ಆನ್‌ಲೈನ್ ಗೇಮಿಂಗ್ ವೇದಿಕೆ ಗೇಮ್ಸ್‌ಕ್ರಾಫ್ಟ್ ಸಂಸ್ಥಾಪಕರನ್ನು ಬಂಧಿಸಿರುವ ಕ್ರಮವನ್ನು ಸಮರ್ಥಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಗುರುವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ಬಂಧನ ಅಕ್ರಮ ಎಂದು ಘೋಷಿಸುವಂತೆ ಕೋರಿ ವಿಕಾಸ್ ತನೇಜಾ, ಪೃಥ್ವಿರಾಜ್ ಸಿಂಗ್ ಮತ್ತು ದೀಪಕ್ ಸಿಂಗ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ರಜಾಕಾಲೀನ ಏಕಸದಸ್ಯ ಪೀಠ ನಡೆಸಿತು.
“ವಿಚಾರಣೆಯ ಸಂದರ್ಭದಲ್ಲಿ ಪೀಠವು ಗೇಮ್ಸ್‌ಕ್ರಾಫ್ಟ್ ಸಂಸ್ಥಾಪಕರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಸಮರ್ಥಿಸುವುದಕ್ಕೆ ಪೂರಕವಾಗಿ ನಂಬಲರ್ಹ ಕಾರಣಗಳನ್ನು ದಾಖಲೆಯಲ್ಲಿ ಸಲ್ಲಿಸುವಂತೆ ನಿರ್ದೇಶಿಸಿತು. ಗೇಮ್ಸ್‌ಕ್ರಾಫ್ಟ್ ನಿರ್ದೇಶಕರನ್ನು ತಪ್ಪಾಗಿ ಬಂಧಿಸಿದ್ದರೆ ಅಧಿಕಾರಿಗಳು ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಇರಿ. ಇದರಲ್ಲಿ ಸಾಮಾನ್ಯವಾಗಿ ಅಧಿಕಾರಿಗಳು ತಪ್ಪಿಸಿಕೊಳ್ಳಲಾಗದು. ಬಂಧನ ಸಮರ್ಥಿಸುವುದಕ್ಕೆ ಪೂರಕ ದಾಖಲೆ ಸಲ್ಲಿಸದಿದ್ದರೆ ಗೇಮ್ಸ್‌ಕ್ರಾಫ್ಟ್ ನಿರ್ದೇಶಕರು ಪ್ರಕರಣ ದಾಖಲಿಸಿ, ಅಧಿಕಾರಿಗಳು ಜೈಲು ಶಿಕ್ಷೆ ಅನುಭವಿಸುವಂತೆ ಮಾಡಬಹುದು” ಎಂದು ಎಚ್ಚರಿಸಿತು.
ಜಾರಿ ನಿರ್ದೇಶನಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಮಧು ರಾವ್ ಅವರನ್ನು ಉಲ್ಲೇಖಿಸಿದ ಪೀಠವು “ಜೈಲಿಗೆ ಹೋಗಿ, ಇಲ್ಲ ಸಮರ್ಥಿಸಿಕೊಳ್ಳಿ” ಎಂದು ಪೀಠವು ಲಘುವಾಗಿ ಹೇಳಿತು.
ದೀಪಕ್ ಸಿಂಗ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಡಾ. ಎಸ್ ಮುರಳೀಧರ್ ಅವರು “ದುರುದ್ದೇಶದಿಂದ ಅರ್ಜಿದಾರರನ್ನು ಬಂಧಿಸಲಾಗಿದ್ದು, ಇಂಥದ್ದೇ ಮತ್ತೊಂದು ಇ ಡಿ ಪ್ರಕರಣಕ್ಕೆ ತಡೆ ಇದೆ. ಇದಕ್ಕೆ ತಡೆ ಇರುವಾಗಲೇ ಏತಕ್ಕಾಗಿ ಅರ್ಜಿದಾರರನ್ನು ಬಂಧಿಸಲಾಗಿದೆ. ತೆಲಂಗಾಣದಲ್ಲಿ ಜಾರಿ ನಿರ್ದೇಶನಾಲಯದ ಕಚೇರಿ ಇಲ್ಲವೇ? ತೆಲಂಗಾಣದ ಎಫ್‌ಐಆರ್ ಆಧರಿಸಿ ಬೆಂಗಳೂರಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರಗಾಂವ್‌ಗೆ ಹೋಗಿ ಬಂಧಿಸುವ ಅಗತ್ಯವಿರಲಿಲ್ಲ” ಎಂದರು.
ವಿಶೇಷ ಸರ್ಕಾರಿ ಅಭಿಯೋಜಕ ಮಧು ರಾವ್ ಅವರು “ಗೇಮ್ಸ್‌ಕ್ರಾಫ್ಟ್‌ನಲ್ಲಿ ರಮ್ಮಿ ಗೇಮ್ ಆಡುವುದಕ್ಕೆ ಸಂಬಂಧಿಸಿದಂತೆ ಹೊಸದಾಗಿ ಎಫ್‌ಐಆರ್ ದಾಖಲಾಗಿದೆ. ಹಿಂದಿನದು ಪೋಕೆಟ್52 ಗೇಮ್‌ಗೆ ಸಂಬಂಧಿಸಿದ್ದು, ಅದಕ್ಕೆ ತಡೆ ನೀಡಲಾಗಿದೆ. ಆರೋಪಿಗಳು ವಿಚಾರಣಾಧೀನ ನ್ಯಾಯಾಲಯದಲ್ಲಿ ಜಾಮೀನು ಕೋರಿದ್ದಾರೆ” ಎಂದರು. ಅದಕ್ಕೆ ಪೀಠವು ಆರೋಪಿಗಳು ವಿಶೇಷ ನ್ಯಾಯಾಲಯದಲ್ಲಿ ಪರಿಹಾರ ಪಡೆಯಬಹುದೇ ಎಂದಿತು.
ಇದಕ್ಕೆ ಮುರಳೀಧರ್ ಅವರು “ಬಂಧನದ ಕಾನೂನಾತ್ಮಕ ಅಂಶವನ್ನು ಪರಿಶೀಲಿಸಲು ಹೈಕೋರ್ಟ್ ಸರಿಯಾದ ಸ್ಥಳವಾಗಿದೆ. ಜಾಮೀನು ಅರ್ಜಿ ನಿರ್ಧರಿಸಲು ವಿಚಾರಣಾಧೀನ ನ್ಯಾಯಾಲಯಕ್ಕೆ ಸಮಯಬೇಕಾಗಬಹುದು. ಈ ನಡುವೆ, ತಪ್ಪಾಗಿ ಬಂಧಿಸಿರುವುದನ್ನು ಮುಂದುವರಿಸಲು ಅವಕಾಶ ನೀಡಬಾರದು” ಎಂದರು.
ಎಲ್ಲರ ವಾದ ಆಲಿಸಿದ ಪೀಠವು ವಿಚಾರಣೆಯನ್ನು ಮೇ 19ಕ್ಕೆ ಮುಂದೂಡಿತು.