ಹಣ ಮತ್ತು ಸಚಿವ ಸ್ಥಾನದ ಆಮಿಷವೊಡ್ಡಿ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅವರನ್ನು ಖರೀದಿಸಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ 2019ರಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣಕ್ಕೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ತೆರವುಗೊಳಿಸಿದೆ.
ಆ ಮೂಲಕ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರು ಕಾಂಗ್ರೆಸ್- ಜೆಡಿಎಸ್ ಶಾಸಕರನ್ನು ಸೆಳೆಯಲು ರೂಪಿಸಲಾಗಿದ್ದ ಆಪರೇಷನ್ ಕಮಲ ತಂತ್ರ ಕುರಿತ ತನಿಖೆಗೆ ಸಮ್ಮತಿ ಸೂಚಿಸಿದ್ದಾರೆ.
ಗುರುಮಿಠ್ಕಲ್ ಕ್ಷೇತ್ರವನ್ನು ಪ್ರತಿನಿಧಿಸುವ ಜೆಡಿಎಸ್ ಶಾಸಕ ಕಂದಕೂರ ಅವರ ಪುತ್ರ ಶರಣಗೌಡರನ್ನು ಕರೆಸಿಕೊಂಡ ಆಗಿನ ವಿರೋಧಪಕ್ಷದ ನಾಯಕ ಯಡಿಯೂರಪ್ಪ ರಾಜಿನಾಮೆ ನೀಡಿ ಬಿಜೆಪಿಗೆ ಬರುವಂತೆ ತಂದೆಯ ಮನವೊಲಿಸಲು ಕೋರಿದ್ದರು. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಶರಣಗೌಡ ದೂರು ದಾಖಲಿಸಿದ್ದರು. ಜೊತೆಗೆ ಅವರು ಆಡಿಯೊ ದಾಖಲೆಯನ್ನೂ ಒದಗಿಸಿದ್ದರು. ಇದು ರಾಜ್ಯದಲ್ಲಿ ತೀವ್ರ ರಾಜಕೀಯ ಸಂಚಲನ ಸೃಷ್ಟಿಸಿತ್ತು.
ಜೆಡಿಎಸ್ ಕಾಂಗ್ರೆಸ್ ಮೈತ್ರಿಕೂಟ 2018ರಲ್ಲಿ ಸರ್ಕಾರ ರಚಿಸಿತ್ತು. ಆದರೆ ಜೆಡಿಎಸ್ ಹಾಗೂ ಕಾಂಗ್ರೆಸ್‌ನ 16 ಶಾಸಕರು 2019ರಲ್ಲಿ ರಾಜೀನಾಮೆ ನೀಡಿದ ಪರಿಣಾಮ ಬಿಜೆಪಿ ಅಧಿಕಾರಕ್ಕೆ ಬಂದಿತ್ತು.