ಸುದ್ದಿಗಳು

ಸ್ವಾತಂತ್ರ್ಯ ದಿನ ಆಚರಣೆ ಬದಲು ಕೋರಿದ್ದ ಪಿಐಎಲ್‌ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌

ಭೂಮಿ ನಾಲ್ಕು ದಿಕ್ಕಿನಲ್ಲಿ ಚಲಿಸುತ್ತಿದೆ ಎಂದು ಹೇಳಿದ್ದೀರಿ, ನೀವು 5ನೇ ದಿಕ್ಕಿನಲ್ಲಿ ಚಲಿಸುತ್ತಿದ್ದೀರಿ ಎಂದು ಅರ್ಜಿದಾರರನ್ನು ಮಾರ್ಮಿಕವಾಗಿ ಪ್ರಶ್ನಿಸಿದ ನ್ಯಾಯಾಲಯ.

Bar & Bench

ಬ್ರಿಟಿಷರು ಬಳುವಳಿಯಾಗಿ ಕೊಟ್ಟು ಹೋಗಿರುವ ದಿನದಂದು ಸ್ವಾತಂತ್ರ್ಯದಿನವನ್ನಾಗಿ ಆಚರಿಸುವ ಬದಲು ಪ್ರತ್ಯೇಕವಾಗಿ ಬೇರೆ ದಿನಾಂಕದಂದು ನಮ್ಮದೇ ಆದ ರಾಷ್ಟ್ರೀಯ ದಿನ ಆಚರಿಸಬೇಕು ಹಾಗೂ ಇದರ ಜೊತೆಗೆ ನಾಲ್ಕು ದಿಕ್ಕುಗಳನ್ನು ಆಧರಿಸಿ ವರ್ಷದಲ್ಲಿ ನಾಲ್ಕು ದಿನ ಹೆಚ್ಚುವರಿ ರಾಷ್ಟ್ರೀಯ ದಿನಗಳನ್ನಾಗಿ ಆಚರಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾಗೊಳಿಸಿದೆ.

ಬೆಂಗಳೂರಿನ ವಕೀಲ ಎಂ ಎಸ್ ಚಂದ್ರಶೇಖರಬಾಬು ಹಾಗೂ ಕಲಾವಿದ ಮತ್ತು ಖಗೋಳಶಾಸ್ತ್ರಜ್ಞ ಜಿ ರವೀಂದ್ರ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.

ಅರ್ಜಿದಾರರನ್ನು ಕುರಿತು ಭೂಮಿ ನಾಲ್ಕು ದಿಕ್ಕಿನಲ್ಲಿ ಚಲಿಸುತ್ತಿದೆ ಎಂದು ಹೇಳಿದ್ದೀರಿ, ನೀವು 5ನೇ ದಿಕ್ಕಿನಲ್ಲಿ ಚಲಿಸುತ್ತಿದ್ದೀರಿ ಎಂದು ಮಾರ್ಮಿಕವಾಗಿ ಹೇಳಿತು. ಅಲ್ಲದೇ ಇಂತಹ ಅರ್ಜಿಗಳಿಗೆ ನೀವು ಹಾಜರಾಗಬೇಕಾಯಿತು ನೋಡಿ ಎಂದು ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಹಾಯಕ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರನ್ನು ಕುರಿತು ಪೀಠ ಹೇಳಿತು. ಅದಕ್ಕೆ, ದೊಡ್ಡ ಮೊತ್ತದ ದಂಡವೊಂದೇ ಅರ್ಜಿದಾರರಿಗೆ ಪರಿಹಾರ ಕೊಡಬಹುದು ಎಂದೂ ಹೇಳಿತು.

ಅರ್ಜಿಯನ್ನು ವಾಪಸ್ ಪಡೆಯಿರಿ, ಇಲ್ಲದಿದ್ದರೆ ದೊಡ್ಡ ಮೊತ್ತದ ದಂಡ ಹಾಕಿ ಅರ್ಜಿಯನ್ನು ವಜಾಗೊಳಿಸಲಾಗುವುದು. ಆಯ್ಕೆ ನಿಮ್ಮ ಮುಂದಿದೆ ಎಂದು ಅರ್ಜಿದಾರರಿಗೆ ಹೇಳಿತು. ಅರ್ಜಿ ವಾಪಸ್ ಪಡೆದುಕೊಳ್ಳುವುದಾಗಿ ಅರ್ಜಿದಾರರು ಹೇಳಿದರು. ಅದನ್ನು ಪರಿಗಣಿಸಿದ ಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

ನಮ್ಮ ದೇಶಕ್ಕೆ 2ರಿಂದ 3 ಲಕ್ಷ ವರ್ಷಗಳ ಸುದೀರ್ಘ ಇತಿಹಾಸವಿದೆ. ಬ್ರಿಟಿಷರು ಬಂದು ಇಲ್ಲಿ ಆಳಿ ಹೋದರು, ಅವರು ಹೇಳಿದ ದಿನಾಂಕದಂದು ಸ್ವಾತಂತ್ರ್ಯ ದಿನಾಚರಣೆ ಸರಿಯಲ್ಲ. ಅದರ ಬದಲಿಗೆ ನಮ್ಮದೇ ಆದ ಪ್ರತ್ಯೇಕ ರಾಷ್ಟ್ರೀಯ ದಿನವನ್ನು ಆಚರಿಸಬೇಕು. ಸ್ವಾತಂತ್ರ್ಯ ದಿನಾಚರಣೆ ದಿನವನ್ನು ಮರುಪರಿಗಣಿಸಬೇಕು ಎಂದು ಭಾರತವಷ್ಟೇ ಅಲ್ಲ ಬ್ರಿಟಿಷ್, ಫ್ರೆಂಚ್ ಹಾಗೂ ಡಚ್ಚರ್ ಆಳ್ವಿಕೆಯಲ್ಲಿದ್ದ 132 ದೇಶಗಳಿಗೂ ಮನವಿ ಮಾಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಅದೇ ರೀತಿ ಭೌಗೋಳಿಕವಾಗಿ ಭಾರತ ಕೇಂದ್ರ ಸ್ಥಾನದಲ್ಲಿದೆ. ಉತ್ತರದಲ್ಲಿ ಹಿಮಾಲಯ, ದಕ್ಷಿಣದಲ್ಲಿ ಹಿಂದೂ ಮಹಾಸಗರ, ಪೂರ್ವದಲ್ಲಿ ದಟ್ಟಾರಣ್ಯ, ಪಶ್ಚಿಮದಲ್ಲಿ ಮರುಭೂಮಿ ಹೊಂದಿದೆ. ಸೌರ ವ್ಯವಸ್ಥೆಯಲ್ಲಿ ವರ್ಷದಲ್ಲಿ ನಾಲ್ಕು ಋತುಗಳು ಬರಲಿದ್ದು, ಅವುಗಳನ್ನು ಆಧರಿಸಿ ಮಾರ್ಚ್ 20 -21ರಂದು ರಾಷ್ಟ್ರೀಯ ಭೂಮಿ ದಿನ, ಜೂನ್ 20-21ರಂದು ಪ್ರಾಚೀನ ಭಾರತೀಯರ ರಾಷ್ಟ್ರೀಯ ದಿನ, ಸೆಪ್ಟಂಬರ್ 22-23 ರಾಷ್ಟ್ರೀಯ ಪ್ರಜಾಪ್ರಭುತ್ವ ದಿನ, ಡಿಸೆಂಬರ್ 21-22 ವಿಶ್ವ ವಿಜ್ಞಾನಿಗಳ ದಿನಾಚರಣೆ ಹೆಸರಲ್ಲಿ ಪ್ರತ್ಯೇಕ ರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಬೇಕು. ಇದರಿಂದ ದೇಶಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಒಳ್ಳೆಯದಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.