Karnataka High Court
Karnataka High Court 
ಸುದ್ದಿಗಳು

ವಿಚಾರಣೆಗೆ ಪದೇ ಪದೇ ತಕರಾರು: ವಿಧಾನಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್‌ಗೆ ಹೈಕೋರ್ಟ್ ದಂಡ

Bar & Bench

ಒಂದೇ ರೀತಿಯ ಪರಿಹಾರ ಕೋರಿ ಪದೇ ಪದೇ ನ್ಯಾಯಾಲಯದ ಮೆಟ್ಟಿಲೇರಿದ್ದಕ್ಕಾಗಿ ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ವಿಧಾನ ಪರಿಷತ್‌ ಸದಸ್ಯ ಸಿ ಪಿ ಯೋಗೇಶ್ವರ್‌ ಮತ್ತಿತರರಿಗೆ ರೂ. 21,000 ದಂಡ ವಿಧಿಸಿದೆ. ಯೋಗೇಶ್ವರ್ ಸಹೋದರ ಸಿ.ಪಿ.ಗಂಗಾಧರೇಶ್ವರ ಹಾಗೂ ಇತರರು ಸಲ್ಲಿಸಿದ್ದ ಏಳು ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ಪೀಠ, ಪ್ರತಿಯೊಂದು ಅರ್ಜಿಗೂ ತಲಾ ರೂ 3000 ದಂಡ ವಿಧಿಸಿದೆ.

ಮೆಗಾಸಿಟಿ (ಬೆಂಗಳೂರು) ಡೆವಲಪರ್ಸ್‌ ಅಂಡ್‌ ಬಿಲ್ಡರ್ಸ್‌ಗೆ ಸಂಬಂಧಿಸಿದ ಹಗರಣದಲ್ಲಿ ಯೋಗೇಶ್ವರ್‌ ಹಾಗು ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು ಯೋಗೇಶ್ವರ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ವಂಚನೆ, ನಕಲಿ ಸಹಿ ಮತ್ತಿತರ ಆರೋಪಗಳು ಅವರ ಮೇಲಿವೆ.

ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ತಮ್ಮ ವಿರುದ್ಧ ನಡೆಸುತ್ತಿದ್ದ ತನಿಖೆ ಪ್ರಶ್ನಿಸಿ ಯೋಗೇಶ್ವರ್‌ ಮತ್ತು ಕುಟುಂಬದ ಸದಸ್ಯರು ಹಾಗೂ ಇತರ ನಿರ್ದೇಶಕರು ವಿಶೇಷ ನ್ಯಾಯಾಲಯ ಮತ್ತು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಅಲ್ಲಿ ಮನವಿಯನ್ನು ತಿರಸ್ಕೃತಗೊಂಡ ಬಳಿಕ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಸಂಸ್ಥೆಯೊಂದರ ನಿರ್ದೇಶಕ ಹುದ್ದೆಯ ಅನರ್ಹತೆಯನ್ನು ನಿವಾರಿಸಿಕೊಳ್ಳಲು ನಕಲಿ ದಾಖಲೆ ಸೃಷ್ಟಿಸಿ ವಿವಿಧ ನಿರ್ದೇಶಕರ ಗುರುತಿನ ಸಂಖ್ಯೆಗಳನ್ನು ಪಡೆಯುವ ಮೂಲಕ ಯೋಗೇಶ್ವರ್‌ ಅಪರಾಧ ಮಾಡಿದ್ದಾರೆ ಎಂದು ಎಸ್‌ಎಫ್‌ಐಒ ಆರೋಪಿಸಿತ್ತು. ಜೊತೆಗೆ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಪ್ರತಿವಾದಿಗಳ ವಾದವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಪೀಠ, ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ 2012ರಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಮಾಡಲಾದ ಮನವಿಯನ್ನೇ 2017ರಲ್ಲಿ ಸಲ್ಲಿಸಿದ ಅರ್ಜಿಗಳಲ್ಲಿ ಮಾಡಲಾಗಿದೆ ಎಂಬುದನ್ನು ಗಮನಿಸಿ ದಂಡ ವಿಧಿಸಿತು.