ಲಾಕ್‌ಡೌನ್ ಅವಧಿಯಲ್ಲಿ ಮೈಸೂರಿನಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಚರ್ಚ್ ಹೊರಗೆ ಶವ ಸಂಸ್ಕಾರ ನಡೆಸಿದ್ದ ಪಾದ್ರಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ವಜಾ ಮಾಡಲು ಈಚೆಗೆ ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಮೈಸೂರಿನ ಎನ್ ಆರ್ ಮೊಹಲ್ಲಾದಲ್ಲಿರುವ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ವಜಾ ಮಾಡುವಂತೆ ಕೋರಿ ಎಲಿಶ್ ಕುಮಾರ್ ಮತ್ತು ಗಿಲ್ಬರ್ಟ್ ದೇವಪ್ರಸಾದ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ಚರ್ಚ್ ಹೊರಗೆ ಶವ ಸಂಸ್ಕಾರ ನಡೆಸಿದ್ದ ಪಾದ್ರಿಯವರ ಕ್ರಮದಿಂದಾಗಿ ಸಾಕಷ್ಟು ಮಂದಿ ಅಲ್ಲಿ ನೆರೆದಿದ್ದರು ಎಂದು ಹೈಕೋರ್ಟ್‌ನ ಸರ್ಕಾರಿ ವಕೀಲ ಆರ್ ಡಿ ರೇಣುಕಾರಾಧ್ಯ ವಾದಿಸಿದ್ದರು.
ಅರ್ಜಿದಾರರ ಪರ ವಕೀಲ ಶೈಲೇಶ್ ಎಸ್ ಕಾತರೇ ಅವರು “ಚರ್ಚ್ ಮುಂದೆ ಜನರು ನೆರೆದಿರಲಿಲ್ಲ. ಸಾವನ್ನಪ್ಪಿದ ವ್ಯಕ್ತಿಯು ಕೋವಿಡ್‌ನಿಂದ ಕಾಲವಾಗಿರಲಿಲ್ಲ. ಅಲ್ಲದೇ, ಮೃತರ ಶವ ಸಂಸ್ಕಾರವನ್ನು ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಗಿತ್ತು” ಎಂದು ವಾದಿಸಿದ್ದರು.
ಉಭಯ ವಾದಗಳನ್ನು ಆಲಿಸಿದ್ದ ಪೀಠವು “ರಾಜ್ಯ ಸರ್ಕಾರ ಹೊರಡಿಸಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಅರ್ಜಿದಾರರು ಸಲ್ಲಿಸಿರುವ ಚಿತ್ರಗಳನ್ನು ಪರಿಶೀಲಿಸಿದರೆ ಅಲ್ಲಿ ಸಾಕಷ್ಟು ಜನರು ನೆರೆದಿದ್ದರು ಎಂಬುದು ತಿಳಿಯುತ್ತದೆ. ಹೀಗಾಗಿ, ತಪ್ಪಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಲಾಗದು. ಪ್ರಕರಣದ ಕುರಿತು ತನಿಖೆ ನಡೆಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮನವಿಯನ್ನು ಪುರಸ್ಕರಿಸಲಾಗದು” ಎಂದು ಹೇಳಿರುವ ಪೀಠವು ಮನವಿಯನ್ನು ವಜಾ ಮಾಡಿದೆ.
ಪ್ರಕರಣದ ಹಿನ್ನೆಲೆ: ಮೈಸೂರಿನ ವೆಲ್ಸಿ ಚರ್ಚ್‌ನ ಸಹಾಯಕ ಪ್ರೆಸ್‌ಬೈಟರ್ ರೆವೆರೆಂಡ್ ವಿಲಿಯಂ ಸುಜಯ್ ಕುಮಾರ್ ಅವರು ಏಪ್ರಿಲ್ 30ರಂದು ನಿಧನರಾಗಿದ್ದರು. ಆರ್‌ಟಿ-ಪಿಸಿಆರ್ ಪರೀಕ್ಷೆ ನೆಗೆಟಿವ್ ಆಗಿದ್ದರೂ ಅವರ ಮೃತ ದೇಹವನ್ನು ಅಂತಿಮ ಸಂಸ್ಕಾರ ನಡೆಸಲು ಪಾಲಿಕೆಗೆ ನೀಡಲಾಗಿತ್ತು. ಹೀಗಾಗಿ, ಸಿಎಸ್‌ಐ ಯೇಸು ಕೃಪಾಲಯ ಚರ್ಚ್ ಮುಂದೆ ಸಣ್ಣ ಪ್ರಮಾಣದಲ್ಲಿ ಎಲಿಶ್ ಕುಮಾರ್ ಮತ್ತು ಗಿಲ್ಬರ್ಟ್ ದೇವಪ್ರಸಾದ್ ಅವರು ವಿಧಿವಿಧಾನಗಳನ್ನು ನೆರವೇರಿಸಿದ್ದರು.
ಈ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ್ದ ಎನ್ ಆರ್ ಠಾಣೆಯ ಪೊಲೀಸರು ನಿಷೇಧಾಜ್ಞೆ ಜಾರಿಯಲ್ಲಿದ್ದರೂ 25-30 ಜನರ ಉಪಸ್ಥಿತಿಯಲ್ಲಿ ವಿಧಿವಿಧಾನ ನಡೆಸುತ್ತಿರುವುದನ್ನು ಆಧರಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188, ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆಯ ಸೆಕ್ಷನ್‌ಗಳಾದ 4(2) (ಇ), 5(4) ಮತ್ತು ವಿಪತ್ತು ನಿರ್ವಹಣಾ ಕಾಯಿದೆಯ ಸೆಕ್ಷನ್ 51ರ ಅಡಿ ಎಲಿಶ್ ಮತ್ತು ಗಿಲ್ಬರ್ಟ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಸದರಿ ಪ್ರಕರಣವು ಮೈಸೂರಿನ ಜೆಎಂಎಫ್‌ಸಿ ನ್ಯಾಯಾಲಯದ ಮೂರನೇ ಹೆಚ್ಚುವರಿ ಮುಖ್ಯ ಸಿವಿಲ್ ನ್ಯಾಯಾಧೀಶರ ಮುಂದೆ ವಿಚಾರಣೆಗೆ ಒಳಪಟ್ಟಿದೆ. ಇದನ್ನು ವಜಾ ಮಾಡುವಂತೆ ಎಲೀಶ್ ಕುಮಾರ್ ಮತ್ತು ಗಿಲ್ಬರ್ಟ್ ದೇವಪ್ರಸಾದ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.