Karnataka High Court and YouTube 
ಸುದ್ದಿಗಳು

ಕಲಾಪಗಳ ಲೈವ್‌ಸ್ಟ್ರೀಮಿಂಗ್‌: ನಿಯಮ ರೂಪಿಸುವ ಪ್ರಕ್ರಿಯೆಗೆ ವೇಗ ನೀಡಲು ರಿಜಿಸ್ಟ್ರಾರ್ ಜನರಲ್‌ಗೆ ಹೈಕೋರ್ಟ್‌ ಸೂಚನೆ

ಮುಂದಿನ ವಿಚಾರಣೆಯಲ್ಲಿ ಲೈವ್‌ ಸ್ಟ್ರೀಮಿಂಗ್‌ಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಆಗಿರುವ ಬೆಳವಣಿಗೆಗಳನ್ನು ಹೈಕೋರ್ಟ್‌ ತಿಳಿಸಬೇಕು ಎಂದು ಪೀಠ ನಿರ್ದೇಶಿಸಿತು.

Bar & Bench

ನ್ಯಾಯಾಲಯದ ಕಲಾಪಗಳನ್ನು ಲೈವ್‌ ಸ್ಟ್ರೀಮಿಂಗ್‌ ಮಾಡುವ ಸಂಬಂಧ ನಿಯಮ ರೂಪಿಸುವ ಪ್ರಕ್ರಿಯೆಗೆ ವೇಗ ನೀಡುವಂತೆ ರಿಜಿಸ್ಟ್ರಾರ್‌ ಜನರಲ್‌ಗೆ ಕರ್ನಾಟಕ ಹೈಕೋರ್ಟ್‌ ಬುಧವಾರ ನಿರ್ದೇಶಿಸಿದೆ.

“ಹೈಕೋರ್ಟ್‌ ಸಮಿತಿಯ ಮುಂದೆ ಲೈವ್‌ ಸ್ಟ್ರೀಮಿಂಗ್‌ ನಿಯಮಗಳು ಬಾಕಿ ಉಳಿದಿವೆ ಎಂದು ಹೈಕೋರ್ಟ್‌ ಪ್ರತಿನಿಧಿಸುತ್ತಿರುವ ವಕೀಲರು ನಮ್ಮ ಗಮನಸೆಳೆದಿದ್ದಾರೆ. ಹೀಗಾಗಿ, ಈ ಪ್ರಕ್ರಿಯೆಯನ್ನು ತುರ್ತಾಗಿ ಮಾಡುವಂತೆ ರಿಜಿಸ್ಟ್ರಾರ್‌ಗೆ ನಾವು ನಿರ್ದೇಶಿಸುತ್ತಿದ್ದೇವೆ” ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ನೇತೃತ್ವದ ವಿಭಾಗೀಯ ಪೀಠ ಆದೇಶದಲ್ಲಿ ದಾಖಲಿಸಿದೆ.

ಹೈಕೋರ್ಟ್‌ ಪ್ರತಿನಿಧಿಸುತ್ತಿರುವ ವಕೀಲೆ ಬಿ ವಿ ವಿದ್ಯುಲ್ಲತಾ ಅವರು “ಹೈಕೋರ್ಟ್‌ ಮುಂದೆ ಲೈವ್‌ ಸ್ಟ್ರೀಮಿಂಗ್‌ ಮಾಡುವ ಕರಡು ನಿಯಮಗಳು ಬಾಕಿ ಉಳಿದಿವೆ” ಎಂದರು. ಇದನ್ನು ಆಧರಿಸಿದ ಪೀಠವು ಮುಂದಿನ ವಿಚಾರಣೆಯಲ್ಲಿ ಲೈವ್‌ ಸ್ಟ್ರೀಮಿಂಗ್‌ಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಆಗಿರುವ ಬೆಳವಣಿಗೆಗಳನ್ನು ಹೈಕೋರ್ಟ್‌ ತಿಳಿಸಿಬೇಕು ಎಂದುನಿರ್ದೇಶಿಸಿತು.

ಪ್ರಮುಖ ಪ್ರಕರಣಗಳ ವಿಚಾರಣೆಯನ್ನು ಲೈವ್‌ ಸ್ಟ್ರೀಮಿಂಗ್‌ ಮಾಡುವುದಕ್ಕೆ ಸುಪ್ರೀಂ ಕೋರ್ಟ್‌ 2018ರಲ್ಲಿ ತಾತ್ವಿಕ ಒಪ್ಪಿಗೆ ನೀಡಿತ್ತು. ಇದು ಇನ್ನಷ್ಟೇ ಜಾರಿಗೆ ಬರಬೇಕಿದೆ. ಯೂಟ್ಯೂಬ್‌ ಮೂಲಕ ಕಲಾಪವನ್ನು ಲೈವ್‌ ಸ್ಟ್ರೀಮ್‌ ಮಾಡುತ್ತಿರುವ ಏಕೈಕ ನ್ಯಾಯಾಲಯ ಗುಜರಾತ್‌ ಹೈಕೋರ್ಟ್‌. ಈಚೆಗೆ ತಾತ್ಕಾಲಿಕವಾಗಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪೀಠದಿಂದ ಕೆಲವು ಪ್ರಕರಣಗಳನ್ನು ಲೈವ್‌ ಸ್ಟ್ರೀಮ್‌ ಮಾಡಲಾಗಿತ್ತು.

ಕರ್ನಾಟಕದಲ್ಲಿ ಪ್ರಕರಣಗಳ ಇ-ಫೈಲಿಂಗ್‌ಗೆ ಸಂಬಂಧಿಸಿದಂತೆ ಎಲ್ಲಾ ನ್ಯಾಯಾಲಯಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆ ಎಂಬುದನ್ನು ಪೀಠ ಪರಿಗಣನೆಗೆ ತೆಗೆದುಕೊಂಡಿತು. 2019ರಲ್ಲಿ ಇ-ಫೈಲಿಂಗ್‌ ಸೌಲಭ್ಯದ ಕುರಿತು ವಕೀಲ ದಿಲ್‌ರಾಜ್‌ ರೋಹಿತ್‌ ಸೀಕ್ವೈರಾ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಪೀಠವು ನಿರ್ದೇಶನ ನೀಡಿದೆ.

ಬಹು ಹಿಂದೆಯೇ ಪೋರ್ಟಲ್‌ ಮೂಲಕ ಇ-ಫೈಲಿಂಗ್‌ ವ್ಯವಸ್ಥೆಗೆ ಅನುಕೂಲ ಮಾಡಿಕೊಡಲಾಗಿದೆ. ಆದರೆ, ಕೆಲವೇ ಕೆಲವು ವಕೀಲರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಜುಲೈ 13ರವರೆಗಿನ ದಾಖಲೆಯ ಪ್ರಕಾರ ವಕೀಲರಿಗಿಂತ ಹೆಚ್ಚಾಗಿ ಪಾರ್ಟಿ ಇನ್‌ ಪರ್ಸನ್‌ಗಳೇ ಇ-ಪೋರ್ಟಲ್‌ನಲ್ಲಿ ಹೆಚ್ಚಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ರಿಜಿಸ್ಟ್ರಾರ್‌ (ಕಂಪ್ಯೂಟರ್‌) ಹಿಂದೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿದ್ದಾರೆ.