Karnataka HC and Justice V Srishananda 
ಸುದ್ದಿಗಳು

ಗೋರಿಪಾಳ್ಯವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ ನ್ಯಾ. ಶ್ರೀಶಾನಂದ; ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ

ಮೈಸೂರು ರಸ್ತೆಯ ಮೇಲ್ಸೆತುವೆಯಿಂದ ಸಾಗುವಾಗ ಬದಿಯಲ್ಲಿನ ಗೋರಿಪಾಳ್ಯದಿಂದ ಹೂವಿನ ಮಾರುಕಟ್ಟೆಯ ತನಕದ ಪ್ರದೇಶ ಭಾರತದಲ್ಲಿ ಇಲ್ಲ. ಅದೊಂದು ಮಿನಿ ಪಾಕಿಸ್ತಾನ. ಇದು ವಾಸ್ತವ ಎಂದು ನ್ಯಾ. ಶ್ರೀಶಾನಂದ ಹೇಳಿದ್ದರು.

Bar & Bench

“ಮುಸ್ಲಿಂ ಬಾಹುಳ್ಯ ಪ್ರದೇಶವಾದ ಗೋರಿಪಾಳ್ಯದ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹೆದರುತ್ತಿದ್ದಾರೆ. ಅದೊಂದು ಮಿನಿ ಪಾಕಿಸ್ತಾನವಾಗಿ ಮಾರ್ಪಟ್ಟಿದೆ...” ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಕಳೆದ ಆಗಸ್ಟ್‌ 28ರಂದು ಬಾಡಿಗೆ ನಿಯಂತ್ರಣ ಕಾಯಿದೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ಮುಕ್ತ ನ್ಯಾಯಾಲಯದಲ್ಲಿ ವ್ಯಕ್ತಪಡಿಸಿರುವ ಮಾತುಗಳು ಸಾಮಾಜಿಕ ಮಾಧ್ಯಮ ಮಾತ್ರವಲ್ಲದೆ, ವಕೀಲ ವೃಂದದಲ್ಲಿಯೂ ತೀವ್ರ ಚರ್ಚೆಗೆ ಗ್ರಾಸವಾಗಿವೆ.

“ಬೆಂಗಳೂರಿನ ಮೈಸೂರು ರಸ್ತೆಯ ಮೇಲ್ಸೇತುವೆಗೆ ಹೋಗಿ ನೋಡಿ. ಅಲ್ಲಿ ಸಂಚರಿಸುವ ಪ್ರತಿಯೊಂದು ಆಟೊ ರಿಕ್ಷಾದಲ್ಲೂ 10 ಜನರನ್ನು ತುಂಬಿಕೊಂಡಿರಲಾಗುತ್ತದೆ. ಮೈಸೂರು ರಸ್ತೆಯ ಮೇಲ್ಸೆತುವೆ ಸಾಗುವ ಗೋರಿಪಾಳ್ಯದಿಂದ ಮಾರುಕಟ್ಟೆಯವರೆಗಿನ ಪ್ರದೇಶ ಭಾರತದಲ್ಲಿ ಇಲ್ಲ. ಅದು ಪಾಕಿಸ್ತಾನದಲ್ಲಿದೆ. ಇದು ವಾಸ್ತವ.. ಇದು ವಾಸ್ತವ.. ಎಂತಹುದೇ ಕಟ್ಟುನಿಟ್ಟಿನ ದಕ್ಷ ಪೊಲೀಸ್ ಅಧಿಕಾರಿಯನ್ನು ಅಲ್ಲಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಿದರೂ ಅವರನ್ನು ಹಿಡಿದುಬಿಡಲಿ ನೋಡುತ್ತೇನೆ... ” ಎಂದಿದ್ದರು. ಆಟೋದಲ್ಲಿ ಇಂತಿಷ್ಟು ಜನ ಸಾಗಬೇಕು ಎನ್ನುವ ಕಾನೂನು ಅಲ್ಲಿ ಅನ್ವಯವಾಗುವುದಿಲ್ಲ ಎನ್ನುವುದನ್ನು ಶ್ರೀಶಾನಂದ ಹೇಳುತ್ತಿದ್ದರು.

“ಬಾಡಿಗೆ ನಿಯಂತ್ರಣ ಮತ್ತು ಮೋಟಾರು ವಾಹನಗಳ ಕಾಯಿದೆಗಳಿಗೆ ಕೆಲವು ತಿದ್ದುಪಡಿ ಆಗಬೇಕಿದೆ. ವಿದೇಶಗಳಲ್ಲಿ  ವಾಹನಗಳ ಸಂಚಾರಕ್ಕೆ ಕಟ್ಟುನಿಟ್ಟಾದ ನಿಯಮಗಳಿರುತ್ತವೆ” ಎಂದು ವಿವರಿಸಿ ಅಲ್ಲಿನ ವೇಗದ ಮಿತಿ, ಸಾಲುಗಳ ಶಿಸ್ತು ಇತ್ಯಾದಿಗಳನ್ನು ಹೇಗೆ ಪಾಲಿಸಬೇಕು ಎಂಬುದರ ಕುರಿತು ಸುದೀರ್ಘ ವಿವರಣೆ ನೀಡುವ ನ್ಯಾಯಮೂರ್ತಿಗಳು, "ಇದು ಇಲ್ಲಿನ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳನ್ನು ನೋಡಿದಾಗ ವ್ಯತ್ಯಾಸ ಗೊತ್ತಾಗುತ್ತದೆ” ಎಂದು ವಿವರಣೆ ನೀಡಿರುವುದು ವಿಡಿಯೊದಲ್ಲಿದೆ.

“ಇಂದು ಯಾವುದೇ ಖಾಸಗಿ ಶಾಲೆಗೆ ಹೋಗಿ ನೋಡಿ. ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ಸ್ಕೂಟರ್ ಸವಾರಿ ಮಾಡುವುದನ್ನು ನೋಡುತ್ತೀರಿ. ಇಂತಹ ಮಕ್ಕಳ ವಿರುದ್ಧ ಪ್ರಾಂಶುಪಾಲರಾಗಲೀ, ಪೋಷಕರಾಗಲೀ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆಟೊ ರಿಕ್ಷಾಗಳಲ್ಲಂತೂ 13, 14, 15...ರಷ್ಟು ವಿದ್ಯಾರ್ಥಿಗಳನ್ನು ತುಂಬಿರಲಾಗುತ್ತದೆ. ವಾಹನ ಪಲ್ಟಿಯಾಗಿ ಮಕ್ಕಳು ಸಾವನ್ನಪ್ಪಿದರೂ ಯಾವುದೇ ಕ್ರಮ ಇರುವುದಿಲ್ಲ. ಪೊಲೀಸರು ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ. ಅವರೆಲ್ಲಾ ತಮ್ಮದೇ ಲಾಬಿಗಳಲ್ಲಿ ತೊಡಗಿದ್ದಾರೆ. ಇದು ಸಮಸ್ಯೆ. ಇಲ್ಲಿ ಯಾವುದೇ ನಿಯಮಗಳು ಅನ್ವಯಿಸುವುದಿಲ್ಲ” ಎಂದಿದ್ದರು.

[Watch from 7:21:40 to 7:22:50]