Amazon, Flipkart and Karnataka HC 
ಸುದ್ದಿಗಳು

ಸಿಸಿಐ ತನಿಖೆ ಪ್ರಶ್ನಿಸಿ ಅಮೆಜಾನ್ ಫ್ಲಿಪ್‌ಕಾರ್ಟ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್

"ಎಲ್ಲಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಮೂರ್ತಿ ಪಿಎಸ್ ದಿನೇಶ್ ಕುಮಾರ್ ಹೇಳಿದರು.

Bar & Bench

ಭಾರತ ಸ್ಪರ್ಧಾ ಆಯೋಗದ (ಸಿಸಿಐ) ತಮ್ಮ ವಿರುದ್ಧ ನಡೆಸಲು ಉದ್ದೇಶಿಸಿದ್ದ ತನಿಖೆ ಪ್ರಶ್ನಿಸಿ ಇ- ಕಾಮರ್ಸ್‌ ದೈತ್ಯರಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಸ್ಪರ್ಧಾ ಕಾಯಿದೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಸಿಸಿಐ ಈ ಎರಡೂ ಕಂಪೆನಿಗಳ ವಿರುದ್ಧ ತನಿಖೆಗೆ ಮುಂದಾಗಿತ್ತು. ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿರುವುದಾಗಿ ನ್ಯಾಯಮೂರ್ತಿ ಪಿಎಸ್ ದಿನೇಶ್ ಕುಮಾರ್ ಹೇಳಿದ್ದಾರೆ.

ಅಮೆಜಾನ್‌ ಪರವಾಗಿ ಹಿರಿಯ ವಕೀಲ ಗೋಪಾಲ್‌ ಸುಬ್ರಮಣಿಯಂ ಈ ಹಿಂದೆ ವಾದ ಮಂಡಿಸಿದ್ದರು. ಆದರೆ ಸ್ಪರ್ಧಾ ಕಾಯಿದೆ ಉಲ್ಲಂಘನೆಗಾಗಿ ಸಿಸಿಐ ನಡೆಸುತ್ತಿರುವ ತನಿಖೆಯನ್ನು 1999ರ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯಡಿ (ಫೆಮಾ) ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ತನಿಖೆ ತಡೆಯುವುದಿಲ್ಲ ಎಂದು ಸಿಸಿಐ ವಾದಿಸಿತು.

ಸಿಸಿಐ ನಡೆಸಲು ಉದ್ದೇಶಿಸಿರುವ ತನಿಖೆಯನ್ನು ತಡೆಯುವುದಕ್ಕಾಗಿ ಜಾರಿ ನಿರ್ದೇಶನಾಲಯದ ತನಿಖೆ ಬಾಕಿ ಇರುವುದನ್ನು ಅಮೆಜಾನ್‌ ಬಳಸಿಕೊಳ್ಳಲು ಯತ್ನಿಸುತ್ತಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ನ್ಯಾಯಾಲಯಕ್ಕೆ ತಿಳಿಸಿದರು.

ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಮಾರ್ಟ್‌ಫೋನ್‌ ಮಾರಾಟ ಮಾಡುವಾಗ ಸ್ಪರ್ಧಾ ವಿರೋಧಿ ವರ್ತನೆ ತೋರುತ್ತಿದೆ ಎಂಬ ಬಗ್ಗೆ ತನಿಖೆ ನಡೆಸುವಂತೆ ಮಹಾ ನಿರ್ದೇಶಕರಿಗೆ ಸಿಸಿಐ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಅಮೆಜಾನ್‌ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿತ್ತು.

ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಉಳಿದ ವ್ಯಾಪಾರಿಗಳಿಗೆ ಕುತ್ತು ತರುವ ರೀತಿಯಲ್ಲಿ ಬೆಲೆ ನಿಗದಿ ಮಾಡುತ್ತಿದ್ದು, ಭಾರಿ ರಿಯಾಯಿತಿ, ಆದ್ಯತೆಯ ಮಾರಾಟಗಾರರ ಪಟ್ಟಿ ಮತ್ತು ವಿಶೇಷ ಪಾಲುದಾರಿಕೆಯಲ್ಲಿ ತೊಡಗಿವೆ ಎಂಬ ರೀತಿಯ ಆರೋಪಗಳ ಕುರಿತು ಸಿಸಿಐಗೆ ಈ ಹಿಂದೆ ದೆಹಲಿ ವ್ಯಾಪಾರ್‌ ಮಹಾಸಂಘ್‌ (ಡಿವಿಎಂ) ಮಾಹಿತಿ ನೀಡಿತ್ತು.

ವರ್ಷದ ಹಿಂದೆ ನ್ಯಾಯಾಲಯ ತನಿಖೆಗೆ ತಡೆ ನೀಡಿ ಅಮೆಜಾನ್‌ಗೆ ಮಧ್ಯಂತರ ಪರಿಹಾರ ಒದಗಿಸಿತ್ತು. ಸ್ವಲ್ಪ ಸಮಯದ ಬಳಿಕ ಫ್ಲಿಪ್‌ಕಾರ್ಟ್‌ಗೆ ಕೂಡ ಅದೇ ರೀತಿಯ ಪರಿಹಾರ ದೊರೆತಿತ್ತು.