Bineeesh Kodiyeri, Karnataka HC
Bineeesh Kodiyeri, Karnataka HC 
ಸುದ್ದಿಗಳು

ಹವಾಲಾ ಹಣ ಪ್ರಕರಣ: ಕೇರಳ ಎಡ ಪಕ್ಷದ ನಾಯಕನ ಪುತ್ರ ಬಿನೇಶ್‌ ಕೊಡಿಯೇರಿಗೆ ಜಾಮೀನು ಮಂಜೂರು ಮಾಡಿದ ಕರ್ನಾಟಕ ಹೈಕೋರ್ಟ್‌

Bar & Bench

ಹವಾಲಾ ಹಣ ಪ್ರಕರಣದಲ್ಲಿ ಬಂಧಿತರಾಗಿದ್ದ ಕೇರಳದ ಸಿಪಿಐ (ಎಂ) ಹಿರಿಯ ನಾಯಕ ಕೊಡಿಯೇರಿ ಬಾಲಕೃಷ್ಣನ್‌ ಪುತ್ರ ಹಾಗೂ ನಟ ಬಿನೇಶ್‌ ಕೊಡಿಯೇರಿಗೆ ಗುರುವಾರ ಕರ್ನಾಟಕ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿ ಎಂ ಜಿ ಉಮಾ ಅವರ ನೇತೃತ್ವದ ಏಕಸದಸ್ಯ ಪೀಠವು ಷರತ್ತುಗಳಿಗೆ ಒಳಪಟ್ಟು ಬಿನೇಶ್‌ ಮನವಿಯನ್ನು ಪುರಸ್ಕರಿಸಲಾಗಿದೆ ಎಂದು ಹೇಳಿತು. ವಿಶೇಷ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದ್ದ ಹಿನ್ನಲೆಯಲ್ಲಿ ಮಾರ್ಚ್‌ನಲ್ಲಿ ಬಿನೇಶ್‌ ಜಾಮೀನು ಕೋರಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.

ಕಳೆದ ವರ್ಷದ ಆಗಸ್ಟ್‌ನಲ್ಲಿ ಬೆಂಗಳೂರಿನ ಮಾದವಸ್ತು ನಿಯಂತ್ರಣ ಸಂಸ್ಥೆಯ ಅಧಿಕಾರಿಗಳು 60 ಗ್ರಾಂ ಎಂಡಿಎಂಎ ಹೊಂದಿದ್ದ ಹಲವರನ್ನು ಬಂಧಿಸಿದ್ದರು. ಈ ಪೈಕಿ ಮೊಹಮ್ಮದ್‌ ಅನೂಪ್‌ನನ್ನು ಜಾರಿ ನಿರ್ದೇಶಾಲಯ ವಶಕ್ಕೆ ಪಡೆದಿತ್ತು.

ಬಿನೇಶ್‌ ಅವರ ರೆಸ್ಟೋರೆಂಟ್‌ಗೆ ಬೇನಾಮಿದಾರ್‌ ಆಗಿ ನೇಮಕವಾಗಿದ್ದು, ತಮ್ಮ ಬಾಸ್‌ ಆಗಿದ್ದ ಬಿನೇಶ್‌ ಹೇಳಿದ್ದನ್ನು ಮಾಡುತ್ತಿದ್ದಾಗಿ ಅನೂಪ್‌ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದರು.

ಮತ್ತೊಂದು ಕಡೆ, ಬಿನೇಶ್‌ ಅವರು ಅನೂಪ್‌ ಪರಿಚಿತನಾಗಿದ್ದು, ರೆಸ್ಟೋರೆಂಟ್‌ ತೆರೆಯಲು ಹಣ ನೀಡಿದ್ದಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ವಿಚಾರಣೆಯ ಸಂದರ್ಭದಲ್ಲಿ ಹಲವು ಬ್ಯಾಂಕ್‌ ಖಾತೆಗಳು ಪತ್ತೆಯಾಗಿದ್ದು, ಕೆಲವು ಅನೂಪ್‌ ಹೆಸರಿನಲ್ಲೂ ಇದ್ದವು. ಇವುಗಳಿಗೆ ಬಿನೇಶ್‌ ಅವರು ಅಪಾರ ಪ್ರಮಾಣದ ಹಣವನ್ನು ವರ್ಗಾವಣೆ ಮಾಡಿದ್ದರು. ಇದು ಕ್ರಿಮಿನಲ್‌ ಚಟುವಟಿಕೆಗಳಿಗೆ ಕಾರಣವಾಗಿತ್ತು ಎಂದು ಆಪಾದಿಸಲಾಗಿದೆ.

ಕಾನೂನುಬಾಹಿರ ಹಣ ವರ್ಗಾವಣೆ ನಿಯಂತ್ರಣ ಕಾಯಿದೆಯ ಸೆಕ್ಷನ್‌ 3ರ ಅಡಿ ಬಿನೇಶ್‌ ಅಪರಾಧಿ ಎಂಬುದನ್ನು ಸಾಬೀತುಪಡಿಸುವ ಸಂಬಂಧ ಸಾಕ್ಷ್ಯ ಸಂಗ್ರಹಿಸುವ ನಿಟ್ಟಿನಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ಜಾರಿ ನಿರ್ದೇಶನಾಲಯ ವಾದಿಸಿತ್ತು. ಆನಂತರ, ಬಂಧನಕ್ಕೆ ಒಳಗಾಗಿದ್ದ ಬಿನೇಶ್‌ ಅವರು ಸುಮಾರು ಒಂದು ವರ್ಷದಿಂದ ಜೈಲಿನಲ್ಲಿದ್ದರು.