ಮನೆಯ ಹಿತ್ತಲಿನಲ್ಲಿ ವಾಣಿಜ್ಯ ದೃಷ್ಟಿಯಿಂದ ಗಾಂಜಾ ಬೆಳೆದ ಆರೋಪದಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದತಿ ಕೋರಿ 67 ವರ್ಷದ ಹಿರಿಯರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಆಸಕ್ತಿದಾಯಕ ವಾದಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಸಾಕ್ಷಿಯಾಯಿತು.
ಬೆಂಗಳೂರಿನ ಚಂದ್ರಶೇಖರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು “ಮನೆಯ ಹಿಂದಿನ ಜಾಗವನ್ನು ಬಳಕೆ ಮಾಡುತ್ತಿರಲಿಲ್ಲ. ಹೀಗಾಗಿ, ಅಲ್ಲಿ ಗಾಂಜಾ ಬೆಳೆದಿರುವ ಬಗ್ಗೆ ಅರಿವಿರಲಿಲ್ಲ. ಪರಾಗಸ್ಪರ್ಶದಿಂದ ಅಲ್ಲಿ ಗಾಂಜಾ ಬೆಳೆದಿರಬಹುದು” ಎಂದರು.
ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಪೀಠವು “27 ಕೆಜಿ 360 ಗ್ರಾಂನಷ್ಟು ಗಾಂಜಾ ಹಿತ್ತಲೆನಲ್ಲಿ ಸಿಕ್ಕಿದೆಯೇ? ನೀವು ಜಯನಗರದಲ್ಲಿ ವಾಸವಾಗಿದ್ದೀರಿ… ಅದೊಂದು ಕಾಂಕ್ರೀಟ್ ಕಾಡು. ಅಲ್ಲಿ ಹೇಗೆ ಪರಾಗ ಸ್ಪರ್ಶ ಸಾಧ್ಯ?” ಎಂದು ಪ್ರಶ್ನಿಸಿತು.
ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ವಕೀಲರು “ಆರೋಪಿಯು ಸಮಾಜದ ವಿರುದ್ಧ ಗಂಭೀರ ಅಪರಾಧ ಎಸಗಿದ್ದಾರೆ. ಆರೋಪಿಯು ಹಿರಿಯ ನಾಗರಿಕರಾಗಿದ್ದು, ಅವರ ವಿರುದ್ದ ಗಾಂಜಾ ಬೆಳೆದಿರುವುದಕ್ಕೆ ಪ್ರಕರಣ ದಾಖಲಿಸಬಹುದು. ಆದರೆ, ಗಾಂಜಾ ಸೇವನೆ ಅಥವಾ ಅಕ್ರಮ ಮಾರಾಟದ ಆರೋಪದ ಪ್ರಕರಣ ದಾಖಲಿಸಲಾಗದು ಎಂದು ಅರ್ಜಿದಾರರ ವಕೀಲರು ಹೇಳಿದ್ದಾರೆ" ಎಂದರು.
ಆಗ ಪೀಠವು ಅರ್ಜಿದಾರರ ಪರ ವಕೀಲರನ್ನು ಕುರಿತು “ಹಾಗಾದರೆ ಗಾಂಜಾ ಏಕೆ ಬೆಳೆದಿರಿ? ಅದು ಉತ್ಸಾಹದಿಂದ ಬೆಳೆದಿರಬೇಕಲ್ಲವೇ?” ಎಂದು ಕುಟುಕಿತು.
“ಮೊದಲಿಗೆ ನೀವು ಅಲ್ಲಿ (ಹಿತ್ತಲಿನಲ್ಲಿ) ಗಾಂಜಾ ಹೇಗೆ ಬೆಳೆಯಲಾರಂಭಿಸಿತು ಎಂಬುದನ್ನು ವಿವರಿಸಬೇಕು. ಪ್ರಕರಣದಲ್ಲಿ ಏನೂ ಇಲ್ಲ ಎಂದಾದರೆ ಅದನ್ನು ವಜಾ ಮಾಡಲಾಗುವುದು” ಎಂದ ಪೀಠವು ಮುಂದಿನ ವಿಚಾರಣೆ ವೇಳೆಗೆ ವಿವರಣೆ ನೀಡುವಂತೆ ಡಿಸೆಂಬರ್ 4ಕ್ಕೆ ಮುಂದೂಡಿತು.