ಟಡಿಯಲ್ಲಿದೆ. ವೈಯಕ್ತಿಕ ಶಕ್ತಿಯ ಮೇಲೆ ಯೆಜ್ಡಿ ಟ್ರೇಡ್‌ಮಾರ್ಕ್ ನೋಂದಾಯಿಸಿರುವ ಬೊಮಾನ್ ಇರಾನಿ ಅವರ ಕ್ರಮ ಅಸಿಂಧುವಾಗಿದ್ದು, ಟ್ರೇಡ್‌ಮಾರ್ಕ್ ರಿಜಿಸ್ಟ್ರಾರ್ ಅವರು ಐಡಿಯಲ್ ಜಾವಾದ ಮಾರ್ಕ್ ಅನ್ನು ನವೀಕರಿಸಬೇಕು” ಎಂದು ಆದೇಶಿಸಿತ್ತು.
ಇದನ್ನು ಪ್ರಶ್ನಿಸಿದ್ದ ಕ್ಲಾಸಿಕ್ ಲೆಜೆಂಡ್ಸ್ “ಸಿಂಧುತ್ವ, ಸರಿಪಡಿಸುವಿಕೆ, ರದ್ದತಿ ಅಥವಾ ಟ್ರೇಡ್‌ಮಾರ್ಕ್ ಮರುಸ್ಥಾಪನೆಯು ವಿಶೇಷವಾಗಿ ಟ್ರೇಡ್ ಮಾರ್ಕ್ಸ್ ಕಾಯಿದೆ ಅಡಿ ಬರುತ್ತದೆ, ಹೀಗಾಗಿ, ನೋಂದಣಿ ರದ್ಧತಿ ಅಥವಾ ಗತಿಸಿ ಹೋಗಿರುವ ಮಾರ್ಕ್ ಅಥವಾ ನೋಂದಣಿಯನ್ನು ಕಂಪನಿ ನ್ಯಾಯಾಲಯ ರದ್ದುಪಡಿಸಲಾಗದು. ಐಡಿಯಲ್ ಜಾವಾವು ಬಹುಕಾಲ ಮಾರ್ಕ್ ಬಳಸದೇ ಇರುವುದು ಪರಿತ್ಯಾಗ ಮಾಡಿದೆ ಎಂದೇ ಅರ್ಥ” ಎಂದು ವಾದಿಸಿತ್ತು.
ಈ ವಾದದಲ್ಲಿ ಅರ್ಥವಿದೆ ಎಂದಿದ್ದ ವಿಭಾಗೀಯ ಪೀಠವು “ಯೆಜ್ಡಿ ಮಾರ್ಕ್ ಅನ್ನು ರಕ್ಷಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಳ್ಳದಿದ್ದರೂ ಅದರ ಹಕ್ಕನ್ನು ಮರುಸ್ಥಾಪಿಸಲು ಅಧಿಕೃತ ಋಣವಿಮೋಚನಾದಾರರು ಹೇಗೆ ಕೇಳುತ್ತಿದ್ದಾರೆ” ಎಂದು ಪ್ರಶ್ನಿಸಿದ್ದು, ಏಕಸದಸ್ಯ ಪೀಠದ ನಿರ್ದೇಶನಗಳು ಅರ್ಥಹೀನ ಎಂದು ಮೇಲ್ಮನವಿ ಪುರಸ್ಕರಿಸಿದೆ.
ಕ್ಲಾಸಿಕ್ ಲೆಜೆಂಡ್ಸ್ ಪರವಾಗಿ ಹಿರಿಯ ವಕೀಲ ಎಸ್ ಎಸ್ ನಾಗಾನಂದ್, ಬೊಮಾನ್ ಇರಾನಿ ಪರವಾಗಿ ಹಿರಿಯ ವಕೀಲ ಉದಯ್ ಹೊಳ್ಳ, ಅಧಿಕೃತ ಋಣವಿಮೋಚನಾದಾರರ ಪರವಾಗಿ ಹಿರಿಯ ಆದಿತ್ಯ ಸೋಂಧಿ, ಐಡಿಯಲ್ ಜಾವಾ (ಇಂಡಿಯಾ) ಉದ್ಯೋಗಿಗಳ ಸಂಸ್ಥೆ ಪರವಾಗಿ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ, ಕೇಂದ್ರ ಸರ್ಕಾರದ ಪರವಾಗಿ ವಕೀಲ ಎಂ ಎನ್ ಕುಮಾರ್ ವಾದಿಸಿದ್ದರು.