Ravi Patil and Karnatak HC-Dharwad bench 
ಸುದ್ದಿಗಳು

ಬೆಳಗಾವಿ ಎಸ್‌ಐಆರ್‌: ಬಿಜೆಪಿಯ ರವಿ ಪಾಟೀಲ್‌ ಸೇರಿ ಮೂವರ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ಆದೇಶ

ಅರ್ಜಿದಾರರು ಸೇರಿ ಸುಮಾರು 20-25 ಮಂದಿಯು ಮುಸ್ಲಿಂ ಮತದಾರರನ್ನು ಗುರಿಯಾಗಿಸಿ ಸಂಚು ರೂಪಿಸಿದ್ದರು. ಎಸ್‌ಐಆರ್‌ ಪ್ರಕ್ರಿಯೆಯಲ್ಲಿ 198 ಮುಸ್ಲಿಮ್‌ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಪ್ರಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.

Bar & Bench

ಬೆಳಗಾವಿಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವೇಳೆ 198 ಮುಸ್ಲಿಂ ಮತದಾರರ ಹೆಸರುಗಳನ್ನು ಅಳಿಸಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ ಸಂಬಂಧಿತ ಪ್ರಕರಣದಲ್ಲಿ ಬಿಜೆಪಿ ನಾಯಕ ರವಿ ಪಾಟೀಲ್‌ ಮತ್ತು ಅವರ ಇಬ್ಬರು ಬೆಂಬಲಿಗರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಕರ್ನಾಟಕ  ಹೈಕೋರ್ಟ್ನ ಧಾರವಾಡ ಪೀಠವು ಗುರುವಾರ ನಿರ್ದೇಶಿಸಿದೆ.

ಬೆಳಗಾವಿಯ ಮಾರ್ಕೆಟ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಮತ್ತು ಆನಂತರ ಕಾನೂನು ಪ್ರಕ್ರಿಯೆ ರದ್ದತಿ ಕೋರಿ ಬಿಜೆಪಿ ನಾಯಕ ರವಿ ಬಸಲಿಂಗಪ್ಪಗೌಡ ಪಾಟೀಲ್, ಅವರ ಬೆಂಬಲಿಗರಾದ ಶಂಕರ ಬೀರಪ್ಪ ನಾಯಕ್ ಮತ್ತು ಪ್ರಶಾಂತ್ ಮುಂಡಿಮಾನಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವೆಂಕಟೇಶ್ ನಾಯಕ್ ಟಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Venkatesh Nai

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಮತ್ತು ದೂರುದಾರ ಮೀರಾಸಾಬ್ ಸನದಿ ಅವರಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ. ಅಲ್ಲದೆ, ಇತ್ತೀಚಿನ ತನಿಖಾ ವರದಿಯೊಂದಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕಾಲಾವಕಾಶ ನೀಡಿದೆ.

“ಅಲ್ಲಿಯವರೆಗೆ ಪ್ರತಿವಾದಿ ಪೊಲೀಸರು/ತನಿಖಾಧಿಕಾರಿಯು ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು,” ಎಂದು ನ್ಯಾಯಾಲಯ ಆದೇಶಿಸಿದ್ದು, ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ಮುಂದೂಡಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಬಸಲಿಂಗಪ್ಪಗೌಡ ಪಾಟೀಲ್ಗೆ ಬೆಳಗಾವಿ ಸತ್ರ ನ್ಯಾಯಾಲಯವು ಅಕ್ಟೋಬರ್ 3ರಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ಎಫ್‌ಐಆರ್‌ನಲ್ಲಿ ಅರ್ಜಿದಾರರು ಸೇರಿದಂತೆ ಸುಮಾರು 20-25 ಮಂದಿಯು ಮುಸ್ಲಿಂ ಸಮುದಾಯಕ್ಕೆ ಸೇರಿದ ಮತದಾರರನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದರು ಹಾಗೂ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ 198 ಮುಸ್ಲಿಮ್‌ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲು ಪ್ರಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಸಂದರ್ಭದಲ್ಲಿ, ಒಂದಕ್ಕಿಂತ ಹೆಚ್ಚು ಕಡೆ ಹೆಸರುಗಳಿರುವುದು ಸೇರಿದಂತೆ ವಿವಿಧ ಕಾರಣಗಳನ್ನು ಉಲ್ಲೇಖಿಸಿ ಆಕ್ಷೇಪಣೆ ಸಲ್ಲಿಸಿರುವ ಮಾತ್ರಕ್ಕೆ ಎಫ್‌ಐಆರ್‌ನಲ್ಲಿ ಆರೋಪಿಸಿರುವ ಅಪರಾಧಗಳು ಅನ್ವಯಿಸುವುದಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.

Senior Advocate Aruna Shyam

ಅರ್ಜಿದಾರರ ವಿರುದ್ಧ ಬೆಳಗಾವಿಯ ಮಾರ್ಕೆಟ್‌ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ಗಳಾದ 190, 192, 3(5), 3(7), 318(4), 336(3), 336(4), 353 ಮತ್ತು 61(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣಾ ಶ್ಯಾಮ್ ವಾದ ಮಂಡಿಸಿದ್ದು, ವಕೀಲರಾದ ಶುಭಂ ಎಫ್. ಕುಸಲಾಪುರ ಮತ್ತು ದೇವಿರಾಜ್ ಟಿ. ಬಸ್ತವಾಡ್ಕರ್ ಅವರು ವಕಾಲತ್ತು ವಹಿಸಿದ್ದಾರೆ.