Karnataka HC and Video conference
Karnataka HC and Video conference 
ಸುದ್ದಿಗಳು

ವಿಡಿಯೊ ಕಾನ್ಫರೆನ್ಸ್‌ , ಲೈವ್‌ ಸ್ಟ್ರೀಮಿಂಗ್‌ ಸೌಲಭ್ಯ ಅನುಷ್ಠಾನಕ್ಕೆ ಪೂರಕವಾಗಿ ಇಒಐ ಆಹ್ವಾನಿಸಿದ ಹೈಕೋರ್ಟ್‌

Bar & Bench

ಹೈಕೋರ್ಟ್‌ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ವಿಡಿಯೊ ಕಾನ್ಫರೆನ್ಸ್‌ ವಿಚಾರಣೆ ಮತ್ತು ಕಲಾಪದ ಲೈವ್‌ ಸ್ಟ್ರೀಮಿಂಗ್‌ ಮಾಡಲು ಹಾರ್ಡ್‌ವೇರ್‌ ಸಾಮಗ್ರಿಗಳ ಮೂಲಕ ತಾಂತ್ರಿಕ ಪರಿಹಾರ ಮತ್ತು ಸಲಹೆ ನೀಡಲು ಮಾರಾಟಗಾರರು ಅಥವಾ ಅಸಲಿ ಉತ್ಪನ್ನ ಉತ್ಪಾದಕರು (ಒಇಎಂ) ಅಥವಾ ಸಿಸ್ಟಂ ಇಂಟಿಗ್ರೇಟರ್‌ಗಳಿಂದ 'ಆಸಕ್ತಿಯ ಅಭಿವ್ಯಕ್ತಿ' (ಎಕ್ಸ್‌ಪ್ರೆಷನ್‌ ಆಫ್‌ ಇಂಟರೆಸ್ಟ್‌ - ಇಒಐ) ಸಲ್ಲಿಕೆಗೆ ಕರ್ನಾಟಕ ಹೈಕೋರ್ಟ್‌ ಆಹ್ವಾನಿಸಿದೆ.

ಆಸಕ್ತಿ ಅಭಿವ್ಯಕ್ತಿಯ ಆಹ್ವಾನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರು ಜುಲೈ 15ರಂದು ಪ್ರಕಟಣೆ ಹೊರಡಿಸಿದ್ದಾರೆ.

ಹೈಕೋರ್ಟ್‌ನ ಪ್ರಧಾನ, ಧಾರವಾಡ ಅಥವಾ ಕಲಬುರ್ಗಿ ಪೀಠದಲ್ಲಿನ ಯಾವುದಾದರೊಂದು ನ್ಯಾಯಾಲಯದ ಕೊಠಡಿಯಲ್ಲಿ ವಿಡಿಯೊ ಕಾನ್ಫರೆನ್ಸ್‌ ವಿಚಾರಣೆ, ಕಲಾಪದ ಲೈವ್‌ ಸ್ಟ್ರೀಮಿಂಗ್‌, ನ್ಯಾಯಾಲಯದ ಕೊಠಡಿಯಲ್ಲಿ ಕಾಗದರಹಿತ ಚಟುವಟಿಕೆ ಜಾರಿ, ತಾಂತ್ರಿಕ ಅಗತ್ಯ ದತ್ತಾಂಶ ಶೀಟುಗಳು, ದಾಖಲೆ, ವಿನ್ಯಾಸ, ಅಂದಾಜು ಇತರೆ ಅಗತ್ಯಗಳನ್ನು ಒಳಗೊಂಡ ಡೆಮೊ ನೀಡಲು ಪರಿಕಲ್ಪನೆಯ ಪುರಾವೆಯ ಭಾಗವಾಗಿ (ಪ್ರೂಫ್‌ ಆಪ್‌ ಕಾನ್ಸೆಪ್ಟ್‌) ಆಸಕ್ತಿಯ ಅಭಿವ್ಯಕ್ತಿಯನ್ನು (ಇಒಐ) ಆಹ್ವಾನಿಸಲಾಗಿದೆ. ಇದರಿಂದ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಹೈಕೋರ್ಟ್‌ಗೆ ಅನುಕೂಲವಾಗಲಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಆಸಕ್ತಿ ಹೊಂದಿರುವವರು ತಾಂತ್ರಿಕ ಅಗತ್ಯತೆಗಳು, ದತ್ತಾಂಶ ಶೀಟುಗಳು, ದಾಖಲೆ, ವಿನ್ಯಾಸ, ಅಂದಾಜು ಮತ್ತು ಆಸಕ್ತಿಯ ಅಭಿವ್ಯಕ್ತಿಯ ಇತರೆ ಅಗತ್ಯಗಳನ್ನು ನ್ಯಾಯಾಲಯದ ಕೊಠಡಿಯಲ್ಲಿ ವಿಡಿಯೊ ಕಾನ್ಫರೆನ್ಸ್‌ ವಿಚಾರಣೆ ಮತ್ತು ಲೈವ್‌ ಸ್ಟ್ರೀಮಿಂಗ್‌ ಮಾಡಲು ಹಂಚಿಕೊಂಡರೆ ಹೈಕೋರ್ಟ್‌ಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿಲು ಅನುಕೂಲವಾಗಲಿದೆ ಎಂದು ಹೇಳಲಾಗಿದೆ. 2022ರ ಜುಲೈ 30ರ ಸಂಜೆ 4 ಗಂಟೆ ಒಳಗೆ ಪ್ರತಿಕ್ರಿಯೆ ಸಲ್ಲಿಸಬಹುದಾಗಿದೆ. ಇಒಎಂನಲ್ಲಿ ಯೋಜನೆಯ ವ್ಯಾಪ್ತಿ ಮತ್ತು ಅರ್ಹತಾ ಮಾನದಂಡಗಳನ್ನು ಉಲ್ಲೇಖಿಸಲಾಗಿದೆ.