Karnataka High Court judges cricket team
Karnataka High Court judges cricket team 
ಸುದ್ದಿಗಳು

ದಕ್ಷಿಣ ವಲಯ ಫ್ರೆಟರ್ನಿಟಿ ಕಪ್‌ ಜಯಗಳಿಸಿದ ಕರ್ನಾಟಕ ನ್ಯಾಯಮೂರ್ತಿಗಳ ಕ್ರಿಕೆಟ್‌ ತಂಡ

Bar & Bench

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳ ತಂಡವು ಈ ಬಾರಿಯ ದಕ್ಷಿಣ ವಲಯ ಫ್ರೆಟರ್ನಿಟಿ ಕಪ್‌ ಕ್ರಿಕೆಟ್‌ ಟೂರ್ನಮೆಂಟ್‌ನಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಭಾನುವಾರ ನಡೆದ ಫೈನಲ್‌ ಪಂದ್ಯಾವಳಿಯಲ್ಲಿ ಕೇರಳ ಹೈಕೋರ್ಟ್‌ ನ್ಯಾಯಮೂರ್ತಿಗಳ ತಂಡವನ್ನು 20 ರನ್‌ಗಳಿಂದ ಮಣಿಸುವ ಮೂಲಕ ದಕ್ಷಿಣ ವಲಯದ ಫ್ರೆಟರ್ನಿಟಿ ಕಪ್‌ಅನ್ನು ಕರ್ನಾಟಕ ತಂಡವು ತನ್ನದಾಗಿಸಿಕೊಂಡಿತು.

ಕೇರಳದ ವಯನಾಡ್‌ನ ಕೃಷ್ಣಗಿರಿ ಕ್ರೀಡಾಂಗಣದಲ್ಲಿ ಫೆಬ್ರವರಿ 18 ಮತ್ತು 19ರಂದು ದಕ್ಷಿಣ ವಲಯದ ಫ್ರೆಟರ್ನಿಟಿ ಟೂರ್ನಿಯ ಮೂರನೇ ಆವೃತ್ತಿ ನಡೆಯಿತು. ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮದ್ರಾಸ್‌ ಹೈಕೋರ್ಟ್‌ನ ನ್ಯಾಯಮೂರ್ತಿಗಳ ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.

Teams from the 5 High Courts of the South

ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಮತ್ತು ಬೆಸ್ಟ್‌ ಬೌಲರ್‌ ಪ್ರಶಸ್ತಿಗೆ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಆರ್‌ ದೇವದಾಸ್‌ ಪಾತ್ರರಾದರು. ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರು ಅತ್ಯುತ್ತಮ ಬ್ಯಾಟ್ಸ್‌ಮನ್‌, ಮದ್ರಾಸ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಅಬ್ದುಲ್‌ ಖುದ್ದೋಸ್‌ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿದರು.

ಕರ್ನಾಟಕ ಹೈಕೋರ್ಟ್‌ನ ನ್ಯಾ. ಸೂರಜ್‌ ಗೋವಿಂದರಾಜ್‌, ಕೇರಳ ಹೈಕೋರ್ಟ್‌ ನ್ಯಾ. ಮೊಹಮ್ಮದ್‌ ಮುಷ್ತಾಕ್‌, ಆಂಧ್ರ ಪ್ರದೇಶ ಹೈಕೋರ್ಟ್‌ ನ್ಯಾ. ಡಿ ವಿ ಎಸ್‌ ಎಸ್‌ ಸೋಮಯಾಜುಲು, ಮದ್ರಾಸ್‌ ಹೈಕೋರ್ಟ್‌ ನ್ಯಾ. ಪಿ ಟಿ ಆಶಾ ಹಾಗೂ ತೆಲಂಗಾಣ ಹೈಕೋರ್ಟ್‌ನ ಲಕ್ಷ್ಮಣ ಕೊನ್ನೂರು ಅವರು ಎರಡು ದಿನಗಳ ಟೂರ್ನಿಯನ್ನು ಆಯೋಜಿಸಿದ್ದರು.

Justice MM Sundresh

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಸುಪ್ರೀಂ ಕೋರ್ಟ್‌ನ ನ್ಯಾ. ಎಂ ಎಂ ಸುಂದರೇಶ್‌ ಅವರು “ನ್ಯಾಯಮೂರ್ತಿಗಳಾದ ನಾವು ಇತರರಿಂದ ದೂರ ಇರಲು ಪ್ರಯತ್ನಿಸುತ್ತೇವೆ. ಆದರೆ, ಅದಕ್ಕಿಂತಲೂ ಹೆಚ್ಚಿನ ಕಾರಣಗಳಿಗಾಗಿ ನಾವು ಪರಸ್ಪರ ಮಾತುಕತೆ ನಡೆಸಬೇಕಾದ ಅಗತ್ಯವಿದೆ. ಈ ದಿಕ್ಕಿನಲ್ಲಿ ಇದೊಂದು ಹೊಸ ಹೆಜ್ಜೆಯಾಗಿದೆ. ಕ್ರೀಡೆಯು ಎಲ್ಲರನ್ನೂ ಬೆಸೆಯುತ್ತದೆ ಎಂಬುದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಪ್ರತಿ ವರ್ಷವೂ ಈ ಟೂರ್ನಿ ನಡೆಯಬೇಕು ಎಂದು ಆಶಿಸುತ್ತೇನೆ” ಎಂದರು.

“ಕ್ರೀಡಾ ದಿನಾಂಕವನ್ನು ನಿರ್ಧರಿಸುವುದಕ್ಕೂ ಮುನ್ನ ಒಬ್ಬರನ್ನೊಬ್ಬರು ಸಂಪರ್ಕಿಸಿಕೊಳ್ಳಿ, ಎಲ್ಲರೂ ಒಂದೆಡೆ ಸೇರಲು ಎರಡು ದಿನ ಮೀಸಲಿಟ್ಟುಕೊಳ್ಳಿ. ಇದನ್ನು ಕೌಟುಂಬಿಕ ಕಾರ್ಯಕ್ರಮವನ್ನಾಗಿಸಿಕೊಳ್ಳಿ. ಏಕೆಂದರೆ ನ್ಯಾಯಮೂರ್ತಿಗಳಂತೆ ಅವರ ಪತ್ನಿಯರು ಮತ್ತು ಮಕ್ಕಳು ಸಹ ಸಾಕಷ್ಟು ತ್ಯಾಗ ಮಾಡುತ್ತಾರೆ” ಎಂದು ಇದೇ ವೇಳೆ ಅವರು ಸಂಘಟಕರಿಗೆ ಕಿವಿ ಮಾತು ಹೇಳಿದರು.

ಯೂಟ್ಯೂಬ್‌ನಲ್ಲಿ ಪಂದ್ಯಗಳ ನೇರ ಪ್ರಸಾರ ಮಾಡಿದ್ದು ವಿಶೇಷವಾಗಿತ್ತು. ಟೂರ್ನಿಯ ಮುಂದಿನ ಆವೃತ್ತಿಯ ಆತಿಥ್ಯವನ್ನು ಆಂಧ್ರ ಪ್ರದೇಶ ಹೈಕೋರ್ಟ್‌ ವಹಿಸಲಿದೆ.