Bangalore Riots 2020
Bangalore Riots 2020 
ಸುದ್ದಿಗಳು

ಡಿ ಜೆ ಹಳ್ಳಿ ಗಲಭೆ ಪ್ರಕರಣ: ಎನ್‌ಐಎ ನ್ಯಾಯಾಲಯದ ಆದೇಶ ವಜಾಗೊಳಿಸಿ 115 ಮಂದಿಗೆ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್‌

Bar & Bench

ಕಳೆದ ವರ್ಷದ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾಗಿದ್ದ 115 ಆರೋಪಿಗಳಿಗೆ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 167(2)ರ ಅಡಿ ಕರ್ನಾಟಕ ಹೈಕೋರ್ಟ್‌ ಈಚೆಗೆ ಜಾಮೀನು ಮಂಜೂರು ಮಾಡಿದೆ (ಮುಜಾಮಿಲ್‌ ಪಾಷಾ ವರ್ಸಸ್‌ ರಾಷ್ಟ್ರೀಯ ತನಿಖಾ ಸಂಸ್ಥೆ).

ಆರೋಪಪಟ್ಟಿ ಸಲ್ಲಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಕಾಲಾವಕಾಶ ನೀಡಿ ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದ ವಿಶೇಷ ಎನ್‌ಐಎ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ತಳ್ಳಿಹಾಕಿದೆ.

“ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) 1967 ಸೆಕ್ಷನ್‌ 43-ಡಿ(2)(ಬಿ)ರ ಮೊದಲ ನಿಬಂಧನೆಯಡಿ ತನಿಖೆ ಪೂರ್ಣಗೊಳಿಸಲು ಕಾಲಾವಕಾಶ ನೀಡುವಂತೆ ಕೋರಿ ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ 2020ರ ನವೆಂಬರ್‌ 3ರ ಆದೇಶ ಮತ್ತು ಸಿಆರ್‌ಪಿಸಿ ಸೆಕ್ಷನ್‌ 167(2)ರ ಅಡಿ ಅರ್ಜಿದಾರರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ 2021ರ ಜನವರಿ 5ರಂದು ಎನ್‌ಐಎ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು (ಸಿಸಿಎಚ್‌-50) ಈ ಮೂಲಕ ಬದಿಗೆ ಸರಿಸಲಾಗಿದೆ” ಎಂದು ಹೈಕೋರ್ಟ್‌ ಹೇಳಿದೆ.

ಇಬ್ಬರ ಶ್ಯೂರಿಟಿ ಮತ್ತು ರೂ. 2 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್‌ ಸಲ್ಲಿಸುವಂತೆ ನಿರ್ದೇಶಿಸಿರುವ ನ್ಯಾಯಾಲಯವು ಎಲ್ಲಾ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.

“ಕಾನೂನಿನ ಹೊರತಾಗಿ ಸಂವಿಧಾನದ 21ನೇ ವಿಧಿಯಡಿ ವ್ಯಕ್ತಿಗೆ ದೊರೆತಿರುವ ಮೂಲಭೂತ ಹಕ್ಕನ್ನು ನಿರಾಕರಿಸಲಾಗದು. ತನಿಖೆ ಪೂರ್ಣಗೊಳಿಸಲು ಕಾಲಾವಕಾಶ ನೀಡುವಂತೆ ಪ್ರಾಸಿಕ್ಯೂಷನ್‌ ಕೋರಿರುವುದಕ್ಕೆ ಅನುಮತಿಸಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಈಗಾಗಲೇ ಹೇಳಲಾಗಿದೆ. ಆರೋಪಿಗಳನ್ನು ಬಂಧಿಸಿ 90 ದಿನಗಳಾಗಿರುವ ಹಿನ್ನೆಲೆಯಲ್ಲಿ ಅವರು ಶಾಸನಬದ್ಧವಾಗಿ ಸಿಆರ್‌ಪಿಸಿ ಸೆಕ್ಷನ್‌ 167(2)ರ ಅಡಿ ಭದ್ರತೆ ನೀಡಲು ಸಿದ್ಧವಾಗಿದ್ದು, ಜಾಮೀನು ಕೋರಿರುವುದನ್ನು ನಿರಾಕರಿಸಲಾಗದು” ಎಂದು ಆದೇಶದಲ್ಲಿ ಹೇಳಲಾಗಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಅವರ ಸಂಬಂಧಿ ಪಿ ನವೀನ್‌ ಎಂಬುವವರು ಫೇಸ್‌ಬುಕ್‌ನಲ್ಲಿ ಪ್ರವಾದಿ ಮೊಹಮ್ಮದ್‌ ಅವರನ್ನು ನಿಂದಿಸುವ ಪೋಸ್ಟ್‌ ಹಾಕಿದ್ದನ್ನು ವಿರೋಧಿಸಿ ಬೆಂಗಳೂರು ಈಶಾನ್ಯದಲ್ಲಿರುವ ಡಿ ಜೆ ಹಳ್ಳಿ ಪೊಲೀಸ್‌ ಠಾಣೆಯ ಎದುರು ಸುಮಾರು 300 ಮಂದಿಯನ್ನು ಒಳಗೊಂಡ ಉದ್ರಿಕ್ತರ ಗುಂಪು ಜಮಾವಣೆಗೊಂಡಿತ್ತು. ಕ್ಷಣಮಾತ್ರದಲ್ಲೇ ಪೊಲೀಸರು ಮತ್ತು ಉದ್ರಿಕ್ತರ ನಡುವೆ ಘರ್ಷಣೆ ಏರ್ಪಟ್ಟಿದ್ದು, ಪೊಲೀಸರು ಗುಂಡು ಹಾರಿಸಿದ್ದರಿಂದ ಮೂವರು ಮೃತಪಟ್ಟಿದ್ದರು. ಘಟನೆಯಲ್ಲಿ ಹಲವು ಪೊಲೀಸರು ಹಾಗೂ ಪತ್ರಕರ್ತರು ಗಾಯಗೊಂಡಿದ್ದರು.

ಘಟನೆಯ ಬೆನ್ನಿಗೇ ಆರೋಪಿ ಮುಜಾಮಿಲ್‌ ಪಾಷಾ ಮತ್ತು ಇತರರನ್ನು ಯುಎಪಿಎ, ಭಾರತೀಯ ದಂಡ ಸಂಹಿತೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ನಿಯಂತ್ರಣ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ದೂರು ದಾಖಲಿಸಿ, ಆಗಸ್ಟ್‌ 12ರಂದು ಬಂಧಿಸಲಾಗಿತ್ತು.

ಸದರಿ ಪ್ರಕರಣದಲ್ಲಿ 90 ದಿನಗಳು ಪೂರ್ಣಗೊಂಡಿದ್ದು, ತನಿಖೆಗೆ ಸಂಬಂಧಿಸಿದಂತೆ ಅಂತಿಮ ವರದಿ ಸಲ್ಲಿಸಲು ಕಾಲಾವಕಾಶ ಕೋರಿ ಕಳೆದ ನವೆಂಬರ್‌ 3ರಂದು ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಅಂದೇ ಎನ್‌ಐಎ ನ್ಯಾಯಾಲಯ ಅಸ್ತು ಎಂದಿತ್ತು. ಇದರ ಬೆನ್ನಿಗೇ ಆರೋಪಿಗಳು ಡೀಫಾಲ್ಟ್‌ ಜಾಮೀನು ಕೋರಿ ನವೆಂಬರ್‌ 11ರಂದು ಸಲ್ಲಿಸಿದ್ದ ಮನವಿಯನ್ನು ಎನ್‌ಐಎ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

“ತನಿಖೆಗೆ ಸಂಬಂಧಿಸಿದಂತೆ ಕಾಲಾವಕಾಶ ಕೋರಿ ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಮನವಿ ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳಾಗಿರುವ ಅರ್ಜಿದಾರರಿಗೆ ವಾದ ಮಂಡಿಸಲು ಅವಕಾಶ ನೀಡಲಾಗಿಲ್ಲ. ಅರ್ಜಿದಾರರ ಅನುಪಸ್ಥಿತಿಯಲ್ಲಿ ಪ್ರಾಸಿಕ್ಯೂಷನ್‌ ಮನವಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೇ, ಕಾಲಾವಕಾಶ ಕೋರಿ ಪ್ರಾಸಿಕ್ಯೂಷನ್‌ ಮನವಿ ಸಲ್ಲಿಸಿದ್ದು, ಅದನ್ನು ನ್ಯಾಯಾಲಯ ಪರಿಗಣಿಸುತ್ತಿದೆ ಎಂದು ಅರ್ಜಿದಾರರಿಗೆ ಮಾಹಿತಿ ನೀಡಲಾಗಿಲ್ಲ. ಹೀಗಾಗಿ, ಯುಎಪಿಎ ಸೆಕ್ಷನ್‌ 43-ಡಿ(2)(ಬಿ)ರ ಮೊದಲ ನಿಬಂಧನೆಯಡಿ ತನಿಖೆ ಪೂರ್ಣಗೊಳಿಸಲು ಕಾಲಾವಕಾಶ ನೀಡುವಂತೆ ಕೋರಿ ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಮನವಿಗೆ ಕಾನೂನು ಮಾನ್ಯತೆ ಲಭಿಸುವುದಿಲ್ಲ” ಎಂದು ಹೈಕೋರ್ಟ್‌ ಹೇಳಿದೆ.

“ತನಿಖೆಗೆ ಕಾಲಾವಕಾಶ ಕೋರಿ ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಮನವಿಯ ಕುರಿತು ಆರೋಪಿಗಳಿಗೆ ಅಥವಾ ಅವರ ಪರ ವಕೀಲರಿಗೆ ಮಾಹಿತಿಯನ್ನೇ ನೀಡಲಾಗಿಲ್ಲ” ಎಂದು ಹೈಕೋರ್ಟ್‌ ಬೊಟ್ಟು ಮಾಡಿದೆ.

ಕಾಲಾವಕಾಶ ವಿಸ್ತರಣೆಯಾದ ಅವಧಿಯಲ್ಲಿ ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿರುವುದರಿಂದ ಆರೋಪಿಗಳು ಸಿಆರ್‌ಪಿಸಿ ಸೆಕ್ಷನ್‌ 439ರ ಸಾಮಾನ್ಯ ಜಾಮೀನಿಗೆ ಮನವಿ ಸಲ್ಲಿಸಬಹುದು ಎಂಬ ಪ್ರಾಸಿಕ್ಯೂಷನ್‌ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. “ಬಿಕ್ರಮ್‌ಜಿತ್‌ ಸಿಂಗ್‌ ಪ್ರಕರಣದಲ್ಲಿ ಹೇಳಿರುವಂತೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದ ಮಾತ್ರಕ್ಕೆ ಅರ್ಜಿದಾರರ ಪರವಾಗಿದ್ದರೆ ಅವರ ಹಕ್ಕನ್ನು ಕಸಿಯಲಾಗದು” ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಾಲಯವು ಎಲ್ಲಾ ಆರೋಪಿಗಳಿಗೂ ಜಾಮೀನು ನೀಡಿದ್ದು, ಎನ್‌ಐಎ ಆದೇಶವನ್ನು ತಳ್ಳಿಹಾಕಿದೆ.