ಸುದ್ದಿಗಳು

ಅಲ್ಪಸಂಖ್ಯಾತರ ಮತ ಡಿಲೀಟ್‌ ಮಾಡುವುದು ಪೂರ್ವಯೋಜಿತ ಕೃತ್ಯ: ಹೈಕೋರ್ಟ್‌ನಲ್ಲಿ ಎಜಿ ವಾದ

“ಎಲೆಕ್ಟ್ರಾನಿಕ್ ದಾಖಲೆಗಳ ನಾಶವನ್ನು ತಡೆಯುವ ದೃಷ್ಟಿಯಿಂದಲೂ ತನಿಖೆ ನಡೆಸಬೇಕಿದೆ. ಚುನಾವಣಾ ಆಯೋಗ ಹಾಗೂ ಪೊಲೀಸರ ವಿಚಾರಣೆಯ ವರದಿಗಳನ್ನು ನ್ಯಾಯಾಲಯದ ಮುಂದಿಡಲಾಗುವುದು” ಎಂದ ಎಜಿ.

Bar & Bench

ಮತದಾರರನ್ನು ಪಟ್ಟಿಯಿಂದ ಡಿಲಿಟ್‌ ಮಾಡುವುದು ಪೂರ್ವಯೋಜಿತ ಕೃತ್ಯ. ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನೇ ಗುರಿಯಾಗಿಸಿಕೊಂಡು ಶೇ 99ರಷ್ಟು ಅರ್ಜಿ ನಮೂನೆ 7 ಸಲ್ಲಿಸಲಾಗಿದೆ. ಉದ್ದೇಶಪೂರ್ವಕವಾಗಿ ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನ ನಡೆದಿದೆ. ಈ ಸಂಬಂಧ ಸತ್ಯಾಂಶವನ್ನು ಪತ್ತೆ ಹಚ್ಚಬೇಕಿದ್ದು ತನಿಖೆಯ ಅಗತ್ಯವಿದ್ದು ಅರ್ಜಿದಾರರ ವಿರುದ್ಧದ ತಡೆ ಆದೇಶ ತೆರವು ಮಾಡಬೇಕು ಎಂದು ಅಡ್ವೊಕೇಟ್‌ ಜನರಲ್‌ ಕರ್ನಾಟಕ ಹೈಕೋರ್ಟ್‌ನಲ್ಲಿ ಬುಧವಾರ ಪ್ರತಿಪಾದಿಸಿದರು.

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅರ್ಜಿ ನಮೂನೆ–7 ಸಲ್ಲಿಸಿದ ಹಿನ್ನೆಲೆಯಲ್ಲಿ ದಾಖಲಾಗಿರುವ ಸಂಬಂಧಿತ ಪ್ರಕರಣದಲ್ಲಿ ಗುಟ್ಟಹಳ್ಳಿಯ ಜಿ ಎಸ್‌ ವಸಂತಲಕ್ಷ್ಮಿ ಮತ್ತು‌ ಆರ್‌ ದೀಪಕ್‌ ಸಿಂಗ್‌ ವಿರುದ್ಧದ ತನಿಖೆ ತಡೆ ನೀಡಿರುವುದನ್ನು ತೆರವುಗೊಳಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Anant Ramanath Hegde

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ ಶೆಟ್ಟಿ ಅವರು “ಎಸ್‌ಐಆರ್ ಪ್ರಕ್ರಿಯೆ ಸಂದರ್ಭದಲ್ಲಿ ಬೂತ್ ಮಟ್ಟದ ಏಜೆಂಟರು (ಬಿಎಲ್‌ಎ) ಮತ್ತು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆಮನೆಗೆ ತೆರಳಿದ ಸಂದರ್ಭದಲ್ಲಿ ಮತದಾರರು ಅಲ್ಲಿ ವಾಸಿಸುತ್ತಿದ್ದರು. ಇದನ್ನು ತಿಳಿದೂ ತಿಳಿದು ಅವರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕು‌ವ ಉದ್ದೇಶದೊಂದಿಗೆ ಅರ್ಜಿ ನಮೂನೆ 7 ಅನ್ನು ಸಲ್ಲಿಸಲಾಗಿದೆ” ಎಂದು ಆರೋಪಿಸಿದರು.

“ಎಲೆಕ್ಟ್ರಾನಿಕ್ ದಾಖಲೆಗಳ ನಾಶವನ್ನು ತಡೆಯುವ ದೃಷ್ಟಿಯಿಂದಲೂ ತನಿಖೆ ನಡೆಸಬೇಕಿದೆ. ಚುನಾವಣಾ ಆಯೋಗ ಹಾಗೂ ಪೊಲೀಸರ ವಿಚಾರಣೆಯ ವರದಿಗಳನ್ನು ನ್ಯಾಯಾಲಯದ ಮುಂದಿಡಲಾಗುವುದು. ಅವುಗಳನ್ನು ಪರಿಶೀಲಿಸಿ ನ್ಯಾಯಾಲಯವೇ ಸೂಕ್ತ ತೀರ್ಮಾನ ಕೈಗೊಳ್ಳಬಹುದು” ಎಂದು ಪೀಠಕ್ಕೆ ಮನವಿ ಮಾಡಿದರು.

Advocate General K Shashi Kiran Shetty

“ರಾಜಕೀಯ ಪಕ್ಷವು ಚುನಾವಣಾ ಆಯೋಗದ ಜೊತೆ ಸೇರಿಕೊಂಡು ಈ ಕೃತ್ಯ ನಡೆಸುತ್ತಿದೆ. ಇದರ ಹಿಂದಿನ ಉದ್ದೇಶ ಏನು ಎಂಬುದನ್ನು ಪತ್ತೆ ಹಚ್ಚಬೇಕಿದೆ. ತನಿಖೆಗೆ ಅನುಮತಿ ನೀಡಿದರೆ ಅರ್ಜಿದಾರರನ್ನು ಬಂಧಿಸುವುದಿಲ್ಲ ಹಾಗೂ ಹೈಕೋರ್ಟ್ ಅನುಮತಿಯಿಲ್ಲದೆ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವುದಿಲ್ಲ. ತನಿಖೆ ಮುಂದುವರೆಸಲು ಅನುಮತಿ ನೀಡಬೇಕು” ಎಂದು ಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಎಂ ಅರುಣ್ ಶ್ಯಾಮ್‌ ಅವರು “ತಪ್ಪು ಮಾಹಿತಿ ನೀಡಿರುವುದು ಕಂಡುಬಂದರೆ ಚುನಾವಣಾ ಅಧಿಕಾರಿಗಳೇ ಕ್ರಮ ಕೈಗೊಳ್ಳಬಹುದಾಗಿದೆ. ಮತದಾರರ ಪಟ್ಟಿಯಿಂದ ಹೆಸರು ಅಳಿಸಿ ಹೋದವರಿಗೆ ಮೇಲ್ಮನವಿ ಸಲ್ಲಿಸುವ ಹಕ್ಕಿದೆ. ಎರಡು ಹಂತಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದರಿಂದ, ಈ ಹಂತದಲ್ಲೇ ಪೊಲೀಸ್ ದೂರು ದಾಖಲಿಸುವ ಅಗತ್ಯವಿಲ್ಲ” ಎಂದು ಪೀಠಕ್ಕೆ ವಿವರಿಸಿದರು.

Senior Advocate Aruna Shyam

‘ಪ್ರತಿಯೊಬ್ಬ ಮತದಾರನಿಗೂ ಜವಾಬ್ದಾರಿ ಇರುತ್ತದೆ. ಸದ್ಯ ದೇಶದಾದ್ಯಂತ ಎಸ್‌ಐಆರ್‌ ಕುರಿತು ಚರ್ಚೆ ನಡೆಯುತ್ತಿದೆ’ ಎಂಬ ಅಂಶವನ್ನು ವಿಚಾರಣೆ ವೇಳೆ ಮೌಖಿಕವಾಗಿ ಉಲ್ಲೇಖಿಸಿದ ಪೀಠವು ಅರ್ಜಿ ನಮೂನೆ 7 ಅನ್ನು ಸಲ್ಲಿಸಿದಾಗ ಅದಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು ಆಕ್ಷೇಪಣೆ ಸಲ್ಲಿಸುವುದಕ್ಕೆ ಅವಕಾಶವಿಲ್ಲವೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು.

ಮತದಾರರು ನಿರ್ದಿಷ್ಟ ಸ್ಥಳದಲ್ಲಿ ವಾಸಿಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಪೊಲೀಸರು ನಿರ್ಧರಿಸುತ್ತಾರೆಯೇ ಅಥವಾ ಕಾನೂನಿನಡಿ ಅಧಿಕಾರ ಹೊಂದಿರುವ ಚುನಾವಣಾ ಅಧಿಕಾರಿಗಳು ನಿರ್ಧರಿಸುತ್ತಾರೆಯೇ ಎಂದು ಪ್ರಶ್ನಿಸಿದ ಪೀಠವು ‘ಚುನಾವಣಾ ಅಧಿಕಾರಿಗಳು ನಿರ್ಧಾರ ಕೈಗೊಂಡ ಬಳಿಕ ಕ್ರಮ ಕೈಗೊಳ್ಳಬಹುದಲ್ಲವೇ? ಅದಕ್ಕಾಗಿ ಪೊಲೀಸರಿಂದ ಪರ್ಯಾಯ ತನಿಖೆ ಅಗತ್ಯವಿದೆಯೇ?” ಎಂದೂ ಪ್ರಶ್ನಿಸಿತು.

ವಾದ–ಪ್ರತಿವಾದ ಆಲಿಸಿದ ಪೀಠವು ಅರ್ಜಿದಾರರ ವಿರುದ್ಧದ ತನಿಖೆಗೆ ಈ ಮೊದಲು ನೀಡಿದ್ದ ಮಧ್ಯಂತರ ತಡೆ ಆದೇಶವನ್ನು ವಿಸ್ತರಿಸಿತು. ಅರ್ಜಿದಾರರು ನೀಡಿರುವ ಅರ್ಜಿ ನಮೂನೆ 7ಕ್ಕೆ ಸಂಬಂಧಿಸಿದ ವಿದ್ಯುನ್ಮಾನ ದಾಖಲೆಗಳನ್ನು ಕಾಪಿಡಬೇಕು. ಅಗತ್ಯ ಕಂಡು ಬಂದರೆ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ವರ್ಗಾಯಿಸಬೇಕು ಎಂದು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ನಿರ್ದೇಶಿಸಿ ಆದೇಶ ಕಾಯ್ದಿರಿಸಿತು.