Karnataka High Court and Byju 
ಸುದ್ದಿಗಳು

ಇಂದಿನ ಇಜಿಎಂ ನಿರ್ಧಾರ ಜಾರಿಗೆ ಹೈಕೋರ್ಟ್‌ ಮಧ್ಯಂತರ ತಡೆ: ಬೈಜೂಸ್‌ ಸಂಸ್ಥಾಪಕ ರವೀಂದ್ರನ್‌ ನಿರಾಳ

ಕಂಪೆನಿಯ ನಾಯಕತ್ವದಲ್ಲಿನ ಬದಲಾವಣೆಯ ಬಗ್ಗೆ ಚರ್ಚಿಸಲು ಷೇರುದಾರರು ಇಜಿಎಂಗೆ ಕರೆ ನೀಡಿದ್ದಾರೆ. ರವೀಂದ್ರನ್ ಸೇರಿದಂತೆ ಪ್ರಸ್ತುತ ನಾಯಕತ್ವವನ್ನು ಹೊರಹಾಕಲು ಮತ್ತು ಮಂಡಳಿಯನ್ನು ಪುನರ್ ರಚಿಸಲು ಷೇರುದಾರರು ಬಯಸಿದ್ದಾರೆ ಎಂದು ವರದಿಯಾಗಿದೆ.

Bar & Bench

ಬೈಜೂಸ್‌ ಎಜುಟೆಕ್‌ ಸಂಸ್ಥೆಯ ಷೇರುದಾರರು ಇಂದು (ಫೆ. 23) ನಡೆಸಲಿರುವ ಅಸಾಧಾರಣ ಸಾಮಾನ್ಯ ಸಭೆಯಲ್ಲಿ (ಇಜಿಎಂ) ಕೈಗೊಳ್ಳುವ ನಿರ್ಧಾರ ಜಾರಿಗೊಳಿಸದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ವಿಧಿಸಿದ್ದು ಅಷ್ಟರಮಟ್ಟಿಗೆ ಬೈಜೂಸ್‌ ಸಂಸ್ಥಾಪಕ ರವೀಂದ್ರನ್‌ ನಿರಾಳರಾಗಿದ್ದಾರೆ. ಮೂಲಕ ಎಜುಟೆಕ್ ಕಂಪೆನಿ ಬೈಜುಸ್ ಸಂಸ್ಥಾಪಕ ಬೈಜು ರವೀಂದ್ರನ್ಗೆ ತಾತ್ಕಾಲಿಕ ನೆರವು ಕಲ್ಪಿಸಿದೆ.

ಬೈಜೂಸ್‌ನ ಪ್ರಮುಖ ಹೂಡಿಕೆದಾರರು/ಷೇರುದಾರರಾದ ಚಾನ್ ಜುಕೆರ್ಬರ್ಗ್ ಒಡೆತನದ ಜನರಲ್ ಅಟ್ಲಾಂಟಿಕ್, ಪ್ರೊಸುಸ್ ವೆಂಚರ್ಸ್ ಮತ್ತು ಪೀಕ್ ಎಕ್ಸ್ವಿ ಸಂಸ್ಥೆಗಳು ಬೈಜೂಸ್ ನಾಯಕತ್ವ ಬದಲಿಸಲು ಅಸಾಧಾರಣ ಸಾಮಾನ್ಯ ಸಭೆ ಕರೆದಿವೆ. ಹೈಕೋರ್ಟ್‌ನ ಆದೇಶವು ಸಭೆಯಲ್ಲಿ ಒಂದೊಮ್ಮೆ ಬೈಜು ರವೀಂದ್ರನ್ ಅವರನ್ನು ಸಂಸ್ಥೆಯಿಂದ ಹೊರಹಾಕುವ ನಿರ್ಣಯ ಕೈಗೊಂಡಲ್ಲಿ ತಾತ್ಕಾಲಿಕವಾಗಿ ಅವರಿಗೆ ರಕ್ಷಣೆ ಒದಗಿಸಲಿದೆ. ಹಣಕಾಸು ನಿರ್ವಹಣೆಯ ಕಾರಣಗಳನ್ನು ಉಲ್ಲೇಖಿಸಿ ರವೀಂದ್ರನ್ ಸೇರಿದಂತೆ ಹಾಲಿ ನಾಯಕತ್ವವನ್ನು ಷೇರುದಾರರು ವಜಾ ಮಾಡಲು ಬಯಸಿದ್ದು, ಹೊಸದಾಗಿ ಮಂಡಳಿ ರಚಿಸಲು ಬಯಸಿದ್ದಾರೆ ಎನ್ನಲಾಗಿದೆ.

ಕಂಪೆನಿಗಳ ಕಾಯಿದೆ ಸೆಕ್ಷನ್ 100(3)ರ ಅಡಿ ನೋಟಿಸ್ ಜಾರಿ ಮಾಡುವ ಮೂಲಕ ಹೂಡಿಕೆದಾರರು ಫೆಬ್ರವರಿ 23ರಂದು ಅಸಾಧಾರಣ ಸಾಮಾನ್ಯ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಬೈಜೂಸ್ ಹೈಕೋರ್ಟ್ ಕದತಟ್ಟಿತ್ತು.

ಸಭೆ ನಡೆಸಲು ಪಾಲಿಸಬೇಕಾದ ಷರತ್ತುಗಳನ್ನು ಮೇಲ್ನೋಟಕ್ಕೆ ಪಾಲಿಸಲಾಗಿಲ್ಲ ಎಂದು ನ್ಯಾಯಮೂರ್ತಿ ಅನಂತ ರಾಮನಾಥ್ ಹೆಗ್ಡೆ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ. ಹೀಗಾಗಿ, ಮಧ್ಯಂತರ ತಡೆಯಾಜ್ಞೆ ಮಾಡಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

"ಇಜಿಎಂ ನಡೆಸಲು ಷರತ್ತುಗಳನ್ನು ಪಾಲಿಸಲಾಗಿಲ್ಲ. ಕಂಪೆನಿಗಳ ಕಾಯಿದೆ ಸೆಕ್ಷನ್ 100(3)ರಲ್ಲಿ ಉಲ್ಲೇಖಿಸಿರುವಂತೆ ನೋಟಿಸ್ ಜಾರಿ ಮಾಡಲಾಗಿಲ್ಲ. ವಾದ ಪರಿಗಣಿಸಿ ಹಾಗೂ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮಧ್ಯಂತರ ಆದೇಶ ಮಾಡುವುದು ಸೂಕ್ತ ಎಂದು ನ್ಯಾಯಾಲಯಕ್ಕೆ ಮನವರಿಕೆಯಾಗಿದೆ. ಫೆಬ್ರವರಿ 23ರಂದು ನಡೆಸಲು ಉದ್ದೇಶಿಸಿರುವ ಇಜಿಎಂನಲ್ಲಿ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಮುಂದಿನ ವಿಚಾರಣೆವರೆಗೆ ಜಾರಿಗೊಳಿಸುವಂತಿಲ್ಲ" ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಕಂಪೆನಿಗಳ ಕಾಯಿದೆಯ ಅನ್ವಯ ನಿಯಮ ಪಾಲಿಸದೇ ಹೂಡಿಕೆದಾರರು/ಷೇರುದಾರರ ಸೂಚನೆಯಂತೆ ಇಜಿಎಂ ಆಯೋಜಿಸಲಾಗಿದೆ. ನೋಟಿಸ್ ನೀಡದೇ ಇಜಿಎಂ ಆಯೋಜಿಸುವ ಮೂಲಕ ಷರತ್ತು ಉಲ್ಲಂಘಿಸಲಾಗಿದೆ ಎಂದು ಬೈಜೂಸ್ ವಾದಿಸಿತ್ತು.

ಈ ವಾದ ಪುರಸ್ಕರಿಸಿದ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ಮಾಡಿದ್ದು, ವಿಚಾರಣೆಯನ್ನು ಮಾರ್ಚ್ 13ಕ್ಕೆ ಮುಂದೂಡಿದೆ