ಸಾರ್ವಜನಿಕ ಪ್ರಾಧಿಕಾರಗಳ ವಿರುದ್ಧ ಆರೋಪ ಮಾಡುವ ಮುನ್ನ ಸಂಬಂಧಿತ ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸಿ, ವಾಸ್ತವಾಂಶಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಉದ್ಯಾನವನದ ಜಾಗ ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡ ನಿರ್ಮಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಅಪಾರ್ಟ್ಮೆಂಟ್ವೊಂದರ ಆರು ನಿವಾಸಿಗಳಿಗೆ ₹1 ಲಕ್ಷ ದಂಡ ವಿಧಿಸಿದೆ.
ಬೆಂಗಳೂರಿನ ಜೆ ಪಿ ನಗರ 8ನೇ ಹಂತದ ಆರ್ಯ ಹಂಸ ಅಪಾರ್ಟ್ಮೆಂಟ್ ನಿವಾಸಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಮತ್ತು ಎಚ್ ಶಾಂತಿಭೂಷಣ್ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.
"ನ್ಯಾಯಾಲಯದಿಂದ ಪರಿಹಾರ ಬಯಸುವ ವ್ಯಕ್ತಿ ಸ್ಪಷ್ಟವಾದ, ನಿರ್ದಿಷ್ಟವಾದ ಮತ್ತು ಸರಿಯಾದ ವಾಸ್ತವಾಂಶಗಳೊಂದಿಗೆ ನ್ಯಾಯಾಲಯವನ್ನು ಸಂಪರ್ಕಿಸಬೇಕು. ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಎಚ್ಚರಿಕೆ ವಹಿಸಿ ಸಂಪೂರ್ಣ ವಾಸ್ತವಾಂಶಗಳನ್ನು ನ್ಯಾಯಾಲಯದ ಮುಂದಿಡುವುದು ಅರ್ಜಿದಾರರ ಕರ್ತವ್ಯ" ಎಂದು ಪೀಠ ಹೇಳಿದೆ.
ಸಂಬಂಧಿತ ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸದೆ ಸಾರ್ವಜನಿಕ ಪ್ರಾಧಿಕಾರಗಳ ವಿರುದ್ಧ ಆರೋಪಗಳನ್ನು ಮಾಡಿರುವ ರೀತಿಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
"ಸಾರ್ವಜನಿಕ ಪ್ರಾಧಿಕಾರಗಳ ವಿರುದ್ಧ ದಾಖಲೆಗಳ ಸರಿಯಾದ ಪರಿಶೀಲನೆ ಇಲ್ಲದೆ ಮಾಡುವ ಅಸ್ಪಷ್ಟ ಹೇಳಿಕೆಗಳು ಅಥವಾ ಸಾಮಾನ್ಯ ಆರೋಪಗಳು ಪರಿಹಾರ ನೀಡಲು ಆಧಾರವಾಗಲಾರವು. ಅರ್ಜಿದಾರರ ಇಂತಹ ನಡೆ ಅನಗತ್ಯ ನ್ಯಾಯಾಂಗ ಕಲಾಪಗಳಿಗೆ ಕಾರಣವಾಗಿದ್ದು, ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥವಾಗಿದೆ" ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಕುತ್ತನೂರು ಗ್ರಾಮದ ಸರ್ವೆ ನಂಬರ್ 28/3ರ ಒಂದು ಭಾಗವನ್ನು 2015ರ ಪರಿಷ್ಕೃತ ಮಾಸ್ಟರ್ ಪ್ಲಾನ್ನಲ್ಲಿ ಉದ್ಯಾನವನ ಅಥವಾ ತೆರೆದ ಜಾಗವೆಂದು ಗುರುತಿಸಲಾಗಿದೆ. ಆದರೆ, ಕೆಲವರು ಅಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಆರ್ಯ ಹಂಸ ಅಪಾರ್ಟ್ಮೆಂಟ್ ನಿವಾಸಿಗಳು ಆರೋಪಿಸಿದ್ದರು.
2024ರ ಅಕ್ಟೋಬರ್ನಲ್ಲಿ ಉದ್ಯಾನವನದ ಸುತ್ತಲಿನ ಬೇಲಿಯನ್ನು ತೆರವುಗೊಳಿಸಿ, ಜಾಗ ಸಮತಟ್ಟು ಮಾಡಿ ಕಟ್ಟಡ ನಿರ್ಮಾಣಕ್ಕೆ ಕಂಬಗಳ ಅಡಿಪಾಯ ಹಾಕುವ ಕೆಲಸ ಆರಂಭಿಸಲಾಗಿದೆ. ಯಾವುದೇ ಮಂಜೂರಾದ ಕಟ್ಟಡ ನಕ್ಷೆ ಇಲ್ಲದೆ ನಿರ್ಮಾಣ ನಡೆಯುತ್ತಿದ್ದರೂ ಬಿಬಿಎಂಪಿ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ನಿವಾಸಿಗಳು ದೂರು ಸಲ್ಲಿಸಿದ್ದರು.
ಈ ಸಂಬಂಧ ಬಿಬಿಎಂಪಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
2025ರ ಜುಲೈ 1ರಂದು ಏಕಸದಸ್ಯ ಪೀಠವು ಬಿಬಿಎಂಪಿ ಕಾಯಿದೆ 2020ರ ಸೆಕ್ಷನ್ 248ರ ಅಡಿ ಪ್ರಾಧಿಕಾರವು ಈಗಾಗಲೇ ತಾತ್ಕಾಲಿಕ ಆದೇಶ ಹೊರಡಿಸಿರುವುದನ್ನು ಪರಿಗಣಿಸಿ, ಕಾನೂನು ಪ್ರಕ್ರಿಯೆ ಅನುಸರಿಸಿ ವಿಚಾರಣೆ ಪೂರ್ಣಗೊಳಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿತ್ತು.
ಇದನ್ನು ಪ್ರಶ್ನಿಸಿ ನಿವಾಸಿಗಳು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿವಾದಿತ ಜಾಗದಲ್ಲಿ ನಿರ್ಮಾಣ ಪೂರ್ಣಗೊಂಡಿದ್ದು, ಶಾಲೆಯೂ ಆರಂಭವಾಗಿದೆ. ಇದು ಉದ್ಯಾನವನದ ಜಾಗದ ಅತಿಕ್ರಮಣವಾಗಿದ್ದು, ಸಂವಿಧಾನದ 21ನೇ ವಿಧಿಯಡಿ ಪ್ರತಿಪಾದಿಸಿರುವ ಸ್ವಚ್ಛ ಮತ್ತು ಆರೋಗ್ಯಕರ ಪರಿಸರದ ಹಕ್ಕಿನ ಉಲ್ಲಂಘನೆಯಾಗಿದೆ. ಹೀಗಾಗಿ ಕಟ್ಟಡವನ್ನು ನೆಲಸಮಗೊಳಿಸಲು ನಿರ್ದೇಶಿಸಬೇಕು ಎಂದು ಕೋರಿದ್ದರು.
ವಿಚಾರಣೆ ವೇಳೆ ವಿವಾದಿತ ಆಸ್ತಿಯ ಮಾಲೀಕತ್ವ ಹೊಂದಿರುವುದಾಗಿ ಹೇಳಿಕೊಂಡವರು ಮಧ್ಯಪ್ರವೇಶ ಅರ್ಜಿ ಸಲ್ಲಿಸಿ, ಸರ್ವೆ ನಂಬರ್ 28/3ರಲ್ಲಿರುವ ಸೈಟ್ಗಳು ಬಿಡಿಎ ಅನುಮೋದಿತ ಬಡಾವಣೆಯ ಭಾಗವಾಗಿವೆ ಎಂದು ವಾದಿಸಿದ್ದರು.
2000ರಲ್ಲಿ 70:30 ಯೋಜನೆಯಡಿ ಬಡಾವಣೆಗೆ ಅನುಮೋದನೆ ನೀಡಲಾಗಿತ್ತು. ಬಳಿಕ 2002ರಲ್ಲಿ ಬಡಾವಣೆಯ ಪರಿಷ್ಕೃತ ನಕ್ಷೆಗೆ ಅನುಮೋದನೆ ದೊರೆತಿತ್ತು. ಸೈಟ್ ನಂಬರ್ 677, 678, 679 ಮತ್ತು 680 ಅನ್ನು ಬಿಡಿಎ ಬಿಡುಗಡೆ ಮಾಡಿತ್ತು ಎಂದು ಅವರು ದಾಖಲೆಗಳನ್ನು ಸಲ್ಲಿಸಿದ್ದರು.
ಇದನ್ನು ಪರಿಶೀಲಿಸಿದ ಬಿಡಿಎ, ಮೂಲ ಬಡಾವಣೆಯ ನಕ್ಷೆಯಲ್ಲಿ ಸರ್ವೆ ನಂಬರ್ 28/3ರ ಒಂದು ಭಾಗದಲ್ಲಿ ಗುರುತಿಸಲಾಗಿದ್ದ ಉದ್ಯಾನವನ/ತೆರೆದ ಜಾಗವನ್ನು ಬಡಾವಣೆಯ ಭಾಗವಾಗಿರುವ ಸರ್ವೆ ನಂಬರ್ 30(ಪಿ)ಗೆ ಸ್ಥಳಾಂತರಿಸಲಾಗಿತ್ತು ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿತ್ತು.
ಬಡಾವಣೆಯ ಅನುಷ್ಠಾನದ ಸಂದರ್ಭದಲ್ಲಿ ಭೂಮಿಯ ಭೌತಿಕ ಲಕ್ಷಣಗಳು ಮತ್ತು ಭೌಗೋಳಿಕ ಸ್ವರೂಪಕ್ಕೆ ಅನುಗುಣವಾಗಿ ಕೆಲವು ಬದಲಾವಣೆಗಳನ್ನು ಮಾಡಲಾಗಿತ್ತು. ಈ ಬದಲಾವಣೆಗಳನ್ನು ಪರಿಶೀಲಿಸಿದ ಬಳಿಕ 2002ರ ಅಕ್ಟೋಬರ್ 19ರಂದು ಸಕ್ಷಮ ಪ್ರಾಧಿಕಾರ ಪರಿಷ್ಕೃತ ಬಡಾವಣೆಯ ನಕ್ಷೆಗೆ ಅನುಮೋದನೆ ನೀಡಿತ್ತು. ನವೆಂಬರ್ 11ರಂದು ಬಿಡಿಎ ಆಯುಕ್ತರು ಅದನ್ನು ಅಧಿಕೃತವಾಗಿ ಅನುಮೋದಿಸಿದ್ದರು ಎಂದು ತಿಳಿಸಿತ್ತು.
ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ಸಂಪೂರ್ಣವಾಗಿ ತೆಗೆದುಹಾಕಿರಲಿಲ್ಲ. ಬದಲಿಗೆ ಅದನ್ನು ಅದೇ ಬಡಾವಣೆಯ ಮತ್ತೊಂದು ಭಾಗಕ್ಕೆ ಸ್ಥಳಾಂತರಿಸಲಾಗಿತ್ತು ಎಂದು ಬಿಡಿಎ ಸ್ಪಷ್ಟಪಡಿಸಿತ್ತು.
ಅಲ್ಲದೆ, ವಿವಾದಿತ ನಾಲ್ಕು ಸೈಟ್ಗಳನ್ನು ಉದ್ಯಾನವನ, ಆಟದ ಮೈದಾನ ಅಥವಾ ತೆರೆದ ಜಾಗಕ್ಕಾಗಿ ಮೀಸಲಿಟ್ಟಿರುವುದಾಗಿ ಬಿಡಿಎ ದಾಖಲೆಗಳಲ್ಲಿ ಉಲ್ಲೇಖವಿಲ್ಲ. ಅವುಗಳನ್ನು ಅನುಮೋದಿತ 70:30 ಬಡಾವಣೆಯ ಭಾಗವಾಗಿ ಬಿಡುಗಡೆ ಮಾಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿತ್ತು.
ಬಿಡಿಎ ಮತ್ತು ಬಿಬಿಎಂಪಿ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ವಿಭಾಗೀಯ ಪೀಠ, ಸರ್ವೆ ನಂಬರ್ 28/3ರಲ್ಲಿ ಉದ್ಯಾನವನ ಅಥವಾ ತೆರೆದ ಜಾಗವನ್ನು ಅತಿಕ್ರಮಿಸಲಾಗಿದೆ ಎಂಬ ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂದು ಹೇಳಿದೆ.
ಪರಿಷ್ಕೃತ ಬಡಾವಣೆಯ ನಕ್ಷೆಯಡಿ ಉದ್ಯಾನವನದ ಜಾಗವನ್ನು ಸರ್ವೆ ನಂಬರ್ 30(ಪಿ)ಗೆ ಸ್ಥಳಾಂತರಿಸಲಾಗಿದ್ದು, ಈ ಬದಲಾವಣೆಗೆ ಸಕ್ಷಮ ಪ್ರಾಧಿಕಾರದ ಅನುಮೋದನೆಯೂ ದೊರೆತಿದೆ. ಹೀಗಾಗಿ ವಿವಾದಿತ ಸೈಟ್ಗಳಲ್ಲಿ ನಿರ್ಮಾಣವಾಗಿರುವ ಕಟ್ಟಡವು ಉದ್ಯಾನವನದ ಜಾಗದ ಅತಿಕ್ರಮಣ ಎಂಬ ಅರ್ಜಿದಾರರ ವಾದವನ್ನು ದಾಖಲೆಗಳು ಸಮರ್ಥಿಸುವುದಿಲ್ಲ ಎಂದು ಪೀಠ ಹೇಳಿದೆ.
2015ರ ವಲಯ ನಿಯಮಾವಳಿಗಳ ನಿಯಮ 3.16 ಅನ್ನು ಉಲ್ಲೇಖಿಸಿದ ನ್ಯಾಯಾಲಯ, ಪರಿಷ್ಕೃತ ಮಾಸ್ಟರ್ ಪ್ಲಾನ್ನಲ್ಲಿ ನಂತರದ ದಿನಗಳಲ್ಲಿ ಬದಲಾದ ವರ್ಗೀಕರಣವನ್ನು ತೋರಿಸಲಾಗಿದೆ ಎಂಬ ಕಾರಣಕ್ಕೆ ಈ ಹಿಂದೆಯೇ ಸಮರ್ಥ ಯೋಜನಾ ಪ್ರಾಧಿಕಾರ ಅಥವಾ ಸರ್ಕಾರ ನೀಡಿರುವ ಅನುಮತಿಗಳನ್ನು ಕಡೆಗಣಿಸಲಾಗದು ಎಂದು ಅಭಿಪ್ರಾಯಪಟ್ಟಿದೆ.
"ಸರ್ವೆ ನಂಬರ್ 28/3ರ ಉದ್ಯಾನವನ ಅಥವಾ ತೆರೆದ ಜಾಗವನ್ನು ಅತಿಕ್ರಮಿಸಿ ಮಧ್ಯಪ್ರವೇಶ ಅರ್ಜಿದಾರರು ಕಟ್ಟಡ ನಿರ್ಮಿಸಿದ್ದಾರೆ ಎಂಬ ಅರ್ಜಿಯ ಮೂಲಭೂತ ಆರೋಪವು ನ್ಯಾಯಾಲಯದ ಮುಂದಿರುವ ದಾಖಲೆಗಳಿಂದ ಸಾಬೀತಾಗಿಲ್ಲ" ಎಂದು ಪೀಠ ಸ್ಪಷ್ಟಪಡಿಸಿದೆ.
ಅರ್ಜಿದಾರರು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಸಾರ್ವಜನಿಕ ಪ್ರಾಧಿಕಾರಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದರಿಂದ ಅನಗತ್ಯ ನ್ಯಾಯಾಂಗ ಪ್ರಕ್ರಿಯೆ ನಡೆದಿದ್ದು, ನ್ಯಾಯಾಲಯದ ಸಮಯ ವ್ಯರ್ಥವಾಗಿದೆ ಎಂದು ಹೇಳಿದ ಪೀಠ, ಆರಂಭದಲ್ಲಿ ₹5 ಲಕ್ಷ ದಂಡ ವಿಧಿಸಲು ಉದ್ದೇಶಿಸಿತ್ತಾದರೂ, ನಂತರ ಉದಾರ ನಿಲುವು ತಳೆದು ₹1 ಲಕ್ಷಕ್ಕೆ ಸೀಮಿತಗೊಳಿಸಿತು.
ಅರ್ಜಿದಾರರು ಒಂದು ತಿಂಗಳೊಳಗೆ ₹1 ಲಕ್ಷ ಮೊತ್ತವನ್ನು ಏರ್ ಫೋರ್ಸ್ ಕಮಾಂಡ್ ಆಸ್ಪತ್ರೆಗೆ ಪಾವತಿಸಿ, ಅದರ ರಸೀದಿಯನ್ನು ಹೈಕೋರ್ಟ್ ರಿಜಿಸ್ಟ್ರಿಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ. ಅಂತಿಮವಾಗಿ ಮೇಲ್ಮನವಿಯನ್ನು ವಜಾಗೊಳಿಸಿದೆ.
ಅರ್ಜಿದಾರರ ಪರ ವಕೀಲ ವಿದ್ಯಾಧರ ಎಂ ದುರ್ಗೇಕರ್ ವಾದಿಸಿದ್ದರು. ಬಿಬಿಎಂಪಿ ಪರ ವಕೀಲ ಮೋನೇಶ್ ಕುಮಾರ್ ಕೆ ಬಿ ವಾದ ಮಂಡಿಸಿದ್ದರು. ಮಧ್ಯಪ್ರವೇಶ ಅರ್ಜಿದಾರರ ಪರ ಹಿರಿಯ ವಕೀಲ ಡಿ ಆರ್ ರವಿಶಂಕರ್ ವಾದಿಸಿದ್ದರು.