Karnataka High Court
Karnataka High Court 
ಸುದ್ದಿಗಳು

[ಟ್ವಿಟರ್‌ನ ಮನೀಶ್‌ ಮಹೇಶ್ವರಿ ಪ್ರಕರಣ] ಮಾಧ್ಯಮ ವರದಿಗಳ ಬಗ್ಗೆ ಅಸಂತೋಷ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್‌

Bar & Bench

ಟ್ವಿಟರ್‌ ಕಮ್ಯುನಿಕೇಷನ್ಸ್‌ ಇಂಡಿಯಾ ಲಿಮಿಟೆಡ್‌ನ ಉದ್ಯೋಗಿ ಮನೀಶ್‌ ಮಹೇಶ್ವರಿ ಅವರು ತಮಗೆ ಉತ್ತರ ಪ್ರದೇಶ ಪೊಲೀಸರು ನೀಡಿರುವ ನೋಟಿಸ್‌ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೆಲ ಮಾಧ್ಯಮಗಳು ವರದಿ ಮಾಡಿರುವ ರೀತಿಗೆ ಕರ್ನಾಟಕ ಹೈಕೋರ್ಟ್ ಬುಧವಾರ‌ ಗಂಭೀರ ಅಸಮಾಧಾನ ಹೊರಹಾಕಿತು.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಜಿ ನರೇಂದ್ರ ಅವರು ಕೆಲ ಮಾಧ್ಯಮಗಳು ‘ಉತ್ತರ ಪ್ರದೇಶ ಪೊಲೀಸರನ್ನು “ಲ್ಯಾಮ್‌ಬೇಸ್ಟ್” (ಕಟುವಾಗಿ ಟೀಕಿಸು, ಪುಡಿಪುಡಿ ಮಾಡು) ಮಾಡಿದ ನ್ಯಾಯಾಲಯ’ ಎಂದು ವರದಿ ಮಾಡಿದ್ದ ಬಗ್ಗೆ ಅಸಂತೋಷ ವ್ಯಕ್ತಪಡಿಸಿದರು.

ಕೆಲ ಮಾಧ್ಯಮಗಳು ವರದಿ ಮಾಡಿರುವ ರೀತಿಯ ಬಗ್ಗೆ ನನಗೆ ಉಂಟಾಗಿರುವ ಅಸಂತೋಷವನ್ನು ಹೇಳಬಯಸುತ್ತೇನೆ ಎಂದು ನ್ಯಾಯಮೂರ್ತಿಗಳು ಪ್ರಕರಣಕ್ಕೆ ಸಂಬಂಧಿಸಿದ ವಕೀಲರಿಗೆ ಹೇಳಿದರು. “ಇದೇನು ಬಾಕ್ಸಿಂಗ್‌ ರಿಂಗ್ ಅಲ್ಲ. ಇದು ನ್ಯಾಯಾಲಯದ ಕೊಠಡಿ. ಇದು ಬಾಕ್ಸಿಂಗ್‌ ರಿಂಗ್‌ ಆಗಲಿ ಅಖಾಡವಾಗಲಿ ಅಲ್ಲ ಎನ್ನುವ ಬಗ್ಗೆ ನಂಬಿಕೆ ಇರಲಿ. ಇಲ್ಲಿ ಬ್ಲ್ಯಾಸ್ಟಿಂಗ್ (ಛೀಮಾರಿ, ತೀವ್ರ ಖಂಡನೆ) ಅಥವಾ ಲ್ಯಾಮ್‌ಬೇಸ್ಟಿಂಗ್ (ಕಟು ಟೀಕೆ, ಪುಡಿಮಾಡು) ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ರೀತಿಯ ವರದಿಗಾರಿಕೆಯು ಶ್ಲಾಘನೀಯವಲ್ಲ,” ಎಂದು ಅವರು ಹೇಳಿದರು.

ನ್ಯಾಯಾಲಯದ ವಿಚಾರಣೆಯನ್ನು ಸೂಕ್ತ ರೀತಿಯಲ್ಲಿ ವರದಿ ಮಾಡದೆ ಹೋದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿತು.

“ಇದು ಎಚ್ಚರಿಕೆಯ ಕಿವಿಮಾತು. ಸರಿಯಲ್ಲದ ಭಾಷೆಯನ್ನು ಬಳಸುವುದನ್ನು ಲಘುವಾಗಿ ಪರಿಗಣಿಸಲಾಗದು. ನ್ಯಾಯಾಲಯದಲ್ಲಿ ನಡೆಯುವುದನ್ನು ಪುನರ್‌ಸೃಷ್ಟಿಸುವುದಾದರೆ ಅದು ನ್ಯಾಯಯುತವಾಗಿ ಹಾಗೂ ಸರಿಯಾಗಿ ಇರಬೇಕು. ಸಂಬಂಧಪಟ್ಟವರಿಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ,” ಎಂದು ನ್ಯಾಯಮೂರ್ತಿಗಳು ಹೇಳಿದರು. ಮುಂದುವರೆದು, ನ್ಯಾಯಾಲಯದ ವಿಚಾರಣೆಯ “ಅಭಿಪ್ರಾಯುತ ವರದಿಗಾರಿಕೆಗೆ” ಅನುವು ಮಾಡಿಕೊಡಲಾಗದು ಎಂದೂ ನ್ಯಾಯಾಲಯ ಹೇಳಿತು.

ಇನ್ನು ಇಂದಿನ ವಿಚಾರಣೆಯಲ್ಲಿ, ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ಉತ್ತರ ಪ್ರದೇಶದಲ್ಲಿ ಅಪರಾಧವನ್ನು ದಾಖಲಿಸಲಾಗಿದೆ ಎಂದ ಮಾತ್ರಕ್ಕೆ ಹೈಕೋರ್ಟ್‌ ವ್ಯಾಪ್ತಿಯಲ್ಲಿ ಕಾರ್ಯಕಾರಣ ಉದ್ಭವಿಸುವುದಿಲ್ಲ ಎಂದೇನೂ ಅಲ್ಲ ಎಂದು ವಾದಿಸಿದರು. ಉತ್ತರ ಪ್ರದೇಶ ಪೊಲೀಸರ ಪರ ವಾದ ಮಂಡಿಸಿದ್ದ ಸರ್ಕಾರದ ಪರ ವಕೀಲರು ಪ್ರಕರಣದ ವ್ಯಾಪ್ತಿಯ ಬಗ್ಗೆ ನಿನ್ನೆಯ ವಿಚಾರಣೆ ವೇಳೆ ಪ್ರಶ್ನೆಯನ್ನು ಎತ್ತಿದ್ದರು. ನಾಗೇಶ್‌ ಅವರು ತಮ್ಮ ವಾದವನ್ನು ಸಮರ್ಥಿಸಲು ಸುಪ್ರೀಂ ಕೋರ್ಟ್‌ನ ಹಲವು ಪ್ರಕರಣಗಳನ್ನು ಉಲ್ಲೇಖಿಸಿದರು.

ಪ್ರಕರಣದ ವಿಚಾರಣೆಯನ್ನು ಜು.8ಕ್ಕೆ ಮುಂದೂಡಲಾಯಿತು.