ಪ್ರಿಯಕರ ಜೊತೆಗಿನ ಅಕ್ರಮ ಸಂಬಂಧಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿ, ಮಗನನ್ನು ನಿರ್ಲಕ್ಷಿಸಿದ್ದ ತಾಯಿಯ ವರ್ತನೆಯನ್ನು ಪರಿಗಣಿಸಿ ಮಗುವನ್ನು ತಾಯಿಯಿಂದ ತಂದೆಯ ವಶಕ್ಕೆ ನೀಡಿರುವ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಎತ್ತಿ ಹಿಡಿದಿದೆ [ಡಾ. ಎಕ್ತಾ ಸಿಂಗ್ ವರ್ಸಸ್ ರಾಜೀವ್ ಗಿರಿ].
ಮಗುವಿನ ಕಸ್ಟಡಿಯನ್ನು ತಂದೆಗೆ ನೀಡಿ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ತಾಯಿಯ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. ಮಗುವಿನ ಕಸ್ಟಡಿ ಪಡೆದಿದ್ದ ತಾಯಿಯು ವೈವಾಹಿಕ ಮನೆ ತೊರೆದ ಬಳಿಕ ಅಕ್ರಮ ಸಂಬಂಧದಲ್ಲಿದ್ದು, ಪ್ರಿಯಕರನ ಜೊತೆ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು ಎಂದು ಆದೇಶದಲ್ಲಿ ದಾಖಲಿಸಲಾಗಿದೆ.
“ಬೇರೆ ವ್ಯಕ್ತಿಯೊಂದಿಗಿನ ಸಂಬಂಧದ ವಿಚಾರವನ್ನು ಮಗುವಿನ ಕಲ್ಯಾಣದೊಂದಿಗೆ ತುಲನೆ ಮಾಡಿ ಪರಿಗಣಿಸಿದಾಗ ಆಕೆಯು ತನ್ನ ಅಕ್ರಮ ಸಂಬಂಧಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದು, ಮಗುವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮದುವೆಯಾದ ಮನೆಯನ್ನು ತೊರೆದ ಬಳಿಕ ಆಕೆಯು ಮಗುವನ್ನು ಚಂಡೀಗಢದ ಪಂಚಕುಲದಲ್ಲಿರುವ ಆಕೆಯ ಪೋಷಕರ ವಶಕ್ಕೆ ನೀಡಿ, ತಾನು ಬೆಂಗಳೂರಿನಲ್ಲಿ ಜೀವನ ಮುಂದುವರಿಸಿದ್ದರು. ದಾಖಲೆಗಳನ್ನು ಗಮನಿಸಿದರೆ ಆಕೆ ನಿರಂತರವಾಗಿ ತನ್ನ ಪ್ರಿಯಕರನ ಜೊತೆ ಓಡನಾಟದಲ್ಲಿದ್ದಾರೆ ಎಂಬುದನ್ನು ತೋರಿಸುತ್ತದೆ. ಹೀಗಾಗಿ, ಆಕೆಯು ಮಗುವಿನ ಕಲ್ಯಾಣ ಮತ್ತು ಹಿತಾಸಕ್ತಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಪ್ರತೀಕಾರಕ್ಕಾಗಿ ಆಕೆಯು ಮಗುವನ್ನು ತಂದೆಯಿಂದ ಕಿತ್ತುಕೊಂಡಿದ್ದಾರೆ” ಎಂದು ಜನವರಿ 31ರ ಆದೇಶದಲ್ಲಿ ಹೇಳಲಾಗಿದೆ.
“ಆಕೆ ಸಂಬಂಧಕ್ಕೆ ಯಾವುದೇ ರೀತಿಯ ಗೌರವ ಮತ್ತು ಮನ್ನಣೆ ನೀಡಿಲ್ಲ. ಸಣ್ಣ ವಿಚಾರಕ್ಕೆ ಕಲಹ ನಡೆಸುವ ಅಭ್ಯಾಸ ಬೆಳೆಸಿಕೊಂಡಿದ್ದರು. ಅತ್ತೆ-ಮಾವ ಜೊತೆಗೂ ಅವರು ನೆಲೆಸಲು ಬಯಸಿರಲಿಲ್ಲ. ಆದ್ದರಿಂದ, ಅವರು ಮನೆಯಿಂದ ಹೊರಹೋಗುವಂತೆ ಮಾಡಿದ್ದರು. ಆ ವರ್ತನೆಯೂ ನಡುವೆಯೂ, ಆಕೆ ಗರ್ಭಿಣಿಯಾಗಿದ್ದಾಗ ಅತ್ತೆ-ಮಾವ ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಆಕೆಗೆ ಆರೈಕೆ ಮಾಡಿದ್ದಲ್ಲದೇ, ಮಗುವಿನ ಆರೈಕೆ ಮಾಡಿದ್ದರು. ಇದೆಲ್ಲದರ ಮಧ್ಯೆಯೂ ಆಕೆ ಜಗಳ ತೆಗೆದಿದ್ದು, ಅವರನ್ನು ಮನೆಯಿಂದ ಹೊರಹಾಕಿದ್ದರು” ಎಂದು ವಿವರಿಸಲಾಗಿದೆ.
"ನ್ಯಾಯಾಲಯವು ಕೇವಲ ಮಗುವಿನ ಬಾಂಧವ್ಯ ಮತ್ತು ಸೌಕರ್ಯವನ್ನಲ್ಲದೇ ಮಗುವಿನ ಯೋಗಕ್ಷೇಮ ಮತ್ತು ಭವಿಷ್ಯದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಬೆಳೆಯುತ್ತಿರುವ ಪರಿಸರವನ್ನು ಸಹ ಪರಿಗಣಿಸಬೇಕು. ಹಣಕಾಸಿನ ಭದ್ರತೆಯ ಜೊತೆಗೆ, ಮಗುವಿಗೆ ಪ್ರೀತಿ ಮತ್ತು ವಾತ್ಸಲ್ಯದ ಅಗತ್ಯವಿರುವಾಗ ಪೋಷಕರು ಲಭ್ಯವಿದ್ದರೆ ಮತ್ತು ಯಾರ ಆರೈಕೆ ಮತ್ತು ರಕ್ಷಣೆಯ ಅಡಿಯಲ್ಲಿ ಮಗುವಿಗೆ ಉತ್ತಮ ಭವಿಷ್ಯವಿದೆ ಎಂಬುದನ್ನು ಸಹ ಪರಿಗಣಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
“ಮನೆಯೇ ಮಗುವಿನ ಮೊದಲ ಶಾಲೆಯಾಗಿದ್ದು, ಪೋಷಕರು ಮೊದಲ ಗುರುಗಳಾಗಿದ್ದಾರೆ. ಮಗು ಸರಿಯಾದ ಪೋಷಕತ್ವದಿಂದ ವಂಚಿತವಾದಾಗ, ಅದರ ಒಟ್ಟಾರೆ ಬೆಳವಣಿಗೆ ಮತ್ತು ಸಂತೋಷದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನ್ಯಾಯಾಲಯಗಳು ಮಗುವಿನ ಸೌಕರ್ಯ ಮತ್ತು ಬಾಂಧವ್ಯ ಪರಿಗಣಿಸುವುದು ಮಾತ್ರವಲ್ಲದೆ ಮಗು ಬೆಳೆಯುತ್ತಿರುವ ಸುತ್ತಮುತ್ತಲಿನ ಪರಿಸರ, ವೀಕ್ಷಣೆ, ಆರೈಕೆ ಮತ್ತು ಪ್ರೀತಿಯ ಲಭ್ಯತೆಯ ಮೂಲಕ ಮಗು ಕಲಿಯುವ ನೈತಿಕ ಮೌಲ್ಯಗಳನ್ನು ಪರಿಗಣಿಸಬೇಕು. ಮಗುವಿಗೆ ಇದು ಹೆಚ್ಚು ಅಗತ್ಯವಿದ್ದು, ನಂತರ ಸಮತೋಲನವನ್ನು ಸಾಧಿಸಿ, ಅದು ಮಗುವಿನ ಕಲ್ಯಾಣ ಮತ್ತು ಹಿತಾಸಕ್ತಿಗೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.