A1
ಸುದ್ದಿಗಳು

ಬ್ಲಿಂಕಿಟ್ ವಾಣಿಜ್ಯ ಚಿಹ್ನೆ ವಿವಾದ: ವಿಚಾರಣಾ ನ್ಯಾಯಾಲಯದ ಮಧ್ಯಂತರ ತಡೆಯಾಜ್ಞೆ ಬದಿಗೆ ಸರಿಸಿದ ಕರ್ನಾಟಕ ಹೈಕೋರ್ಟ್

ನಿಜವಾಗಿಯೂ ವ್ಯವಹಾರ ಮಾಡದೆ ಕೇವಲ ವಾಣಿಜ್ಯ ಚಿಹ್ನೆ ತನ್ನದೆಂದು ಹೇಳಿದರೆ ಅದನ್ನು ನಿರ್ಣಾಯಕ ಸಾಕ್ಷ್ಯ ಎಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ನುಡಿಯಿತು.

Bar & Bench

ʼಬ್ಲಿಂಕ್‌ಹಿಟ್‌ʼ ಹೆಸರಿನ ಸಾಫ್ಟ್‌ವೇರ್‌ ಸೇವಾ ಸಂಸ್ಥೆಯ ವಾಣಿಜ್ಯ ಚಿಹ್ನೆ ಉಲ್ಲಂಘಿಸಿದ ಪ್ರಕರಣದಲ್ಲಿ (ಜೊಮ್ಯಾಟೊ ಮಾಲಿಕತ್ವದ) ಆನ್‌ಲೈನ್‌ ದಿನಸಿ ವಿತರಣಾ ವೇದಿಕೆಯಾದ  ʼಬ್ಲಿಂಕಿಟ್‌ʼ ವಾಣಿಜ್ಯ ಚಿಹ್ನೆಗೆ ತಾತ್ಕಾಲಿಕ ನಿರ್ಬಂಧ ಹೇರಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಬದಿಗೆ ಸರಿಸಿದೆ.

ಬ್ಲಿಂಕ್‌ಹಿಟ್‌ ಪಡೆದಿರುವ ವಾಣಿಜ್ಯ ಚಿಹ್ನೆಯ ಹೆಸರಿನಲ್ಲಿ ಯಾವುದೇ ವ್ಯವಹಾರ ನಡೆದಿಲ್ಲ ಮತ್ತು ಯಾವುದೇ ಬಗೆಯ ಆದಾಯ ಸೃಷ್ಟಿಯಾಗಿಲ್ಲ ಎಂದು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಆದಷ್ಟು ತ್ವರಿತವಾಗಿ ಅಂದರೆ ಆದೇಶದ ಪ್ರತಿ ಸ್ವೀಕರಿಸಿದ ಒಂದು ವರ್ಷದ ಅವಧಿಯೊಳಗೆ ವಿಲೇವಾರಿ ಮಾಡಬೇಕು ಎಂದು ಪೀಠ ಇದೇ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯಕ್ಕೆ  ನಿರ್ದೇಶಿಸಿದೆ.

ತಾನು 2016ನೇ ಇಸವಿಯಲ್ಲೇ ʼಬ್ಲಿಂಕ್‌ಹಿಟ್‌ʼ ಮತ್ತು ʼಐಬ್ಲಿಂಕ್‌ಹಿಟ್‌ʼ ಹೆಸರುಗಳನ್ನು ವಾಣಿಜ್ಯ ಚಿಹ್ನೆಯಾಗಿ ನೋಂದಾಯಿಸಿಕೊಂಡಿದ್ದೆ. ಆದರೆ ತನ್ನ ವಾಣಿಜ್ಯ ಚಿಹ್ನೆಯನ್ನೇ ಹೋಲುವ ವಾಣಿಜ್ಯ ಚಿಹ್ನೆಯನ್ನು ದಿನಸಿ ವಿತರಣಾ ವೇದಿಕೆ ಬ್ಲಿಂಕಿಟ್‌ ಬಳಸುತ್ತಿದೆ ಎಂದು ಸಾಫ್ಟ್‌ವೇರ್‌ ಕಂಪೆನಿ ಬ್ಲಿಂಕ್‌ಹಿಟ್ ಅಹವಾಲು ಸಲ್ಲಿಸಿತ್ತು.

ಆದರೆ ಈ ಮೇಲ್ಮನವಿಯನ್ನು ಹೈಕೋರ್ಟ್‌ ಪುರಸ್ಕರಿಸಲಿಲ್ಲ. ಜೊತೆಗೆ, ಎರಡೂ ಕಂಪೆನಿಗಳ ವ್ಯವಹಾರ ಸಂಪೂರ್ಣ ಭಿನ್ನವಾಗಿದ್ದು ಅನುಕೂಲದ ಸಮತೋಲನ ಎಂಬುದು ದಿನಸಿ ವಿತರಣಾ ವೇದಿಕೆಯಾದ ಬ್ಲಿಂಕಿಟ್‌ ಪರವಾಗಿ ನಿಲ್ಲುತ್ತದೆ ಎಂದು ನ್ಯಾಯಾಲಯ ಹೇಳಿತು.

“ತನ್ನ ವ್ಯವಹಾರಕ್ಕಾಗಿ ವಾಣಿಜ್ಯ ಚಿಹ್ನೆಯಾದ ಬ್ಲಿಂಕಿಟ್‌ ಪದವನ್ನು ಬಳಸುವ ಮೊದಲೇ ಬ್ಲಿಂಕ್‌ಹಿಟ್‌ ನೋಂದಾಯಿತ ವಾಣಿಜ್ಯ ಚಿಹ್ನೆಯನ್ನು ಪಡೆದುಕೊಂಡಿತ್ತು. ಆದರೂ ಬ್ಲಿಂಕ್‌ಹಿಟ್‌ನ ಹಣಕಾಸಿನ ದಾಖಲೆಗಳು ಅದು ಯಾವುದೇ ವ್ಯಾಪಾರ ಚಟುವಟಿಕೆ ನಡೆಸಿಲ್ಲ ಇಲ್ಲವೇ ವಾಣಿಜ್ಯ ಚಿಹ್ನೆಯನ್ನು ಆಧರಿಸಿ ಆದಾಯ ಗಳಿಸಿಲ್ಲ ಎಂಬುದನ್ನು ಬಹಿರಂಗಪಡಿಸಿವೆ” ಎಂಬುದಾಗಿ ನ್ಯಾಯಾಲಯ ವಿವರಿಸಿತು. ನಿಜವಾಗಿಯೂ ವ್ಯವಹಾರ ಮಾಡದೆ ಕೇವಲ ವಾಣಿಜ್ಯ ಚಿಹ್ನೆ ತನ್ನದೆಂದು ಹೇಳಿದರೆ ಅದನ್ನು ನಿರ್ಣಾಯಕ ಸಾಕ್ಷ್ಯ ಎಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ನುಡಿಯಿತು.

ದಿನಸಿ ವಿತರಣಾ ವೇದಿಕೆ ಬ್ಲಿಂಕಿಟ್‌ ಪರವಾಗಿ ಹಿರಿಯ ನ್ಯಾಯವಾದಿ ಉದಯ್‌ ಹೊಳ್ಳ ಮತ್ತು ಧ್ಯಾನ್‌ ಚಿನ್ನಪ್ಪ ವಾದ ಮಂಡಿಸಿದ್ದರು. ಮೇಲ್ಮನವಿ ಸಲ್ಲಿಸಿದ್ದ ಬ್ಲಿಂಕ್‌ಹಿಟ್‌ ಸಾಫ್ಟ್‌ವೇರ್‌ ಕಂಪೆನಿಯನ್ನು ವಕೀಲರಾದ ರಿಷಿ ಅನೇಜ ಪ್ರತಿನಿಧಿಸಿದ್ದರು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Blinkhit v. Blinkit.pdf
Preview