ಸ್ವಾತಂತ್ರ್ಯ ಹೋರಾಟಗಾರರ ಕುಟುಬಸ್ಥರಿಗೆ ನೀಡುವ ಮಾಸಿಕ ಪಿಂಚಣಿ ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ 92 ವರ್ಷದ ಮೃತ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪತ್ನಿ ಸಲ್ಲಿಸಿರುವ ಅರ್ಜಿಯ ಸಂಬಂಧ ಕರ್ನಾಟಕ ಹೈಕೋರ್ಟ್ ಬುಧವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
2019ರಿಂದ ಬಾಕಿ ಉಳಿಸಿಕೊಂಡಿರುವ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಪಿಂಚಣಿ ಬಿಡುಗಡೆಗೆ ಕೋರಿ ದೊಡ್ಡಬಳ್ಳಾಪುರ ತಾಲ್ಲೂಕಿನ ಗಾಳಿಬಿಳಿಕೋಟೆ ಗ್ರಾಮದ ನಿವಾಸಿ 92 ವರ್ಷದ ಸೊಣ್ಣಮ್ಮ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಪೀಠ ನಡೆಸಿತು.
ಅರ್ಜಿದಾರರ ಪರ ವಕೀಲ ಕೆ ಶ್ರೀನಿವಾಸ ಅವರು “ಸೊಣ್ಣಮ್ಮ ಅವರು ಮಾನ್ಯತೆ ಪಡೆದ ಸ್ವಾತಂತ್ರ್ಯ ಹೋರಾಟಗಾರರ ಪತ್ನಿ ಆಗಿದ್ದಾರೆ. ಪತಿ ತೀರಿಕೊಂಡ ಬಳಿಕ ಸ್ವಾತಂತ್ರ್ಯ ಹೋರಾಟಗಾರರ ಪತ್ನಿ(ವಿಧವೆ)ಗೆ ನೀಡುತ್ತಿದ್ದ ಪಿಂಚಣಿ ಸ್ಥಗಿತಗೊಳಿಸಲಾಗಿದೆ” ಎಂದು ಪೀಠಕ್ಕೆ ವಿವರಿಸಿದರು.
ರಾಜ್ಯ ಸರ್ಕಾರದ ಪರ ವಕೀಲರು “ರಾಜ್ಯ ಸರ್ಕಾರದಿಂದ ನೀಡಬೇಕಾದ ಪಿಂಚಣಿಯನ್ನು ಪಾವತಿಸಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಪಿಂಚಣಿ ಪಾವತಿಸುತ್ತಿಲ್ಲ, ಇದರಿಂದ ಅರ್ಜಿದಾರರ ಖಾತೆಗೆ ಹಣ ಜಮೆ ಆಗುತ್ತಿಲ್ಲ. ಇದಕ್ಕೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ನೀಡಬೇಕು” ಎಂದು ಪೀಠಕ್ಕೆ ತಿಳಿಸಿದರು.
ವಾದ ಆಲಿಸಿದ ಪೀಠವು ಕೇಂದ್ರ ಗೃಹ ಇಲಾಖೆ, ಕೇಂದ್ರೀಯ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ವಿಭಾಗ, ರಾಜ್ಯ ಲೆಕ್ಕಪತ್ರ ಮಹಾನಿರ್ದೇಶಕರು ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ತಾಮ್ರ ಪತ್ರ ಪ್ರಶಸ್ತಿ ಪುರಸ್ಕೃತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಜಿ ರಾಮಯ್ಯ ಅವರ ಪತ್ನಿ ಸೊಣ್ಣಮ್ಮ. ರಾಮಯ್ಯ ಅವರು 1973ರಿಂದ ಕೇಂದ್ರ ಸರ್ಕಾರದಿಂದ ಪಿಂಚಣಿ ಪಡೆಯುತ್ತಿದ್ದರು. ಆದರೆ, 2000ರ ಜುಲೈ 23ರಂದು ರಾಮಯ್ಯ ನಿಧನರಾಗಿದ್ದರು. ಬಳಿಕ ಪಿಂಚಣಿಯನ್ನು ಸೊಣ್ಣಮ್ಮ ಅವರಿಗೆ ನೀಡಲಾಗುತ್ತಿತ್ತು.
2019ರ ಫೆಬ್ರವರಿವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪಿಂಚಣಿ ನಿಯಮಿತವಾಗಿ ಖಾತೆಗೆ ಜಮೆಯಾಗುತ್ತಿತ್ತು. ಆದರೆ 2019ರ ಮಾರ್ಚ್‌ನಿಂದ ಯಾವುದೇ ಆದೇಶ ಅಥವಾ ಮಾಹಿತಿ ನೀಡದೆ ಕೇಂದ್ರ ಸರ್ಕಾರ ಪಿಂಚಣಿ ಪಾವತಿ ಸ್ಥಗಿತಗೊಳಿಸಿದೆ. ರಾಜ್ಯ ಸರ್ಕಾರದ ಪಿಂಚಣಿ ಮಾತ್ರ ಬರುತ್ತಿದೆ. ಈ ಸಂಬಂಧ ಹಲವು ಬಾರಿ ಪತ್ರ ಬರೆದು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸ್ಥಗಿತಗೊಂಡಿರುವ ಪಿಂಚಣಿ ಮತ್ತು ಹಿಂಬಾಕಿಯನ್ನು ಪಾವತಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.
ಅಲ್ಲದೆ, ಬ್ಯಾಂಕ್ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಪಿಂಚಣಿ ಪುಸ್ತಕ ಲಭ್ಯವಿಲ್ಲ ಎಂಬ ಕಾರಣ ನೀಡಿ ಪಿಂಚಣಿ ಪಾವತಿಸುವುದಕ್ಕೆ ವಿಳಂಬ ಮಾಡುತ್ತಿದ್ದಾರೆ. ಆಡಳಿತಾತ್ಮಕ ದೋಷಗಳಿಂದ ಕಲ್ಯಾಣ ಯೋಜನೆಯ ಹಕ್ಕನ್ನು ನಿರಾಕರಿಸುವುದಕ್ಕೆ ಅವಕಾಶವಿಲ್ಲ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.
ಸೊಣ್ಣಮ್ಮ ಅವರು ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದು, ಜೀವನಕ್ಕೆ ಪಿಂಚಣಿಯನ್ನೇ ಅವಲಂಬಿಸಿದ್ದಾರೆ. ಹಲವು ವರ್ಷಗಳಿಂದ ಪಿಂಚಣಿ ಸ್ಥಗಿತವಾಗಿರುವುದು ಮಾನಸಿಕವಾಗಿ ನೋವುಂಟಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.