ಶ್ರೀಲಂಕಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಎಚ್‌ಎಂ ದಿಲೀಪ್ ನವಾಜ್ ಅವರು ತನ್ನ ವಿರುದ್ಧದ ಎಲ್ಲಾ ಮಾನಹಾನಿ ಸುದ್ದಿ/ಲೇಖನ ಮತ್ತು ಯುಆರ್‌ಎಲ್‌ಗಳನ್ನು ತೆಗೆದುಹಾಕುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ಗೂಗಲ್‌ಗೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿಗೊಳಿಸಿದೆ.
ಶ್ರೀಲಂಕಾದ ನ್ಯಾಯಮೂರ್ತಿ ನವಾಜ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ನಡೆಸಿತು.
ವಾದ ಆಲಿಸಿದ ಪೀಠವು ಗೂಗಲ್ ಇಂಡಿಯಾ, ಗೂಗಲ್ ಇಂಕ್‌ಗೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೇ, ಅರ್ಜಿದಾರರ ಪರ ವಕೀಲರು ಕೊಲಂಬೊ ಟೆಲಿಗ್ರಾಫ್ ಮತ್ತು ಲಂಕಾಈನ್ಯೂಸ್‌ಗೆ ಈಮೇಲ್ ಮೂಲಕ ನೋಟಿಸ್ ಕಳುಹಿಸಿಕೊಡಬೇಕು ಎಂದು ಹೈಕೋರ್ಟ್ ಆದೇಶಿಸಿದ್ದು, ಮಾರ್ಚ್ 16ಕ್ಕೆ ವಿಚಾರಣೆ ಮುಂದೂಡಿದೆ.
ಶ್ರೀಲಂಕಾದ ಕೊಲಂಬೊ ಟೆಲಿಗ್ರಾಫ್ ಮತ್ತು ಲಂಕಾಈನ್ಯೂಸ್ ಸುದ್ದಿ ತಾಣಗಳು 2015 ಮತ್ತು 2020ರಲ್ಲಿ ಮಾನಹಾನಿ ಸುದ್ದಿ ಪ್ರಕಟಿಸಿವೆ ಎಂದು ನ್ಯಾ. ನವಾಜ್ ಆಕ್ಷೇಪಿಸಿದ್ದಾರೆ. ಕೊಲಂಬೊ ಟೆಲಿಗ್ರಾಫ್ ಅನ್ನು ಗಡಿಪಾರುಗೊಂಡಿರುವ ಶ್ರೀಲಂಕಾದ ಇಬ್ಬರು ಪತ್ರಕರ್ತರು ಮುನ್ನಡೆಸುತ್ತಿದ್ದಾರೆ ಎನ್ನಲಾಗಿದೆ.
ನ್ಯಾ. ನವಾಜ್ ಅವರು ಅರ್ಜಿಯಲ್ಲಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ, ಗೂಗಲ್ ಇಂಡಿಯಾ, ಗೂಗಲ್ ಇಂಕ್, ಕೊಲಂಬೊ ಟೆಲಿಗ್ರಾಫ್, ಲಂಕಾಈನ್ಯೂಸ್ ಅನ್ನು ಪ್ರತಿವಾದಿಗಳನ್ನಾಗಿಸಿದ್ದಾರೆ.
ಶ್ರೀಲಂಕಾ ನ್ಯಾಯಾಲಯಗಳ ಮೆಟ್ಟಿಲೇರಿದರೆ ನೈತಿಕ ಸಂಘರ್ಷ ಉಂಟಾಗುವ ಸಾಧ್ಯತೆಯಿಂದ ಭಾರತದ ನ್ಯಾಯಾಲಯದ ಕದತಟ್ಟಲು ನಿರ್ಧರಿಸಿದ್ದಾಗಿ ನ್ಯಾ. ನಜಾಜ್ ಅರ್ಜಿಯಲ್ಲಿ ವಿವರಿಸಿದ್ದಾರೆ.
“ನ್ಯಾ. ನವಾಜ್ ಅವರು ಶ್ರೀಲಂಕಾ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿರುವುದರಿಂದ ಮಾನಹಾನಿ ಸುದ್ದಿಯ ವಿಚಾರವಾಗಿ ಅಲ್ಲಿನ ನ್ಯಾಯಾಲಯದಲ್ಲಿ ದಾವೆ ಹೂಡುವುದು ನೈತಿಕವಾಗಿ ನಿಷೇಧಿಸಲ್ಪಟ್ಟಿದೆ. ಹೀಗೆ ಮಾಡುವುದು ತನ್ನ ಪ್ರಕರಣದಲ್ಲಿ ತಾನೇ ನ್ಯಾಯಮೂರ್ತಿಯಾಗಿರಬಾರದು ಎಂಬ ಸ್ಥಾಪಿತ ಕಾನೂನು ತತ್ವಕ್ಕೆ ವಿರುದ್ಧವಾಗಿದೆ.. ಹೀಗಾಗಿ, ನ್ಯಾ. ನವಾಜ್ ಅವರು ಈ ಪ್ರಕರಣದಲ್ಲಿ ಭಾಗಿಯಾಗಲು ಹಿಂಜರಿದಿದ್ದು, ಇಂಥ ಯಾವುದೇ ನಿಲುವು ನೈತಿಕವಾಗಿ ಸರಿಯಲ್ಲ ಮತ್ತು ನ್ಯಾಯಾಂಗ ನೈತಿಕತೆಗೆ ವಿರುದ್ಧವಾಗಿದೆ” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಆನ್‌ಲೈನ್‌ನಲ್ಲಿರುವ ಮಾನಹಾನಿ ವಿಚಾರಗಳನ್ನು ತೆಗೆದು ಹಾಕುವುದರ ಜೊತೆಗೆ ಅದಕ್ಕೆ ಸಂಬಂಧಿಸಿದ ಯುಆರ್‌ಎಲ್‌ಗಳ ಮೇಲೆ ಸಂಪೂರ್ಣ ನಿಷೇಧ ಹೇರಬೇಕು. ತಾನು ಇಂಥ ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂದು ನ್ಯಾ. ನವಾಜ್ ಅವರು ವಾದಿಸಿದ್ದು, ಮರೆತು ಹೋಗುವ ಹಕ್ಕನ್ನು (right to be forgotten) ರಕ್ಷಿಸಬೇಕು ಎಂದು ಕೋರಿದ್ದಾರೆ.
2015ರಲ್ಲಿ ಒಂದು ಮತ್ತು 2020ರಲ್ಲಿ ಕೊಲೊಂಬೊ ಟೆಲಿಗ್ರಾಫ್‌ನಲ್ಲಿ ಪ್ರಕಟಿಸಲಾಗಿರುವ ಎರಡು ಸುದ್ದಿ ಹಾಗೂ 2020ರಲ್ಲಿ ಲಂಕಾಈನ್ಯೂಸ್ ಪ್ರಕಟಿಸಿರುವ ಒಂದು ಸುದ್ದಿ ಸೇರಿ ಒಟ್ಟು ನಾಲ್ಕು ಸುದ್ದಿಗಳನ್ನು ಆನ್‌ಲೈನ್‌ನಿಂದ ತೆಗೆಯಲು ನಿರ್ದೇಶಿಸಬೇಕು ಎಂದು ನ್ಯಾ. ನವಾಜ್ ಕೋರಿದ್ದಾರೆ.
ಶ್ರೀಲಂಕಾದ ಕೋರ್ಟ್ ಆಫ್ ಅಪೀಲ್‌ನ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಆಕ್ಷೇಪಾರ್ಹವಾದ ಸುದ್ದಿಗಳನ್ನು ಪ್ರಕಟಿಸಲಾಗಿದೆ. ಅಂದಿನ ಅಟಾರ್ನಿ ಜನರಲ್ ಅವರೊಂದಿಗೆ ಸಹಮತದ ಕಾನೂನು ಅಭಿಪ್ರಾಯ ನೀಡಿರುವುದನ್ನು ಆಧರಿಸಿ ದುರುದ್ದೇಶಪೂರಿತವಾಗಿ ತನ್ನ ವರ್ಚಸ್ಸು ಮತ್ತು ಘನತೆಗೆ ಹಾನಿ ಮಾಡಲು ಈ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ನ್ಯಾ. ನವಾಜ್ ಆಕ್ಷೇಪಿಸಿದ್ದಾರೆ.
ಈ ಅಪಪ್ರಚಾರ ಆಧರಿಸಿ ದಾಖಲಿಸಲಾಗಿದ್ದ ರಾಜಕೀಯ ಪ್ರೇರಿತ ಮತ್ತು ಕ್ಷುಲ್ಲಕ ಪ್ರಕರಣ ವಜಾಗೊಂಡಿದೆ. ಇದಾದ ಬಳಿಕ ತಾನು ಸುಪ್ರೀಂ ಕೋರ್ಟ್‌ಗೂ ಪದೋನ್ನತಿ ಪಡೆದಿರುವುದಾಗಿ ನ್ಯಾ. ನವಾಜ್ ಅರ್ಜಿಯಲ್ಲಿ ವಿವರಿಸಿದ್ದಾರೆ. ಅದಾಗ್ಯೂ, ಈ ದುರುದ್ದೇಶಪೂರಿತ ಸುದ್ದಿಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ತನ್ನನ್ನು ಮಾಧ್ಯಮ ವಿಚಾರಣೆಗೆ ಗುರಿಪಡಿಸಲಾಗಿದೆ. ಇದರಿಂದ ತನ್ನ ಘನತೆಗೆ ಮಾತ್ರವಲ್ಲದೇ ನ್ಯಾಯಾಂಗ ಪಾವಿತ್ರ್ಯತೆಗೂ ಹಾನಿ ಮಾಡಲಾಗುತ್ತಿದೆ ಎಂದು ವಾದಿಸಿದ್ದಾರೆ.
ಭಾರತವು ಪ್ರಾಮಾಣಿಕ ನ್ಯಾಯಾಂಗ ಹೊಂದಿದ್ದು, ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಎಲ್ಲರಿಗೂ ನ್ಯಾಯ ಒದಗಿಸುವ ಈ ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ತನಗೆ ಸಂಪೂರ್ಣ ವಿಶ್ವಾಸವಿದೆ. ಭಾರತದ ಸಂವಿಧಾನದ 21ನೇ ವಿಧಿಯಡಿ ಕಲ್ಪಿಸಲಾಗಿರುವ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕು ಭಾರತೀಯರಿಗಲ್ಲದೇ ವಿದೇಶಿಯರಿಗೂ ವಿಸ್ತರಿಸಿರುವುದರಿಂದ ಭಾರತದ ನ್ಯಾಯಾಲಯವು ತನ್ನ ಅರ್ಜಿ ವಿಚಾರಣೆ ನಡೆಸಬಹುದು ಎಂದು ನ್ಯಾ. ನವಾಜ್ ವಿವರಿಸಿದ್ದಾರೆ.
2023ರಲ್ಲಿ ನ್ಯಾ. ನವಾಜ್ ಅವರು ಗೂಗಲ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದು, ಅಲ್ಲಿಂದ ಯಾವುದೇ ಪ್ರತಿಕ್ರಿಯೆಬಾರದೇ ಇರುವುದರಿಂದ ಮತ್ತು ಗೂಗಲ್‌ನ ಭಾರತದ ಪ್ರಧಾನ ಕಚೇರಿಯು ಬೆಂಗಳೂರಿನಲ್ಲಿರುವುದರಿಂದ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿರುವುದಾಗಿ ವಿವರಿಸಿದ್ದಾರೆ. ವಕೀಲ ಆರ್ ಪ್ರಭಾಕರನ್ ಅವರು ವಕಾಲತ್ತು ವಹಿಸಿದ್ದಾರೆ.