High Court of Karnataka, Dharwad Bench 
ಸುದ್ದಿಗಳು

ಪೋಕ್ಸೊ ಆರೋಪಿಗೆ ಜಾಮೀನು ಮಂಜೂರು; ತಾಯಿಗೆ ಷರತ್ತುಗಳನ್ನು ವಿಧಿಸಿದ ಕರ್ನಾಟಕ ಹೈಕೋರ್ಟ್‌

ಬಾಲ ನ್ಯಾಯ (ಆರೈಕೆ ಮತ್ತು ಸಂರಕ್ಷಣೆ) ಕಾಯಿದೆ-2015ರ ಸೆಕ್ಷನ್ 12ರ ಅಡಿ ಜಾಮೀನು ಕೋರಿ ಅಪ್ರಾಪ್ತ ಆರೋಪಿ ಅರ್ಜಿ ನಿರ್ಧರಿಸುವಾಗ ಅಪರಾಧ ಪ್ರಕರಣದ ಗಂಭೀರತೆ ಪರಿಗಣಿಸುವ ಅಗತ್ಯವಿಲ್ಲ ಎಂಬ ಆರೋಪಿ ಪರ ವಕೀಲರ ವಾದ ಪುರಸ್ಕರಿಸಿದ ಹೈಕೋರ್ಟ್‌.

Bar & Bench

ಕಾಲೇಜು ವಿದ್ಯಾರ್ಥಿನಿ (ಅಪ್ರಾಪ್ತೆ) ಮೇಲೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ ಮತ್ತು ಆ ದೃಶ್ಯಗಳನ್ನು ವಿಡಿಯೊ ಮಾಡಿ ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಅಪ್ರಾಪ್ತ ಆರೋಪಿಗೆ ಆತನ ತಾಯಿಯ ಮನವಿ ಮೇರೆಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಜಾಮೀನು ಮಂಜೂರು ಮಾಡಿದೆ.

ಧಾರವಾಡದ ಅಪ್ರಾಪ್ತ ಆರೋಪಿಯು ತನ್ನ ತಾಯಿ ಮೂಲಕ ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಅನಿಲ್ ಬಿ.ಕಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಅಲ್ಲದೇ, ಆರೋಪಿ ಭವಿಷ್ಯದಲ್ಲಿ ಅಪರಾಧಿಕ ಹಿನ್ನೆಲೆಯುಳ್ಳವರೊಂದಿಗೆ ಸಂಪರ್ಕ ಬೆಳೆಸದಂತೆ ಮತ್ತು ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ನೋಡಿಕೊಂಡು ಪ್ರತಿ ಮೂರು ತಿಂಗಳಿಗೊಮ್ಮೆ ಬಾಲ ನ್ಯಾಯ ಮಂಡಳಿಗೆ ವರದಿ ಸಲ್ಲಿಸಬೇಕು ಎಂದು ತಾಯಿಗೆ ಷರತ್ತು ವಿಧಿಸಿರುವ ಅಪರೂಪದ ಆದೇಶ ಇದಾಗಿದೆ.

ಬಾಲ ನ್ಯಾಯ (ಆರೈಕೆ ಮತ್ತು ಸಂರಕ್ಷಣೆ) ಕಾಯಿದೆ-2015ರ ಸೆಕ್ಷನ್ 12ರ ಅಡಿ ಜಾಮೀನು ಕೋರಿ ಅಪ್ರಾಪ್ತ ಆರೋಪಿ ಅರ್ಜಿಯನ್ನು ನಿರ್ಧರಿಸುವಾಗ ಅಪರಾಧ ಪ್ರಕರಣದ ಗಂಭೀರತೆ ಪರಿಗಣಿಸುವ ಅಗತ್ಯವಿಲ್ಲ ಎಂಬ ಆರೋಪಿ ಪರ ವಕೀಲರ ವಾದವನ್ನು ಹೈಕೋರ್ಟ್ ಪುರಸ್ಕರಿಸಿದೆ.

ಆರೋಪಿಯ ದೈಹಿಕ, ಮಾನಸಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಧಾರವಾಡದ ನಿಮಾನ್ಸ್ ಆಸ್ಪತ್ರೆಯಿಂದ ವರದಿ ತರಿಸಿಕೊಂಡು ಪರಿಶೀಲನೆ ನಡೆಸಿತು. ಜೊತೆಗೆ, ಘಟನೆ ನಡೆದಾಗ ಅರ್ಜಿದಾರನಿಗೆ 17 ವರ್ಷವಾಗಿದ್ದು ಮತ್ತು ಆರೋಪಿಯನ್ನು ತನ್ನ ಸುಪರ್ದಿಯಲ್ಲಿಟ್ಟುಕೊಳ್ಳಲು ತಾಯಿ ಸಮರ್ಥಳಾಗಿರುವ ಅಂಶವನ್ನು ಪರಿಗಣಿಸಿ ಜಾಮೀನು ನೀಡಿದೆ.

ಮಗನ ಜಾಮೀನಿಗಾಗಿ ತಾಯಿಗೆ ಷರತ್ತುಗಳು:

ತಾಯಿಯು ಆರೋಪಿಯ ಯೋಗಕ್ಷೇಮ ಮತ್ತು ಕಲ್ಯಾಣವನ್ನು ನೋಡಿಕೊಳ್ಳಬೇಕು. ಧಾರವಾಡದ ಬಾಲ ನ್ಯಾಯ ಮಂಡಳಿಗೆ ಮಗನ ಪರವಾಗಿ ಒಂದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಭದ್ರತಾ ಖಾತರಿ ಒದಗಿಸಬೇಕು. ಯಾವುದೇ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳೊಂದಿಗೆ ಆರೋಪಿ ಸಂಪರ್ಕ ಬೆಳೆಸಲು ಬಿಡದಂತೆ ಹಾಗೂ ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ನೋಡಿಕೊಳ್ಳಬೇಕು ಎಂದು ಹೈಕೋರ್ಟ್‌ ಜಾಮೀನಿಗೆ ಷರತ್ತು ವಿಧಿಸಿದೆ.

ಅಲ್ಲದೆ, ಆತ ವ್ಯಾಸಂಗ ಮುಂದುವರಿಸುವ ಅಥವಾ ರಚನಾತ್ಮಕ ಚಟುವಟಿಕೆಗಳನ್ನು ಪಾಲ್ಗೊಳ್ಳುವುದನ್ನು ಖಾತರಿಪಡಿಸಬೇಕು. ಅನುತ್ಪಾದಕ ಮತ್ತು ಮನೋರಂಜನಾ ಚಟುವಟಿಕೆಗಳಲ್ಲಿ ಹೆಚ್ಚಿನ ಸಮಯ ವ್ಯರ್ಥಮಾಡದಂತೆ ನೋಡಿಕೊಳ್ಳಬೇಕು. ಅದನ್ನು ದೃಢಪಡಿಸಿ ಅಫಿಡವಿಟ್‌ ಸಲ್ಲಿಸಬೇಕು ಎಂದು ಆರೋಪಿಯ ತಾಯಿಗೆ ಹೈಕೋರ್ಟ್ ಷರತ್ತು ವಿಧಿಸಿದೆ.

ಅಲ್ಲದೇ, ಈ ಕುರಿತಂತೆ ಆರೋಪಿ ಮತ್ತು ತಾಯಿ 2023ರ ಆಗಸ್ಟ್ 1ರಿಂದ ಪ್ರತಿ ಮೂರು ತಿಂಗಳಿಗೆ ಒಮ್ಮೆ ಬಾಲ ನ್ಯಾಯಮಂಡಳಿ ಪ್ರೊಬೆಷನರಿಗೆ ಅಧಿಕಾರಿಗೆ ವರದಿ ಸಲ್ಲಿಸಬೇಕು. ಪ್ರೊಬೆಷನರಿಗೆ ಅಧಿಕಾರಿ ಸಹ ಮನೋಜ್ ಚಟುವಟಿಕೆ ಮೇಲೆ ದೃಷ್ಟಿ ಹರಿಸಬೇಕು. ನಿರಂತರವಾಗಿ ಆತನ ಕುರಿತು ಸಾಮಾಜಿಕ ತನಿಖಾ ವರದಿ ಸಿದ್ಧಪಡಿಸಿ ಬಾಲ ನ್ಯಾಯ ಮಂಡಳಿಗೆ ಸಲ್ಲಿಸಬೇಕು ಎಂದು ಹೈಕೋರ್ಟ್ ಷರತ್ತು ವಿಧಿಸಿದೆ.

ವಿಚಾರಣೆ ವೇಳೆ ಆರೋಪಿ ಪರ ವಕೀಲರು, ಘಟನೆ ನಡೆದಾಗ ಆರೋಪಿಗೆ 17 ವರ್ಷವಾಗಿತ್ತು. ಸಂತ್ರಸ್ತೆ ಸಹ ಅಪ್ರಾಪ್ತೆಯಾಗಿದ್ದಳು. ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾಗಿರುವ ಬಾಲಕ ಬಾಲ ನ್ಯಾಯ (ಆರೈಕೆ ಮತ್ತು ಸಂರಕ್ಷಣೆ) ಕಾಯಿದೆ-2015ರ ಸೆಕ್ಷನ್ 12 ಅಡಿಯಲ್ಲಿ ಅರ್ಜಿ ಸಲ್ಲಿಸಿದಾಗ ಅದು ಸಿಆರ್‌ಪಿಸಿ ಕಾಯಿದೆಯ ಸೆಕ್ಷನ್ 439 ಅಡಿಯಲ್ಲಿ ಸಲ್ಲಿಕೆಯಾಗುವ ಸಾಮಾನ್ಯ ಜಾಮೀನು ಅರ್ಜಿಗಿಂತ ವಿಭಿನ್ನವಾಗಿ ನಿಲ್ಲುತ್ತದೆ. ಬಾಲ ನ್ಯಾಯ ಕಾಯಿದೆಯಡಿ ಅರ್ಜಿ ಸಲ್ಲಿಸಿದಾಗ, ಪ್ರಕರಣದ ಗಂಭೀರತೆ ಪರಿಗಣಿಸುವ ಅಗತ್ಯ ಉದ್ಭಭವಿಸುವುದಿಲ್ಲ. ಆದ್ದರಿಂದ ಜಾಮೀನು ನೀಡುವಂತೆ ಕೋರಿದ್ದರು.

ಪ್ರಕರಣದ ಹಿನ್ನೆಲೆ: ಆರೋಪಿ ಅಪ್ರಾಪ್ತ ಯುವಕ ತನ್ನ ಏಳು ಮಂದಿ ಸ್ನೇಹಿತರ ಜೊತೆಗೂಡಿ ಧಾರವಾಡದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು. ಆ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಘಟನೆ ಬಹಿರಗಂಪಡಿಸಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದರು.

ಘಟನೆ ಸಂಬಂಧ ಧಾರವಾಡ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಆರೋಪಿ ಸಹಿತ ಪ್ರಕರಣದಲ್ಲಿನ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದರು. ಬಾಲ ನ್ಯಾಯ ಮಂಡಳಿ ಮತ್ತು ಧಾರವಾಡ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಆರೋಪಿಯ ತಾಯಿಯು ಮಗನಿಗೆ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.