Karnataka High Court
Karnataka High Court  Bar and Bench
ಸುದ್ದಿಗಳು

180 ವೈದ್ಯರಿಗೆ ಕಡ್ಡಾಯ ಗ್ರಾಮೀಣ ಸೇವೆ: ರಾಜ್ಯ ಸರ್ಕಾರಕ್ಕೆ ಎರಡು ವಾರಗಳ ಕಾಲ ನಿರ್ಬಂಧ ವಿಧಿಸಿದ ಕರ್ನಾಟಕ ಹೈಕೋರ್ಟ್

Bar & Bench

ಕಡ್ಡಾಯ ಗ್ರಾಮೀಣ ಸೇವೆಗಾಗಿ ಆನ್‌ಲೈನ್‌ ಮೂಲಕ ನೋಂದಾಯಿಸಿಕೊಳ್ಳುವಂತೆ ಕರ್ನಾಟಕ ಸರ್ಕಾರ ಒತ್ತಾಯಿಸಬಾರದು ಎಂದು ರಾಜ್ಯ ಹೈಕೋರ್ಟ್‌ ಎರಡು ವಾರಗಳ ಕಾಲ ನಿರ್ಬಂಧ ವಿಧಿಸಿದೆ.

ಸರ್ಕಾರ ಎರಡು ವಾರಗಳ ವರೆಗೆ ಪ್ರಕರಣದ ಬಗ್ಗೆ ತ್ವರಿತ ನಿರ್ಧಾರ ತೆಗೆದುಕೊಳ್ಳಬಾರದು ಎಂದು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ತಮ್ಮ ಮಧ್ಯಂತರ ಆದೇಶದಲ್ಲಿ ಸೂಚಿಸಿದರು.

“ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು ಇನ್ನೂ ತಮ್ಮ ವಾದ ಪೂರ್ಣಗೊಳಿಸಬೇಕಿರುವುದರಿಂದ ಮತ್ತು ನ್ಯಾಯಾಲಯ ಅರ್ಜಿದಾರರ ಪರ ವಕೀಲರ ವಾದ ಆಲಿಸಬೇಕಿರುವುದರಿಂದ ಮೊದಲ ಪ್ರತಿವಾದಿ- ರಾಜ್ಯ ಸರ್ಕಾರ ಕೇವಲ ಎರಡು ವಾರಗಳ ಅವಧಿಗೆ ಅನುಬಂಧ- ಎ ಪ್ರಕಾರ ಆಕ್ಷೇಪಾರ್ಹ ಅಧಿಸೂಚನೆ ಅನುಸರಿಸಿ ತ್ವರಿತ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸೂಚಿಸಲಾಗಿದೆ” ಎಂಬುದಾಗಿ ಆದೇಶ ತಿಳಿಸಿದೆ.

ಅರ್ಜಿದಾರರಿಗೆ ಮಾತ್ರ ಈ ಆದೇಶ ಅನ್ವಯವಾಗಲಿದ್ದು ಉಳಿದವರಿಗೆ ಅಲ್ಲ ಎಂದು ಕೂಡ ನ್ಯಾಯಾಲಯ ಇದೇ ವೇಳೆ ಸ್ಪಷ್ಟಪಡಿಸಿದೆ. ಆದರೂ, ಅನುಬಂಧ- ಎ ಪ್ರಕಾರ ಅಧಿಸೂಚನೆಯನ್ನು ಅನುಷ್ಠಾನಗೊಳಿಸಲು ಪ್ರತಿವಾದಿ-ರಾಜ್ಯ ಸರ್ಕಾರ ಮುಕ್ತವಾಗಿದೆ” ಎಂದು ಅದು ಹೇಳಿದೆ.

ಸರ್ಕಾರಿ ಸೀಟು ಪಡೆದ ಮತ್ತು 2021ರ ಶೈಕ್ಷಣಿಕ ಸಾಲಿನಲ್ಲಿ ಎಂಬಿಬಿಎಸ್‌ ಪೂರೈಸಿದವರು ಕಡ್ಡಾಯ ಗ್ರಾಮೀಣ ಸೇವೆಗಾಗಿ ಆನ್‌ಲೈನ್‌ ಮೂಲಕ ನೋಂದಾಯಿಸಿಕೊಳ್ಳುವಂತೆ ಸರ್ಕಾರ ಜೂನ್ 8 ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಕಡ್ಡಾಯ ಗ್ರಾಮೀಣ ಸೇವೆ ಎಂಬುದು ಕರ್ನಾಟಕ ವೈದ್ಯಕೀಯ ಪದವಿ ಪೂರೈಸಿದ ಅಭ್ಯರ್ಥಿಗಳಿಂದ ಕಡ್ಡಾಯ ಸೇವಾ ಕಾಯಿದೆ-2012ರ ನಿಬಂಧನೆಗಳ ಅಡಿ ರೂಪಿಸಲಾದ ಪರಿಕಲ್ಪನೆಯಾಗಿದೆ.

ಬುಶ್ರೀ ಅಬ್ದುಲ್ ಅಲೀಮ್ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣದಲ್ಲಿ, ಹೈಕೋರ್ಟ್ ಈ ಕಾಯಿದೆಯ ಸಿಂಧುತ್ವವನ್ನು ಎತ್ತಿ ಹಿಡಿದಿದೆ. ಆದರೆ, 2015ರ ಜುಲೈ 24ರಂದು ಕಾಯಿದೆ ಜಾರಿಗೆ ಬಂದಿದ್ದು ಅದಕ್ಕೂ ಮೊದಲು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆದ ಅಭ್ಯರ್ಥಿಗಳಿಗೆ ಈ ಕಾನೂನು ಅನ್ವಯಿಸುವುದಿಲ್ಲ ಎಂದು ಅದು ತೀರ್ಪು ನೀಡಿತ್ತು.

ಇದಲ್ಲದೆ, 2019ರಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯಿದೆ (ಎನ್‌ಎಂಸಿಕಾಯಿದೆ) ಜಾರಿಗೆಬಂದಿದ್ದು, ಇದರ ಪರಿಣಾಮವಾಗಿ ವೈದ್ಯಕೀಯ ಶಿಕ್ಷಣ ನಿಯಂತ್ರಣವನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಎನ್‌ಎಂಸಿ ಕಾಯಿದೆ ಜಾರಿಗೆ ಬಂದಿರುವುದರಿಂದ, ವೈದ್ಯಕೀಯ ಕಾಲೇಜುಗಳ ಪ್ರವೇಶ ನಿಯಂತ್ರಿಸುವ ರಾಜ್ಯ ಸರ್ಕಾರಗಳು ತಮ್ಮ ಹಕ್ಕು ಕಳೆದುಕೊಂಡಿವೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನ ಸೆಳೆದಿದ್ದಾರೆ.

ಜೂನ್ 6ರಂದು ಸರ್ಕಾರ ಹೊರಡಿಸಿದ ಅಧಿಸೂಚನೆ 2012ರ ನಿಬಂಧನೆಗಳಿಗೆ ಅನುಸಾರವಾಗಿದ್ದು ಕಾನೂನಿನಲ್ಲಿ ಅದಕ್ಕೆ ಅಸ್ತಿತ್ವವಿಲ್ಲ ಎಂದು ವಾದಿಸಲಾಗಿದೆ. ಪ್ರಕರಣದ ವಿಚಾರಣೆ ಗುರುವಾರ ಮುಂದುವರೆಯಲಿದೆ.