ಅಪ್ರಾಪ್ತ ವಯಸ್ಸಿನ ಮಗ ಕಾರು ಚಲಾಯಿಸಿ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ತಂದೆಯ ವಿರುದ್ಧದ ಕೊಲೆ ಉದ್ದೇಶವಿಲ್ಲದ ಅಪರಾಧಿಕ ನರಹತ್ಯೆ ಆರೋಪವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.
ಮಗನಿಗೆ ಕಾರು ಚಲಾಯಿಸಲು ಅವಕಾಶ ನೀಡಿದ ತಂದೆಯ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ, ಪ್ರಾಥಮಿಕವಾಗಿ ವಿಚಾರಣೆ ಮುಂದುವರಿಸಲು ಅಗತ್ಯವಾದ ಸಾಕ್ಷ್ಯಾಧಾರಗಳು ಆರೋಪಪಟ್ಟಿಯಲ್ಲಿವೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅಭಿಪ್ರಾಯಪಟ್ಟಿದೆ.
“ತನ್ನ ಮಗುವಿನ ಕೈಗೆ ಸ್ಟೀರಿಂಗ್ ವೀಲ್ ಅನ್ನು ತಿಳಿದೂ ಕೊಡುವ ಪೋಷಕರು ಆ ಸಾಹಸವು ದುರಂತದಲ್ಲಿ ಅಂತ್ಯಗೊಂಡಾಗ ಮಗುವಿನ ಅಪ್ರಾಪ್ತ ವಯಸ್ಸಿನ ಹಿಂದೆ ಯಾವಾಗಲೂ ಅಡಗಿಕೊಳ್ಳಲು ಸಾಧ್ಯವಿಲ್ಲ. ಪೋಷಕತ್ವದಲ್ಲಿ ಕೇವಲ ಪ್ರೀತಿ ಮತ್ತು ಅಧಿಕಾರವಷ್ಟೇ ಅಲ್ಲ, ಜವಾಬ್ದಾರಿಯೂ ಇರುತ್ತದೆ. ರಸ್ತೆಗಳು ಸಾರ್ವಜನಿಕರಿಗೆ ಸೇರಿದ ಸ್ಥಳಗಳೇ ಹೊರತು, ಕಾನೂನುಬಾಹಿರ ಸ್ವೇಚ್ಛಾಚಾರಕ್ಕೆ ತರಬೇತಿ ನೀಡುವ ಮೈದಾನಗಳಲ್ಲ” ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ: 2020ರ ಡಿಸೆಂಬರ್ 10ರಂದು ಮೈಸೂರು–ಬೆಂಗಳೂರು ರಸ್ತೆಯಲ್ಲಿ ಈ ಅಪಘಾತ ಸಂಭವಿಸಿತ್ತು. ನದೀಮ್ ಉರ್ ರೆಹಮಾನ್ ಅವರ 14 ವರ್ಷದ ಮಗ ವೋಕ್ಸ್ವ್ಯಾಗನ್ ವೆಂಟೊ ಕಾರು ಚಲಾಯಿಸುತ್ತಿದ್ದಾಗ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದರು.
ಆರಂಭದಲ್ಲಿ ಪೊಲೀಸರು ಅಜಾಗರೂಕ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪಗಳಡಿ ಪ್ರಕರಣ ದಾಖಲಿಸಿದ್ದರು. ನಂತರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ರ ಭಾಗ-II ಅನ್ನು ಸೇರಿಸಲಾಗಿತ್ತು. ಈ ಸೆಕ್ಷನ್, ಕೊಲೆ ಉದ್ದೇಶವಿಲ್ಲದ ಅಪರಾಧಿಕ ನರಹತ್ಯೆಗೆ ಸಂಬಂಧಿಸಿದೆ.
ಈ ಪ್ರಕರಣದಲ್ಲಿ ತಂದೆಯನ್ನು ಎರಡನೇ ಆರೋಪಿಯನ್ನಾಗಿ ಮಾಡಲಾಗಿತ್ತು. ವಿಚಾರಣಾ ನ್ಯಾಯಾಲಯವು ಆರೋಪದಿಂದ ಬಿಡುಗಡೆ ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ, ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅಪಘಾತ ನಡೆದ ದಿನ ತಂದೆಯೇ ಮಗನಿಗೆ ಕಾರಿನ ಕೀಲಿಯನ್ನು ನೀಡಿ ವಾಹನ ಚಲಾಯಿಸಲು ಅವಕಾಶ ಮಾಡಿಕೊಟ್ಟಿದ್ದರು ಹಾಗೂ ಈ ಹಿಂದೆ ಕೂಡ ಮಗನಿಗೆ ಕಾರು ಚಲಾಯಿಸಲು ಅನುಮತಿ ನೀಡಿದ್ದರು ಎಂಬುದು ಪ್ರಾಸಿಕ್ಯೂಷನ್ನ ಆರೋಪವಾಗಿತ್ತು. ಆದರೆ, ತಂದೆ ಈ ಆರೋಪವನ್ನು ನಿರಾಕರಿಸಿದ್ದರು. ತಮ್ಮ ಅನುಮತಿಯಿಲ್ಲದೆ ಮಗ ಕಾರನ್ನು ತೆಗೆದುಕೊಂಡು ಹೋಗಿದ್ದ ಎಂದು ಅವರು ವಾದಿಸಿದ್ದರು.
ಈ ಎರಡೂ ವಿರುದ್ಧವಾದ ಹೇಳಿಕೆಗಳ ಸತ್ಯಾಸತ್ಯತೆಯನ್ನು ಆರೋಪದಿಂದ ಬಿಡುಗಡೆ ಮಾಡುವ ಹಂತದಲ್ಲೇ ನಿರ್ಧರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
“ಆರೋಪದಿಂದ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು, ಈ ಪರಸ್ಪರ ವಿರುದ್ಧವಾದ ವಾದಗಳಲ್ಲಿ ಯಾವುದನ್ನು ಒಪ್ಪಿಕೊಳ್ಳಬೇಕು ಎಂದು ನಿರ್ಧರಿಸುವ ಕಿರು ವಿಚಾರಣೆಯಾಗಿ ಪರಿವರ್ತಿಸಲಾಗದು” ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಪಘಾತದ ದುರಂತದ ತೀವ್ರತೆಯನ್ನು ಮಾತ್ರ ಆಧರಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ರ ಭಾಗ-II ಅಡಿಯಲ್ಲಿ ಅಪರಾಧವನ್ನು ನಿರ್ಧರಿಸಲಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
“ದುರಂತದ ಪ್ರಮಾಣವೊಂದೇ ಸೆಕ್ಷನ್ 304ರ ಭಾಗ-II ಅನ್ನು ಅನ್ವಯಿಸಲು ಆಧಾರವಾಗಲಾರದು; ಸತ್ತವರ ಸಂಖ್ಯೆಯನ್ನು ಎಣಿಸುವ ಮೂಲಕ ಅಪರಾಧಿಕ ಹೊಣೆಗಾರಿಕೆಯನ್ನು ಅಳೆಯಲಾಗದು” ಎಂದು ನ್ಯಾಯಾಲಯ ಹೇಳಿದೆ.
ಪ್ರತಿಯೊಂದು ಪ್ರಕರಣದಲ್ಲೂ ಅಪ್ರಾಪ್ತ ಮಗುವಿನಿಂದ ಅಪಘಾತ ಸಂಭವಿಸಿದರೆ ಪೋಷಕರನ್ನು ಅಪರಾಧಕ್ಕೆ ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಆದರೆ, ಪೋಷಕರು ಉದ್ದೇಶಪೂರ್ವಕವಾಗಿ ವಾಹನವನ್ನು ಚಾಲನೆ ಮಾಡಲು ಅಪ್ರಾಪ್ತ ಮಗುವಿಗೆ ಒಪ್ಪಿಸಿದ್ದಾರೆ ಮತ್ತು ಇದರಿಂದ ಉಂಟಾಗಬಹುದಾದ ಅಪಾಯದ ಬಗ್ಗೆ ಅವರಿಗೆ ಅಗತ್ಯವಾದ ಅರಿವಿತ್ತು ಎಂಬ ಆರೋಪಗಳಿದ್ದರೆ, ವಿಚಾರಣೆಗೂ ಮುನ್ನವೇ ಆರೋಪವನ್ನು ರದ್ದುಗೊಳಿಸಲಾಗದು ಎಂದು ತಿಳಿಸಿದೆ.
ತಂದೆಗೆ ಅಪರಾಧದ ಸ್ವರೂಪ ಮತ್ತು ಅಪಾಯದ ಬಗ್ಗೆ ಅಗತ್ಯವಾದ ಜ್ಞಾನವಿತ್ತೇ ಎಂಬುದನ್ನು ವಿಚಾರಣೆಯ ಸಂದರ್ಭದಲ್ಲಿ ಸಾಕ್ಷ್ಯಗಳ ಆಧಾರದಲ್ಲಿ ನಿರ್ಧರಿಸಬೇಕು ಎಂದು ಪೀಠ ಹೇಳಿದೆ.
“ಆರೋಪವು ವಿಚಾರಣೆಯಲ್ಲಿ ಸಾಕ್ಷ್ಯಗಳ ಪರೀಕ್ಷೆಯನ್ನು ಎದುರಿಸಬೇಕು; ವಿಚಾರಣೆಯ ಆರಂಭದಲ್ಲೇ ಅದನ್ನು ಅಕಾಲಿಕವಾಗಿ ಅಂತ್ಯಗೊಳಿಸಬಾರದು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆಯೂ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ನ್ಯಾಯಾಲಯದ ಮುಂದೆ ಉಲ್ಲೇಖಿಸಲಾದ ಅಂಕಿಅಂಶಗಳ ಪ್ರಕಾರ, 2025–26ನೇ ಸಾಲಿನಲ್ಲಿ ಭಾರತದಲ್ಲಿ ಅಪ್ರಾಪ್ತರು ಭಾಗಿಯಾಗಿದ್ದ 11,890 ಅಪಘಾತಗಳು ವರದಿಯಾಗಿದ್ದರೆ, ಕರ್ನಾಟಕದಲ್ಲಿ ಇಂತಹ 751 ಅಪಘಾತಗಳು ಸಂಭವಿಸಿದ್ದವು.
ಈ ಅಂಕಿಅಂಶಗಳು ಮಾತ್ರ ಅಪರಾಧ ಸಾಬೀತುಪಡಿಸಲು ಪರ್ಯಾಯವಾಗಲಾರವು ಎಂದು ನ್ಯಾಯಾಲಯ ಹೇಳಿದರೂ, ಇಂತಹ ಘಟನೆಗಳು ನಡೆಯುತ್ತಿರುವ ವಿಶಾಲ ಸಾಮಾಜಿಕ ಸನ್ನಿವೇಶವನ್ನು ನ್ಯಾಯಾಲಯಗಳು ನಿರ್ಲಕ್ಷಿಸಲಾಗದು ಎಂದು ತಿಳಿಸಿದೆ.
“ಮೋಟಾರು ವಾಹನದ ಸ್ಟೀರಿಂಗ್ ವೀಲ್ ಮಗುವಿನ ಕೈಯಲ್ಲಿ ಆಟಿಕೆಯಾಗಿ ಬದಲಾಗಬಾರದು; ಸಾರ್ವಜನಿಕ ರಸ್ತೆಯೂ ಇಂತಹ ಸ್ವೇಚ್ಛಾಚಾರದ ಆಟದ ಮೈದಾನವಾಗಬಾರದು” ಎಂದು ಪೀಠ ಹೇಳಿದೆ.
ಹೀಗಾಗಿ, ತಂದೆಯ ವಿರುದ್ಧದ ಆರೋಪವನ್ನು ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್, ಪ್ರಕರಣದಲ್ಲಿ ವಿಚಾರಣೆ ಮುಂದುವರಿಯಲು ಅವಕಾಶ ನೀಡಿದೆ.
ಅರ್ಜಿದಾರರ ಪರ ವಕೀಲ ಆರ್ ಪಲ್ಲವ, ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ವಾದಿಸಿದ್ದರು.