ಭಾರತದಲ್ಲಿ ಜನಿಸಿ, ಜರ್ಮನಿ ದಂತಿಯಿಂದ ದತ್ತು ಸ್ವೀಕರಿಸಿಲ್ಪಟ್ಟಿರುವ ಮಹಿಳೆಯೊಬ್ಬರು ತನ್ನ ಹೆತ್ತವರ ಪತ್ತೆ ಮಾಡಲು ನಿರ್ದೇಶನ ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಬೆಂಗಳೂರಿನ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ನ್ಯಾಯಾಲಯವು ಈಚೆಗೆ ನೋಟಿಸ್ ಜಾರಿ ಮಾಡಿದೆ.
ಜರ್ಮನಿ ನಿವಾಸಿಯಾಗಿರುವ ೪೮ ವರ್ಷದ ಅನಿತಾ ವೈಸೆಂಡ್ಟ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ನಡೆಸಿತು.
ಅನಿತಾ ಅವರ ಹೆತ್ತವರಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ. ಐದು ವರ್ಷದ ದಾಖಲೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ದಾಖಲೆಗಳನ್ನು ನಾಶಪಡಿಸಲಾಗಿದೆ. ಹೀಗಾಗಿ, ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಹಲಸೂರು ಗೇಟ್ ಪೊಲೀಸರ ತನಿಖೆಯ ವೇಳೆ ಆಸ್ಪತ್ರೆ ಆಡಳಿತ ಮಾಹಿತಿ ನೀಡಿದೆ ಎಂದು ರಾಜ್ಯ ಸರ್ಕಾರದ ವಕೀಲರು ಪೀಠಕ್ಕೆ ತಿಳಿಸಿದರು.
ಇದನ್ನು ದಾಖಲಿಸಿರುವ ಪೀಠವು ಅರ್ಜಿದಾರರ ಪರ ವಕೀಲರ ಕೋರಿಕೆಯ ಮೇರೆಗೆ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿದೆ.
ಜರ್ಮನಿಯ ದಂಪತಿಗಳಾದ ಲುಟ್ಜ್ ಜೋಕಿಮ್ ವೈಸೆಂಡ್ಟ್ ಮತ್ತು ಸಿಗ್ರಿಡ್ ವೈಸೆಂಡ್ಟ್ ಅವರು 1978ರಲ್ಲಿ ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಮೂಲಕ ಅನಿತಾ ಅವರನ್ನು ದತ್ತು ಪಡೆದಿದ್ದರು. ಬೆಂಗಳೂರಿನ ಸತ್ರ ನ್ಯಾಯಾಲಯವು ಗಾರ್ಡಿಯನ್ಸ್ ಮತ್ತು ವಾರ್ಡ್ಸ್ ಕಾಯಿದೆ 1890ರ ಸೆಕ್ಷನ್‌ಗಳಾದ 7, 10 ಮತ್ತು 26ರ ಅಡಿ 1978ರ ಆಗಸ್ಟ್ 9ರಂದು ದಂಪತಿ ಅನಿತಾ ಅವರ ಪೋಷಕತ್ವ ಒದಗಿಸಿತ್ತು.
1978ರ ಮಾರ್ಚ್ 3ರಂದು ಅನಿತಾ ಜನಿಸಿದ್ದು, ಅವರ ಹೆತ್ತ ತಾಯಿ 1978ರ ಮಾರ್ಚ್ 26ರಂದು ಪ್ರಸವ ನಂತರದ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದರು. ಈ ಮಧ್ಯೆ, ಮಗುವನ್ನು ಬೆಳೆಸಲು ಕಷ್ಟವಾಗುತ್ತದೆ ಎಂದು ಅನಿತಾ ಅವರ ತಂದೆ ಮಗುವನ್ನು ಆಸ್ಪತ್ರೆಯ ಸುಪರ್ದಿಗೆ ನೀಡಿದ್ದರು. ಈ ನಡುವೆ, ಆಸ್ಪತ್ರೆಯ ವೈದ್ಯಕೀಯ ಅಧಿಕಾರಿಯು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಾಯಿಯ ಮರಣದ ನಂತರ ಮಗುವನ್ನು ಆಸ್ಪತ್ರೆಗೆ ತರಲಾಗಿದ್ದು, ದತ್ತು ನೀಡುವವರೆಗೆ ಐದು ತಿಂಗಳು ಅದು ಆಸ್ಪತ್ರೆಯಲ್ಲಿತ್ತು ಎಂದು ವಿವರಿಸಲಾಗಿದೆ.
ಮಗುವಿನ ತಂದೆ ಮಗುವನ್ನು ಆಸ್ಪತ್ರೆಗೆ ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ, ಆತ ಎಲ್ಲಿದ್ದಾರೆ ಎಂಬುದು ತಿಳಿಯುತ್ತಿಲ್ಲ. ದಿನಾಂಕವಿಲ್ಲದ ಪತ್ರದಲ್ಲಿ ತಾಯಿಯ ಬಗ್ಗೆ ಉಲ್ಲೇಖವಿಲ್ಲ ಮತ್ತು ಅವರು ಎಲ್ಲಿ ನಿಧನರಾದರು ಎಂಬ ಸ್ಪಷ್ಟತೆ ಇಲ್ಲ. ಯಾರು ಮಗುವನ್ನು ಆಸ್ಪತ್ರೆಗೆ ತಂದರು ಎಂಬ ಮಾಹಿತಿಯೂ ಇಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ವಾಸ್ತವಿಕ ಅಂಶಗಳನ್ನು ಮರೆಮಾಚಿ, ದತ್ತು ಪ್ರಕ್ರಿಯೆಯಲ್ಲಿ ಲೋಪಗಳನ್ನು ಎಸಗಲಾಗಿದೆ. ಮಗುವನ್ನು ನೀಡುವುದಕ್ಕೆ ಸಂಬಂಧಿಸಿದ ಪತ್ರ, ಪೋಷಕರ ಒಪ್ಪಿಗೆ, ವೈದ್ಯಕೀಯ ದಾಖಲೆಗಳನ್ನು ಬಹಿರಂಗಪಡಿಸಲಾಗಿಲ್ಲ. ದತ್ತು ಪ್ರಕ್ರಿಯೆಯು ಹಿಂದೂ ದತ್ತು ಮತ್ತು ನಿರ್ವಹಣಾ ಕಾಯಿದೆ 1956ರ ನಿಬಂಧನೆಗಳನ್ನು ಉಲ್ಲಂಘಿಸಿರುವ ಸಾಧ್ಯತೆ ಇದೆ. ಸಂಬಂಧಿತರು ಮಹತ್ವದ ದಾಖಲೆಗಳನ್ನು ಜತನದಿಂದ ಕಾಪಿಡಲು ವಿಫಲರಾಗಿದ್ದಾರೆ. ಈ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ಅನಿತಾ ಅರ್ಜಿಯಲ್ಲಿ ವಿವರಿಸಿದ್ದಾರೆ.
ಜೀವನಪೂರ್ತಿ ತಮ್ಮ ಗುರುತು ಪತ್ತೆಯಲ್ಲಿ ನಿರತರಾಗಿದ್ದು, ಹಲವು ಬಾರಿ ಭಾರತಕ್ಕೆ ಬಂದಿರುವ ತಾನು ಮಾಹಿತಿ ಕೋರಿ ಹಲವು ಬಾರಿ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ತನ್ನ ಹೆತ್ತವರ ಬಗ್ಗೆ ಮಾಹಿತಿ ನೀಡದೇ ಇರುವುದು ಭಾವನಾತ್ಮಕ ಒತ್ತಡ ಸೃಷ್ಟಿಸಿದ್ದು, ತನ್ನ ಮೂಲದ ಬಗ್ಗೆ ಮಾಹಿತಿ ಪಡೆಯುವುದನ್ನು ನಿರಾಕರಿಸಲಾಗಿದೆ ಎಂದು ಅನಿತಾ ಆಕ್ಷೇಪಿಸಿದ್ದಾರೆ.