Karnataka High Court 
ಸುದ್ದಿಗಳು

ಎನ್‌ಎಸ್‌ಎಲ್‌ಟಿಯಲ್ಲಿ ಆದೇಶಗಳ ಅಪ್‌ಲೋಡ್‌ ವಿಳಂಬ, ಕ್ರಮಬದ್ಧ ವಿಚಾರಣೆ ಕುರಿತು ಗಮನಹರಿಸಲು ಹೈಕೋರ್ಟ್‌ ಸೂಚನೆ

"ಎನ್‌ಸಿಎಲ್‌ಟಿ ಬಗ್ಗೆ ಸಾಕಷ್ಟು ಅಹವಾಲುಗಳು ಬರುತ್ತಿವೆ. ಆದೇಶಗಳನ್ನು ಅಪ್‌ಲೋಡ್‌ ಮಾಡಲಾಗುತ್ತಿಲ್ಲ. ಸರಿಯಾದ ಸಮಯಕ್ಕೆ ವಿಚಾರಣೆ ನಡೆಸಲಾಗುತ್ತಿಲ್ಲ” ಎಂಬ ದೂರು ಬಂದಿವೆ ಎಂದ ಪೀಠ.

Bar & Bench

ಬೆಂಗಳೂರಿನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಕಾರ್ಯಚಟುವಟಿಕೆಯ ಬಗ್ಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಎನ್‌ಎಸ್‌ಎಲ್‌ಟಿಯು ಆದೇಶಗಳನ್ನು ತನ್ನ ವೆಬ್‌ಸೈಟ್‌ಗೆ ಅಪ್‌ಲೋಪ್‌ ಮಾಡಲು ವಿಳಂಬ ಮಾಡುತ್ತಿರುವುದು, ನಿಗದಿತ ಸಮಯದಲ್ಲಿ ವಿಚಾರಣೆ ನಡೆಸದಿರುವುದು ಮತ್ತು ಪಕ್ಷಕಾರರನ್ನು ಆಲಿಸದೇ ಆದೇಶ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿವೆ ಎಂದಿತು.

“ಎನ್‌ಸಿಎಲ್‌ಟಿ ಬಗ್ಗೆ ಸಾಕಷ್ಟು ಅಹವಾಲುಗಳು ಬರುತ್ತಿವೆ. ಆದೇಶಗಳನ್ನು ಅಪ್‌ಲೋಡ್‌ ಮಾಡಲಾಗುತ್ತಿಲ್ಲ. ಸರಿಯಾದ ಸಮಯಕ್ಕೆ ವಿಚಾರಣೆ ನಡೆಸಲಾಗುತ್ತಿಲ್ಲ. 12 ಗಂಟೆಗೆ ವಿಚಾರಣೆ ಮುಕ್ತಾಯ, ಪಕ್ಷಕಾರರನ್ನು ಆಲಿಸದೇ ಆದೇಶ ಮಾಡಲಾಗುತ್ತಿದೆ” ಎಂಬ ದೂರು ಬಂದಿವೆ ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿತು.

ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ವಕೀಲರೊಬ್ಬರು ರೇರಾದಲ್ಲಿ ಸರಿಯಾಗಿ ನ್ಯಾಯಾಲಯದ ಆದೇಶ ಅಪ್‌ಲೋಡ್‌ ಮಾಡಲಾಗುತ್ತಿಲ್ಲ ಎಂದು ಗಮನಸೆಳೆದರು.

ಈ ಹಂತದಲ್ಲಿ ಪೀಠವು “ಎನ್‌ಸಿಎಲ್‌ಟಿಯಲ್ಲಿಯೂ ಇದೇ ಸಮಸ್ಯೆಯಿದೆ. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ್‌ ಕಾಮತ್‌ ಅವರಿಗೆ ಇತ್ತ ಗಮನ ಹರಿಸಬೇಕು” ಎಂದಿತು. ಇದಕ್ಕೆ ಎಎಸ್‌ಜಿ ಕಾಮತ್‌ ಅವರು “ಉಪ ರೆಜಿಸ್ಟ್ರಾರ್‌ ಜೊತೆ ಮಾತನಾಡುತ್ತೇನೆ” ಎಂದರು.

ಆಗ ಪೀಠವು “ಕಳೆದ ಬಾರಿಯೂ ನೀವು ನೀಡಿದ ಭರವಸೆಯ ಪ್ರಕಾರ ಆದೇಶಗಳನ್ನು ಅಪ್‌ಲೋಡ್‌ ಮಾಡಲಾಗುತ್ತಿತ್ತು. ಈಗ ಮೂರು ತಿಂಗಳ ಬಳಿಕ ಆದೇಶ ಅಪ್‌ಲೋಡ್‌ ಮಾಡಲಾಗುತ್ತಿದೆ. ನೋಟಿಸ್‌ ನೀಡದೇ ಆದೇಶ ಮಾಡಲಾಗುತ್ತಿದೆ ಎನ್ನಲಾಗಿದೆ. ಆದೇಶವನ್ನು ಅಪ್‌ಲೋಡ್‌ ಮಾಡದಿದ್ದರೆ ಮೇಲ್ಮನವಿ ಪರಿಹಾರ ಪಡೆಯುವುದು ಹೇಗೆ?” ಎಂದಿತು.

ಆ ಎಎಸ್‌ಜಿ ಕಾಮತ್‌ ಅವರು “ಎನ್‌ಸಿಎಲ್‌ಟಿ ಉಪ ರಿಜಿಸ್ಟ್ರಾರ್‌ ಜೊತೆಗೆ ಮತ್ತೆ ಮಾತನಾಡುತ್ತೇನೆ” ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.