Justice K S Hemalekha 
ಸುದ್ದಿಗಳು

ನ್ಯಾಯಮೂರ್ತಿಗಳ ಕಡೆಗೆ ಕಡತ ಬಿಸಾಡಿ ದುರ್ನಡತೆ: ವಕೀಲನ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ನಿರ್ದೇಶನ

ʼಪರಿಣಾಮದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲʼ ಎಂದಿದ್ದಲ್ಲದೇ ಕಠಿಣ ಮತ್ತು ಆಕ್ಷೇಪಾರ್ಹದ ಮಾತುಗಳನ್ನ ಆಡಿದ್ದ ವಕೀಲ ಎಂ ವೀರಭದ್ರಯ್ಯ ಕಡತಗಳನ್ನು ಬಿಸಾಡಿದ್ದಾರೆ ಎಂದು ನ್ಯಾಯಮೂರ್ತಿ ಕೆ ಎಸ್‌ ಹೇಮಲೇಖಾ ಆದೇಶದಲ್ಲಿ ದಾಖಲಿಸಿದ್ದಾರೆ.

Bar & Bench

ತಮ್ಮ ಕಕ್ಷಿದಾರರ ಅರ್ಜಿ ತಿರಸ್ಕರಿಸಿದ್ದಕ್ಕೆ ಪ್ರತೀಕಾರವಾಗಿ ವಕೀಲರೊಬ್ಬರು ನ್ಯಾಯಮೂರ್ತಿ ವಿರುದ್ಧ ತಿರುಗಿಬಿದ್ದುದಲ್ಲದೇ ಕಡತಗಳನ್ನು ಎಸೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ʼಪರಿಣಾಮದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲʼ ಎಂದಿದ್ದಲ್ಲದೇ ಕಠಿಣ ಮತ್ತು ಆಕ್ಷೇಪಾರ್ಹದ ಮಾತುಗಳನ್ನ ಆಡಿದ್ದ ವಕೀಲ ಎಂ ವೀರಭದ್ರಯ್ಯ ಅವರು ಕಡತಗಳನ್ನು ಬಿಸಾಡಿದ್ದಾರೆ ಎಂದು ನ್ಯಾಯಮೂರ್ತಿ ಕೆ ಎಸ್‌ ಹೇಮಲೇಖಾ ಅವರು ಆದೇಶದಲ್ಲಿ ದಾಖಲಿಸಿದ್ದಾರೆ.

“ವಕೀಲರ ನಡೆತ ಮತ್ತು ಕೃತ್ಯವು ನ್ಯಾಯಾಲಯದ ಘನತೆಗೆ ಚ್ಯುತಿ ಉಂಟು ಮಾಡಿದ್ದು, ಇದು ನ್ಯಾಯಾಂಗ ಪ್ರಕ್ರಿಯೆ ಅಥವಾ ನ್ಯಾಯದಾನಕ್ಕೆ ಅಡ್ಡಿ ಉಂಟು ಮಾಡಿದೆ. ವಕೀಲರ ಕೃತ್ಯವು ನ್ಯಾಯಾಲಯದ ಸಾಮಾನ್ಯ ಪ್ರಕ್ರಿಯೆ ಮತ್ತು ಕಾರ್ಯವಿಧಾನದಲ್ಲಿ ಹಸ್ತಕ್ಷೇಪ ಮಾಡುವುದರ ಜೊತೆಗೆ ನ್ಯಾಯಾಲಯದ ಘನತೆಗೆ ಹಾನಿ ಮಾಡಿದೆ” ಎಂದು ಆದೇಶದಲ್ಲಿ ದಾಖಲಿಸಲಾಗಿದೆ.

“ಆರೋಪಿ ವಕೀಲರನ್ನು ಹಲವು ಬಾರಿ ಗಮನಿಸಿದ್ದು, ಅವರ ದುರಹಂಕಾರ ಪ್ರವೃತ್ತಿಯನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ” ಎಂದು ಹೇಳಲಾಗಿದೆ.

  • ದುರ್ನಡತೆ: ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ವೀರಭದ್ರಯ್ಯ ಅವರು ಕಡತಗಳನ್ನು ಬಿಸಾಡಿದ್ದಾರೆ.

  • ದುರಹಂಕಾರ: ನಿರ್ದೇಶನ ನೀಡುವ ರೀತಿಯಲ್ಲಿ ಪೀಠದ ಬಗ್ಗೆ ಏಕವಚನ ಬಳಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೀಠವು ಮಾತಿನ ಬಗ್ಗೆ ಎಚ್ಚರವಹಿಸುವಂತೆ ಎಚ್ಚರಿಸಿದೆ. ಇದಕ್ಕೆ ಪರಿಣಾಮದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ವೀರಭದ್ರಯ್ಯ ಹೇಳಿದ್ದು, ಕಡತ ಎಸೆದು ಕೋರ್ಟ್‌ನಿಂದ ಹೊರಹೋಗಿದ್ದಾರೆ.

  • ಹಿಂದಿರುಗಿ ಮಾತನಾಡುವುದು: ಪ್ರಕರಣದ ಅರ್ಹತೆಗೆ ಸಂಬಂಧಿಸಿದಂತೆ ವಾದಿಸುವಂತೆ ಹಲವು ಬಾರಿ ಪೀಠ ಸೂಚಿಸಿದರೂ ಅದಕ್ಕೆ ನಿರಾಕರಿಸಿ ಏರುಧ್ವನಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

  • ನ್ಯಾಯಾಲಯದ ನಿಯಮ ಉಲ್ಲಂಘನೆ: ಆದೇಶ ಮಾಡುವಾಗ ಮಧ್ಯಪ್ರವೇಶಿಸಿ, ನಿರಂತರವಾಗಿ ನ್ಯಾಯಾಲಯದ ಪ್ರಕ್ರಿಯೆ ಅಡ್ಡಿಪಡಿಸಿದ್ದಾರೆ ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

ಪ್ರಕರಣದ ಹಿನ್ನೆಲೆ: ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಪರವಾಗಿ ಸಲ್ಲಿಕೆಯಾಗಿದ್ದ ಕೇವಿಯಟ್‌ ಅರ್ಜಿಗೆ ಆಕ್ಷೇಪಿಸಿ ಅಣ್ಣಾದೊರೈ (ಅರ್ಜಿದಾರ) ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಅರ್ಜಿದಾರ ಯಾವುದೇ ಅರ್ಜಿ ದಾಖಲಿಸಿದರೂ ತಮ್ಮ ಗಮನಕ್ಕೆ ತರಬೇಕು ಎಂದು ಬಿಇಎಲ್‌ ಪರವಾಗಿ ಅದರ ವ್ಯವಸ್ಥಾಪಕ ನಿರ್ದೇಶಕರು ಕೇವಿಯಟ್‌ ಅರ್ಜಿ ಸಲ್ಲಿಸಿದ್ದರು. ವ್ಯವಸ್ಥಾಪಕ ನಿರ್ದೇಶಕರು ಅಥವಾ ಕೇವಿಯಟರ್‌ಗೆ ಬಿಇಎಲ್‌ ಪರವಾಗಿ ಕೇವಿಯಟ್‌ ಅರ್ಜಿ ಸಲ್ಲಿಸುವ ಅಧಿಕಾರವಿದೆಯೇ ಎಂದು ಅರ್ಜಿದಾರರು ಪ್ರಶ್ನಿಸಿದ್ದರು. ಈ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿ 10 ಸಾವಿರ ರೂಪಾಯಿ ದಂಡವನ್ನು ಕಾನೂನು ಸೇವಾ ಪ್ರಾಧಿಕಾರಕ್ಕೆ ನಾಲ್ಕು ವಾರದಲ್ಲಿ ಪಾವತಿಸುವಂತೆ ಸೂಚಿಸಿತ್ತು. ಅಲ್ಲದೇ, ಅರ್ಜಿಯ ಅರ್ಹತೆಯ ಕುರಿತು ವಾದಿಸುವಂತೆ ಅರ್ಜಿದಾರರಿಗೆ ನ್ಯಾಯಾಲಯ ಸೂಚಿಸಿತ್ತು. ಇದರಿಂದ ಕುಪಿತಗೊಂಡ ವಕೀಲ ಏರುಧ್ವನಿಯಲ್ಲಿ ನ್ಯಾಯಾಲಯದ ಕುರಿತು ಆಕ್ಷೇಪಾರ್ಹವಾಗಿ ಮಾತನಾಡಿದ್ದರು.

ಅರ್ಜಿದಾರ ವಕೀಲರು ಮೂಲ ಪ್ರಕರಣವನ್ನು ವಿಳಂಬಿಸುವ ಉದ್ದೇಶದಿಂದ ಹಲವು ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂಬುದು ಆದೇಶವನ್ನು ತಿರುವಿ ಹಾಕಿದರೆ ತಿಳಿಯುತ್ತದೆ ಎಂದು ಆದೇಶದಲ್ಲಿ ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ವಕೀಲ ವೀರಭದ್ರಯ್ಯ ವಿರುದ್ಧ ನ್ಯಾಯಾಂಗ ನಿಂದನೆ ಕಾಯಿದೆ ಸೆಕ್ಷನ್‌ 2(ಸಿ) ಅಡಿ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಕ್ರಮಕೈಗೊಳ್ಳುವಂತೆ ನ್ಯಾಯಾಂಗ ರಿಜಿಸ್ಟ್ರಾರ್‌ ಜನರಲ್‌ಗೆ ಪೀಠ ಆದೇಶಿಸಿದೆ.

ತಮ್ಮ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ಸೂಕ್ತ ಆದೇಶಕ್ಕಾಗಿ ಮಂಡಿಸಬೇಕು ಎಂದು ನ್ಯಾ. ಹೇಮಲೇಖಾ ಹೇಳಿದ್ದು, ಈ ಆದೇಶದ ಪ್ರತಿಯನ್ನು ರಾಜ್ಯ ವಕೀಲರ ಪರಿಷತ್‌ಗೂ ಕಳುಹಿಸಿಕೊಡುವಂತೆ ನಿರ್ದೇಶಿಸಿದ್ದಾರೆ.