Justices Alok Aradhe and Anant Ramanath Hegde
Justices Alok Aradhe and Anant Ramanath Hegde 
ಸುದ್ದಿಗಳು

ಕ್ರೌರ್ಯದ ಆಧಾರದಲ್ಲಿ ಪತ್ನಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿ ಪುರಸ್ಕರಿಸಿದ ಕರ್ನಾಟಕ ಹೈಕೋರ್ಟ್‌

Bar & Bench

ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ನೀಡುವಂತೆ ಪತ್ನಿ ಸಲ್ಲಿಸಿದ್ದ ಅರ್ಜಿಗೆ ಪತಿ ಆಕ್ಷೇಪಣೆ ಸಲ್ಲಿಸದಿದ್ದರೂ ಪತ್ನಿಯ ಅರ್ಜಿ ವಜಾಗೊಳಿಸಿ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್ ಈಚೆಗೆ ದಂಪತಿಗೆ ವಿಚ್ಛೇದನ ಮಂಜೂರು ಮಾಡಿದೆ.

ವಿಚ್ಛೇದನ ಅರ್ಜಿ ವಜಾಗೊಳಿಸಿದ್ದ ಮೈಸೂರಿನ 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಕ್ರಮ ಪ್ರಶ್ನಿಸಿ 30 ವರ್ಷದ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ಅನಂತ ರಾಮನಾಥ ಹೆಗಡೆ ಅವರ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿದೆ.

ಪತ್ನಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯ ವಿಚಾರಣೆಗೆ ಪತಿ ಹಾಜರಾಗಿದ್ದರೂ, ಆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿಲ್ಲ. ಪತ್ನಿಯನ್ನು ಪಾಟಿ ಸವಾಲಿಗೆ ಒಳಪಡಿಸಿ, ಆಕೆ ಒದಗಿಸಿರುವ ಸಾಕ್ಷ್ಯಾಧಾರಗಳನ್ನೂ ಪರೀಕ್ಷಿಸಿಲ್ಲ. ಹೀಗಿದ್ದರೂ, ಪತ್ನಿಯ ಅರ್ಜಿಯನ್ನು ವಜಾಗೊಳಿಸಿರುವ ಕೌಟುಂಬಿಕ ನ್ಯಾಯಾಲಯ ಲೋಪ ಎಸಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ವಿಚ್ಛೇದನ ಅರ್ಜಿ ವಜಾಗೊಳಿಸಿ 2017ರ ಮಾರ್ಚ್‌ 27ರಂದು ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸಿದೆ. ಜೊತೆಗೆ, ದಂಪತಿ ನಡುವಿನ ವಿವಾಹವನ್ನು ಅನೂರ್ಜಿತಗೊಳಿಸಿ ಆದೇಶಿಸಿದೆ.

“ಕ್ರೌರ್ಯದ ಆಧಾರದಲ್ಲಿ ಪತ್ನಿ ವಿಚ್ಛೇದನ ಕೋರಬಹುದಾದ ಪ್ರಕರಣ ಇದಾಗಿದೆಯೇ ಎಂಬುದನ್ನು ನ್ಯಾಯಾಲಯ ಪರಿಗಣಿಸಬೇಕಾಗುತ್ತದೆ. ವಿಚ್ಛೇದನ ಕೋರಿ ಪತ್ನಿ ಕೌಟುಂಬಿಕ ನ್ಯಾಯಾಲಯದ ಮುಂದೆ ಸಲ್ಲಿಸಿದ್ದ ಅರ್ಜಿಗೆ ಪತಿ ಆಕ್ಷೇಪಣೆ ಸಲ್ಲಿಸಿಲ್ಲ. ಆಕೆಯನ್ನು ಪಾಟಿ ಸವಾಲಿಗೂ ಒಳಪಡಿಸಿಲ್ಲ. ಹೀಗಿರುವಾಗ, ಪತ್ನಿ ಒದಗಿಸಿರುವ ಪುರಾವೆಗಳು ಪ್ರಶ್ನಿಸಲ್ಪಡದೇ ಹಾಗೇ ಉಳಿದಿವೆ. ಹೈಕೋರ್ಟ್ ವಿಚಾರಣೆಗೂ ಪತಿ ಹಾಜರಾಗಿಲ್ಲ ಹಾಗೂ ಪತ್ನಿಯ ಮೇಲ್ಮನವಿಯನ್ನು ವಿರೋಧಿಸಿಲ್ಲ. ನ್ಯಾಯಾಲಯದ ಮುಂದೆ ಲಭ್ಯವಿರುವ ದಾಖಲೆಗಳನ್ನು ಪರಿಗಣಿಸಿದರೆ, ಮೇಲ್ಮನವಿದಾರೆಯು ವಿವಾಹ ವಿಚ್ಛೇದನ ಪಡೆಯಲು ಅರ್ಹರಿದ್ದಾರೆ” ಎಂದು ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: 2009ರಲ್ಲಿ ಮೈಸೂರಿನಲ್ಲಿ ವಿವಾಹವಾಗಿದ್ದ ದಂಪತಿ ಕೇವಲ 2 ತಿಂಗಳು ಜತೆಯಾಗಿ ಸಂಸಾರ ನಡೆಸಿದ್ದರು. ಆ 2 ತಿಂಗಳ ಅವಧಿಯಲ್ಲೂ ಇಬ್ಬರ ನಡುವೆ ಪ್ರತಿದಿನ ಜಗಳವಾಗುತ್ತಿತ್ತು. ಸತಿ-ಪತಿಯನ್ನು ಒಂದುಗೂಡಿಸಲು ಹಿರಿಯರು ಮಾಡಿದ್ದ ಪ್ರಯತ್ನಗಳು ವ್ಯರ್ಥವಾಗಿದ್ದವು. ಗಂಡ ಪ್ರತಿನಿತ್ಯ ಕುಡಿದು ಬಂದು ಇತರರ ಮುಂದೆ ನಿಂದಿಸುತ್ತಾನೆ ಎಂದು ದೂರಿದ್ದ ಪತ್ನಿ, ಸಣ್ಣಪುಟ್ಟ ವಿಚಾರಗಳಿಗೂ ಜಗಳ ತೆಗೆಯುವ ಪತಿಗೆ ಹೊಂದಿಕೊಂಡು ಹೋಗುವ ಸ್ವಭಾವವೇ ಇಲ್ಲ. ಮದುವೆಯಾದಾಗ ನನಗೆ ಕೇವಲ 15 ವರ್ಷಗಳಾಗಿತ್ತು. ಇಚ್ಛೆಗೆ ವಿರುದ್ಧವಾಗಿ ಈ ಮದುವೆ ನಡೆದಿದೆ. ಆದ್ದರಿಂದ, ಕ್ರೌರ್ಯದ ಆಧಾರದಲ್ಲಿ ವಿಚ್ಛೇದನ ಮಂಜೂರು ಮಾಡಬೇಕು ಎಂದು ಕೋರಿ 2015ರಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಪತಿ ಹಾಜರಾಗಿದ್ದರೂ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರಲಿಲ್ಲ. ಪತ್ನಿಯನ್ನು ಪಾಟಿ ಸವಾಲಿಗೆ ಒಳಪಡಿಸಿ, ಆಕೆ ಒದಗಿಸಿದ್ದ ಸಾಕ್ಷ್ಯಾಧಾರಗಳನ್ನೂ ಪರೀಕ್ಷೆಗೊಳಪಡಿಸಿರಲಿಲ್ಲ. ಹೀಗಿದ್ದರೂ, ಪತ್ನಿಯ ಅರ್ಜಿ ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯ, 2009ರಲ್ಲಿ ಅರ್ಜಿದಾರೆಗೆ 15 ವರ್ಷವಿದ್ದಾಗ ಮದುವೆಯಾಗಿದೆ. ಆದರೆ, ವಿಚ್ಛೇದನ ಕೋರಿ 2015ರಲ್ಲಿ ಅಂದರೆ ಆಕೆ ಪ್ರೌಢಾವಸ್ಥೆ ತಲುಪಿ 3 ವರ್ಷಗಳ ನಂತರ ಅರ್ಜಿ ಸಲ್ಲಿಸಲಾಗಿದೆ ಎಂಬ ಕಾರಣ ನೀಡಿತ್ತು. ಇದನ್ನು ಪ್ರಶ್ನಿಸಿ ಪತ್ನಿ ಹೈಕೋಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.