ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯವು ₹500 ಕೋಟಿಗೂ ಹೆಚ್ಚಿನ ಹಣವನ್ನು ವಶಕ್ಕೆ ಪಡೆದು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿರುವ ರಿಯಲ್-ಮನಿ ಗೇಮಿಂಗ್ ವೇದಿಕೆ ವಿನ್ಜೊ ಪ್ರೈವೇಟ್ ಲಿಮಿಟೆಡ್‌ಗೆ ತನ್ನ ವಿವರವಾದ ಹಣಕಾಸು ವಿವರ ಮತ್ತು ಕಾರ್ಯಾಚರಣೆಯ ಮಾಹಿತಿ ಒದಗಿಸುವಂತೆ ಕರ್ನಾಟಕ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.
ಪಿಎಂಎಲ್‌ಎ ಅಡಿ ಜಾರಿ ನಿರ್ದೇಶನಾಲಯವು ಅಕ್ರಮವಾಗಿ ಶೋಧ ಮತ್ತು ಜಫ್ತಿ ಮಾಡಿ, ಆರೋಪಿಗಳ ಹೇಳಿಕೆ ದಾಖಲಿಸಿ, ಪಂಚನಾಮೆ ನಡೆಸಿದೆ. ಹೀಗಾಗಿ ಇದನ್ನು ಕಾನೂನುಬಾಹಿರ ಎಂದು ಘೋಷಿಸಬೇಕು ಎಂದು ಕೋರಿ ವಿನ್ಜೊ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ನಡೆಸಿತು.
ಬಳಕೆದಾರರು ತನ್ನ ವೇದಿಕೆಯಲ್ಲಿ ಠೇವಣಿ ಇಟ್ಟಿರುವ ಹಣದ ಮೊತ್ತ, ಅಗ್ರಿಗೇಟ್ ವಿಜೇತರಿಗೆ ಪಾವತಿಸಿರುವ ಹಣ ಮತ್ತು ಒಟ್ಟಾರೆ ನಷ್ಟದ ಮೊತ್ತದ ದಾಖಲೆ ಸಲ್ಲಿಸಬೇಕು. ಜೊತೆಗೆ ದೇಶ ಮತ್ತು ವಿದೇಶದಲ್ಲಿರುವ ತನ್ನ ಇತರೆ ಮತ್ತು ಪಾಲುದಾರ ಸಂಸ್ಥೆಗಳು ಹಾಗೂ ಅವರ ಆದಾಯ ಮತ್ತು ವಹಿವಾಟಿನ ಮಾಹಿತಿಯನ್ನು ದಾಖಲೆಯಲ್ಲಿ ಸಲ್ಲಿಸುವಂತೆ ವಿನ್ಜೊಗೆ ನ್ಯಾಯಾಲಯ ನಿರ್ದೇಶಿಸಿದೆ.
ವಿನ್ಜೊ,ಅದರ ಪ್ರವರ್ತಕರು ಅಥವಾ ಸಹ ಸಂಸ್ಥೆಗಳು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದಾವೆಯೇ ಅಥವಾ ಭಾರತದ ಹೊರಗೆ ವ್ಯವಹಾರ ನಡೆಸುತ್ತಿವೆಯೇ ಎಂಬುದರ ಕುರಿತು ಮಾಹಿತಿ ಒದಗಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ಇಡಿ ವಶಕ್ಕೆ ಪಡೆದು ಸ್ಥಗಿತಗೊಳಿಸಿರುವ ಖಾತೆಗಳಿಗೆ ಸಂಬಂಧಿಸಿದಂತೆ ವಿನ್ಜೊ ಬ್ಯಾಂಕ್ ಭದ್ರತೆ ಒದಗಿಸಿದರೆ ಖಾತೆಗಳಲ್ಲಿ ವಹಿವಾಟು ನಡೆಸಲು ಮುಕ್ತಗೊಳಿಸಲಾಗುತ್ತದೆಯೇ ಎಂಬುದರ ಕುರಿತು ಮಾಹಿತಿ ನೀಡಲು ಜಾರಿ ನಿರ್ದೇಶನಾಲಯಕ್ಕೆ ನ್ಯಾಯಾಲಯ ಸೂಚಿಸಿದೆ. ಈ ಕುರಿತು ಶುಕ್ರವಾರ ವಿಚಾರಣೆ ಮುಂದುವರಿಯಲಿದೆ.
ಇದಕ್ಕೂ ಮುನ್ನ, ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಮಧು ಎನ್. ರಾವ್ ಅವರು “ಕಂಪನಿ ಮತ್ತು ಅದರ ಪ್ರವರ್ತರ ಮನೆಯಲ್ಲಿ ಶೋಧ ನಡೆಸಿದಾಗ ಆಕ್ಷೇಪಾರ್ಹವಾದ ಡಿಜಿಟಲ್ ದಾಖಲೆ, ಈಮೇಲ್ ಮತ್ತು ಕ್ಲೌಡ್‌ನಲ್ಲಿನ ದತ್ತಾಂಶ ದೊರೆತಿದೆ. ವಿನ್ಜೊ ಅಲ್ಗಾರಿದಮ್ ತಿರುಚುವ ವ್ಯವಸ್ಥೆ ರೂಪಿಸಿರುವುದು ಪತ್ತೆಯಾಗಿದೆ. ಇದರಿಂದ 14 ತಿಂಗಳಲ್ಲಿ ಅಕ್ರಮವಾಗಿ ₹177 ಕೋಟಿ ಸಂಪಾದಿಸಲಾಗಿದ್ದು, ನೈಜ ಬಳಕೆದಾರರಿಗೆ ನಷ್ಟವಾಗಿದೆ. ಠೇವಣಿಗೆ ಅನಿಯಮಿತ ಅವಕಾಶ ಮಾಡಿಕೊಟ್ಟಿರುವ ವಿನ್ಜೊ ಗೆದ್ದ ಹಣ ಮಾತ್ರ ಪಡೆಯಲು ಅವಕಾಶ ನೀಡಿತ್ತು. ಬಳಕೆದಾರರ ವಾಲೆಟ್‌ಗಳನ್ನು ಸ್ವೇಚ್ಛೆಯಿಂದ ನಿರ್ಬಂಧಿಸಲಾಗಿದ್ದು, ₹43 ಕೋಟಿಯನ್ನು ಬಳಕೆದಾರರಿಗೆ ಪಾವತಿಸಬೇಕಿದೆ” ಎಂದರು.
ಮುಂದುವರಿದು, “ಈ ಹಣವನ್ನು ವಿವಿಧ ಖಾತೆಗಳ ಮೂಲಕ ಅಮೆರಿಕಾ ಮತ್ತು ಸಿಂಗಾಪುರದಲ್ಲಿರುವ ತನ್ನ ಸಹ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ. ಈ ಕಂಪನಿಗಳನ್ನು ಭಾರತದಿಂದಲೇ ನಿಯಂತ್ರಿಸಲಾಗುತ್ತಿದ್ದು, ಬಹುದೊಡ್ಡ ಪಾಲಿನ ಹಣವನ್ನು ಅಲ್ಲಿನ ಕಂಪನಿ ಮತ್ತು ಕ್ರಿಪ್ಟೊ ಕರೆನ್ಸಿ ವಾಲೆಟ್‌ಗೆ ವರ್ಗಾಯಿಸಲಾಗಿದೆ. ಹಣವನ್ನು ವರ್ಗಾಯಿಸುವುದನ್ನು ತಪ್ಪಿಸಲು ಮತ್ತು ಸಂಬಂಧಿತರಿಗೆ ಅದನ್ನು ವರ್ಗಾಯಿಸಲು ಬ್ಯಾಂಕ್ ಖಾತೆ ನಿರ್ಬಂಧಿಸಲಾಗಿದೆ” ಎಂದರು.
ವಿನ್ಜೊ ಪರ ಹಿರಿಯ ವಕೀಲ ಸಂದೇಶ್ ಚೌಟ ಅವರು “ನಿರ್ಬಂಧಿತ ಬ್ಯಾಂಕ್ ಖಾತೆಗಳನ್ನು ಬಿಡುಗಡೆ ಮಾಡಲು ಕಂಪನಿಯು ಬ್ಯಾಂಕ್ ಭದ್ರತೆ ನೀಡಲು ಸಿದ್ಧವಿದೆ” ಎಂದರು. ಇದಕ್ಕೆ ಇ ಡಿ ವಕೀಲರು ಸೂಚನೆ ಪಡೆಯಲು ಅವಕಾಶ ನೀಡಬೇಕು ಎಂದರು. ಇದನ್ನು ದಾಖಲಿಸಿದ ಪೀಠವು ಉಭಯ ಪಕ್ಷಕಾರರಿಗೆ ಅಗತ್ಯ ದಾಖಲೆ ಸಲ್ಲಿಸಲು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.