Karnataka High Court, EPFO 
ಸುದ್ದಿಗಳು

ವಿದೇಶಿ ಉದ್ಯೋಗಿಗಳಿಗೆ ಇಪಿಎಫ್‌ಒ ಯೋಜನೆ ವಿಸ್ತರಣೆ ರದ್ದುಗೊಳಿಸಿದ ಹೈಕೋರ್ಟ್‌

ಕರ್ನಾಟಕ ಹೈಕೋರ್ಟ್‌ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರವು ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದನ್ನು ಸಕ್ರಿಯವಾಗಿ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮೂಲಕ ತಿಳಿಸಿದೆ.

Bar & Bench

ನೌಕರರ ಭವಿಷ್ಯ ನಿಧಿ (ಇಪಿಎಫ್‌) ಯೋಜನೆ ಮತ್ತು ನೌಕರರ ಪಿಂಚಣಿ (ಇಪಿ) ಯೋಜನೆಯನ್ನು ಭಾರತದಲ್ಲಿರುವ ವಿದೇಶಿ ಕಾರ್ಮಿಕರಿಗೆ ವಿಸ್ತರಿಸಿ 2008ರಲ್ಲಿ ಕೇಂದ್ರ ಸರ್ಕಾರ ಕೈಗೊಂಡಿದ್ದ ನಿರ್ಧಾರವನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ ರದ್ದುಪಡಿಸಿದ್ದು, ಅದು ಅಸಾಂವಿಧಾನಿಕ ಮತ್ತು ಸ್ವೇಚ್ಛೆಯ ಕ್ರಮ ಎಂದಿದೆ.

ನೌಕರರ ಭವಿಷ್ಯ ನಿಧಿ ಮತ್ತು ವಿವಿಧ ಪ್ರಾವಧಾನಗಳ ಕಾಯಿದೆಯು (ಇಪಿಎಫ್‌ ಮತ್ತು ಎಂಪಿ ಕಾಯಿದೆ) ಕೇಂದ್ರ ಸರ್ಕಾರಕ್ಕೆ ಭವಿಷ್ಯ ನಿಧಿ ಯೋಜನೆಯಲ್ಲಿ ಮಾರ್ಪಾಡು ಮಾಡಲು ಅವಕಾಶ ಕಲ್ಪಿಸುತ್ತದೆ. ಆದರೆ, ಆ ಅಧಿಕಾರವನ್ನು ಶಾಸನದ ಉದ್ದೇಶಗಳನ್ನು ಪೂರೈಸಲು ಮಾತ್ರವೇ ಬಳಸಬೇಕು ಎಂದು ನ್ಯಾಯಮೂರ್ತಿ ಕೆ ಎಸ್‌ ಹೇಮಲೇಖಾ ಹೇಳಿದ್ದಾರೆ.

“ಇಪಿಎಫ್‌ ಮತ್ತು ಎಂಪಿ ಕಾಯಿದೆಯನ್ನು ಕಡಿಮೆ ವೇತನ ಪಡೆಯುವವರಿಗೆ ನಿವೃತ್ತಿಯ ಬಳಿಕ ಅನುಕೂಲವಾಗಿಸಲು ರೂಪಿಸಲಾಗಿದೆಯೇ ವಿನಾ ತಿಂಗಳಿಗೆ ಲಕ್ಷಾಂತರ ರೂಪಾಯಿ ವೇತನ ಪಡೆಯುವವರಿಗಾಗಿ ರೂಪಿಸಲಾಗಿಲ್ಲ” ಎಂದು ವಿದೇಶಿ ಕೆಲಸಗಾರರನ್ನು ಉಲ್ಲೇಖಿಸಿ ನ್ಯಾಯಾಲಯ ಹೇಳಿದೆ.

ಇಪಿಎಫ್ ಮತ್ತು ಎಂಪಿ ಕಾಯಿದೆಯು ಕಟ್ಟುನಿಟ್ಟಾದ ನಿಬಂಧನೆಗಳನ್ನು ಹೊಂದಿದೆ. ಅದರ ಅಡಿಯಲ್ಲಿ ಇಪಿಎಫ್ ಸಂಸ್ಥೆ ಅಥವಾ ಇಪಿಎಫ್‌ಒನ ಉದ್ಯೋಗಿಗಳು ಸರಿಯಾಗಿ ಅನುಪಾಲನೆ ಮಾಡದಿದ್ದಲ್ಲಿ ಭಾರಿ ದಂಡ ವಿಧಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ನಿರ್ದಿಷ್ಟ ಉದ್ಯೋಗಿಗಳಿಗೆ ರೂಪಿಸಲಾಗಿರುವ ಯೋಜನೆಯನ್ನು ಭಾರಿ ಹಣ ಸಂಪಾದಿಸುವ ಶ್ರೀಮಂತ ವಿದೇಶಿ ಉದ್ಯೋಗಿಗಳ ಅವಶ್ಯಕತೆ ಪೂರೈಸಲು ಅನುಮತಿಸಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಭಾರತದಿಂದ ಹೊರ ದೇಶಕ್ಕೆ ಸೇವೆಯ ಮೇಲೆ ನಿಯೋಜಿಸುವ ಉದ್ಯೋಗಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಕಾಯಿದೆ ರೂಪಿಸಲಾಗಿದೆ. ಆ ದೇಶದಲ್ಲಿ ಅಸಮಾನ ಸಾಮಾಜಿಕ ಭದ್ರತೆ ಉಂಟಾಗದಿರಲಿ ಎಂದು ಕಾಯಿದೆ ರೂಪಿಸಲಾಗಿದೆ. ಭಾರತದ ಜೊತೆ ಒಪ್ಪದ ಮಾಡಿಕೊಳ್ಳುವ ಮೂಲಕ ಬೇರೆ ದೇಶದ ಪ್ರಜೆಗಳು ಭಾರತದಲ್ಲಿ ಕೆಲಸ ಮಾಡುವಾಗ ಅವರನ್ನು ಅನ್ಯೂನ್ಯತೆಯಿಂದ ಕಾಣಲಾಗುವುದು ಎಂದು ಆ ದೇಶಗಳಲ್ಲಿ ಪ್ರೇರಣೆ ಉಂಟು ಮಾಡುವ ಉದ್ದೇಶವೂ ಇದೆ. ಆದರೆ, ಇಪಿಎಫ್‌ ಮತ್ತು ಎಂಪಿ ಕಾಯಿದೆ ಅಡಿ ಮಾಸಿಕ 15,000 ರೂಪಾಯಿ ಪಡೆಯುವವರು ಇಪಿಎಫ್‌ ಯೋಜನೆಯ ಸದಸ್ಯತ್ವ ಪಡೆಯಬಹುದು. ವಿಪರ್ಯಾಸವೆಂದರೆ, ವಿದೇಶಿ ಕಾರ್ಮಿಕರಿಗೆ ಈ ವೇತನ ಮಿತಿ ಇಲ್ಲ ಎನ್ನುವ ಅಂಶದತ್ತ ನ್ಯಾಯಾಲಯ ಬೆರಳು ಮಾಡಿತು.

2008ರಲ್ಲಿ ಅಂತಾರಾಷ್ಟ್ರೀಯ ಉದ್ಯೋಗಿಗಳಿಗೆ ವಿಸ್ತರಿಸಿದ್ದ ಇಪಿಎಫ್‌ ಯೋಜನೆಯ ಪ್ಯಾರಾ 83 ಮತ್ತು ಇಪಿ ಯೋಜನೆಯ ಪ್ಯಾರಾ 43ಎ ಅನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿ, ನ್ಯಾಯಾಲಯ ಆದೇಶ ಮಾಡಿದೆ.

ಭಾರತದಲ್ಲಿ ವಿದೇಶಿ ಉದ್ಯೋಗಿಗಳು ನಿರ್ದಿಷ್ಟ ಕಾಲಾವಧಿಗೆ ಮಾತ್ರ ಕಾರ್ಯನಿರ್ವಹಿಸಲಿದ್ದು, ಅವರಿಗೆ ಭವಿಷ್ಯ ನಿಧಿಗೆ ಹಣ ಸಂದಾಯ ಮಾಡುವುದರಿಂದ ತಮಗೆ ಹಾನಿಯಾಗುತ್ತದೆ. ವಿದೇಶಿ ಕೆಲಸಗಾರರು ಪ್ರತ್ಯೇಕ ವರ್ಗಕ್ಕೆ ಸೇರುತ್ತಾರೆ ಎಂದು ಅರ್ಜಿದಾರ ಸಂಸ್ಥೆಗಳು ಮತ್ತು ಉದ್ಯೋಗಿಗಳು ಆಕ್ಷೇಪಿಸಿದ್ದರು.