ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ (ಸದ್ಯ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆಯಾಗಿರುವ) ಯಶವಂತ್ ವರ್ಮಾ ಅವರ ಮನೆಯಲ್ಲಿ ಅರೆಬೆಂದ ನೋಟಿನ ಕಂತೆಗಳು ಪತ್ತೆಯಾದ ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘವು (ಎಎಬಿ) ಮಾಡಿರುವ ಠರಾವಿನಲ್ಲಿ ನ್ಯಾಯಮೂರ್ತಿ ಕೆ ನಟರಾಜನ್ ಅವರ ಹೆಸರು ಉಲ್ಲೇಖಿಸಿರುವುದಕ್ಕೆ ನ್ಯಾಯಮೂರ್ತಿಗಳು ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೀರ್ಘಾವಧಿಯಿಂದ ಬಾಕಿ ಉಳಿದಿರುವ ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ವಕೀಲರಿಗೆ ಯಾವುದೇ ಅಹವಾಲು ಇದ್ದರೆ ಅವರು ನೇರವಾಗಿ ತಮ್ಮ ಮುಂದೆ ವಿಚಾರ ಪ್ರಸ್ತಾಪಿಸಬಹುದಿತ್ತು ಎಂದು ಬೇಸರಿಸಿದ್ದಾರೆ.
“ಎಎಬಿ ಅಧ್ಯಕ್ಷರಿಗೆ ದೂರು ನೀಡಿರುವ ವಕೀಲರು ಮುಂದೆ ಬಂದು ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣಗಳನ್ನು ಬಿಡುಗಡೆ ಮಾಡುವಂತೆ ಕೋರಬಹುದು. ಎಲ್ಲಾ ಪ್ರಕರಣಗಳನ್ನು ನಾನೇಕೆ ಇಟ್ಟುಕೊಳ್ಳಲಿ?... ಸಾಮಾಜಿಕ ಮಾಧ್ಯಮದಲ್ಲಿ ಎಎಬಿ ನಿರ್ಣಯ ಹಂಚಿಕೆ ಮಾಡಲಾಗಿದೆ. ಇದು ನ್ಯಾಯಾಲಯದ ವರ್ಚಸ್ಸಿಗೆ ಹಾನಿ ಮಾಡುವುದಿಲ್ಲವೇ? ದೆಹಲಿ ಪ್ರಕರಣದ ಜೊತೆಗೆ ನನ್ನ ಹೆಸರನ್ನು ಉಲ್ಲೇಖಿಸಲಾಗಿದೆ. ಅದರ ಅಗತ್ಯವೇನಿತ್ತು?” ಎಂದು ನ್ಯಾ. ನಟರಾಜನ್ ಬೇಸರಿಸಿದ್ದಾರೆ.
ತನ್ನ ನಿಯಂತ್ರಣ ಮೀರಿ ತನ್ನ ಮುಂದಿರುವ ಹಲವು ಪ್ರಕರಣಗಳು ಭಾಗಶಃ ವಿಚಾರಣೆಯಾಗಿ ಉಳಿದಿವೆ. ಕೆಲ ಪ್ರಕರಣಗಳಲ್ಲಿ ವಕೀಲರು ವಾದಿಸಲು ಸಿದ್ಧರಿಲ್ಲ ಅಥವಾ ಮತ್ತೆ ಬೇರೆ ಪ್ರಕರಣಗಳಲ್ಲಿ ಸಮಯ ಮೀರಿ ವಾದಿಸಬಹುದು ಅಥವಾ ನಿರ್ದಿಷ್ಟ ದಿನದಂದು ಹಲವು ಪ್ರಕರಣಗಳು ಪಟ್ಟಿಯಾಗುವುದರಿಂದ ಅವು ಸಮಯ ಮೀರಿ ವಿಚಾರಣೆಗೆ ಬರದೇ ಇರಬಹುದು. ತಮ್ಮಲ್ಲಿ 16,000 ಸಾವಿರ ಪ್ರಕರಣಗಳು ಬಾಕಿ ಉಳಿದಿದ್ದು, ನ್ಯಾಯಮೂರ್ತಿಯೊಬ್ಬರು ನಿವೃತ್ತರಾದ್ದರಿಂದ 5,000 ಹೆಚ್ಚುವರಿ ಪ್ರಕರಣಗಳು ಸೇರ್ಪಡೆಯಾಗಿಯಾಗಿವೆ ಎಂದರು.
“ಪ್ರಕರಣವನ್ನು ಐದು ನಿಮಿಷದಲ್ಲಿ ವಿಚಾರಣೆ ನಡೆಸಿ, ಇತ್ಯರ್ಥಪಡಿಸಲು ಸಾಧ್ಯವೇ? ಹಿರಿಯ ವಕೀಲರು ತಾಸುಗಟ್ಟಲೇ ವಾದಿಸುತ್ತಾರೆ. ಬೆಳಿಗ್ಗೆಯಿಂದ ಸಂಜೆಯವರೆಗೂ, ಕಚೇರಿ ಸಮಯಕ್ಕಿಂತಲೂ ಹೆಚ್ಚಿನ ಸಮಯ ವಿಚಾರಣೆ ನಡೆಸುತ್ತೇನೆ” ಎಂದು ವಿವರಿಸಿದ್ದಾರೆ.
ನ್ಯಾ. ನಟರಾಜನ್ ಮುಂದೆ ಹಾಜರಾದ ಹಲವು ವಕೀಲರು ತಾವು ವಾದಿಸಿರುವ ಭಾಗಶಃ ವಿಚಾರಣೆಯಾಗಿರುವ ಪ್ರಕರಣಗಳನ್ನು ಬಿಡುಗಡೆ ಮಾಡದಂತೆ ಮನವಿ ಮಾಡಿದರು. ಅದಾಗ್ಯೂ, ನ್ಯಾ. ನಟರಾಜನ್ ಅವರು ಹಲವು ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣಗಳನ್ನು ತಮ್ಮಿಂದ ಬಿಡುಗಡೆ ಮಾಡಿದರು. ಬೆಂಗಳೂರು ಪೀಠದ ಮುಂದೆ ಬಾಕಿ ಉಳಿದಿರುವ ಈ ಪ್ರಕರಣಗಳನ್ನು ಸದ್ಯದಲ್ಲಿ ವಿಚಾರಣೆ ನಡೆಸುವ ಸಾಧ್ಯತೆ ಇಲ್ಲ. ಹೀಗಾಗಿ, ಅವುಗಳನ್ನು ಬಿಡುಗಡೆ ಮಾಡುತ್ತಿರುವುದಾಗಿ ನ್ಯಾ. ನಟರಾಜನ್ ಕಾರಣ ನೀಡಿದ್ದಾರೆ.
ಒಂದು ತಿಂಗಳ ಕಾಲ ಕಲಬುರ್ಗಿ ಪೀಠದಲ್ಲಿ ವಿಚಾರಣೆ ನಡೆಸುವುದರಿಂದ ಬೇಸಿಗೆ ರಜಾ ಬರುವುದರಿಂದ ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣಗಳಿಗೆ ಸಮಸ್ಯೆಯಾಗುತ್ತದೆ. “ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣಗಳನ್ನು ಬಿಡುಗಡೆ ಮಾಡುವಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ವಕೀಲರ ಸಂಘ ಮನವಿ ಮಾಡಿರುವ ವಿಚಾರ ಸಾಮಾಜಿಕ ಮಾಧ್ಯಮಗಳಿಂದ ಈ ನ್ಯಾಯಾಲಯದ ಗಮನಕ್ಕೆ ಬಂದಿದೆ. ಪರಿಸ್ಥಿತಿ ಹೀಗಿರುವಾಗ ಕಲಬುರ್ಗಿ ಪೀಠದಲ್ಲಿ ನಾನು ವಿಚಾರಣೆ ನಡೆಸುತ್ತಿರುವುದರಿಂದ ಈ ತಿಂಗಳು ಅಥವಾ ಏಪ್ರಿಲ್‌ನಲ್ಲಿ ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣಗಳ ವಿಚಾರಣೆ ನಡೆಸಲಾಗದು… ಹೀಗಾಗಿ, ಅವುಗಳನ್ನು ಬಿಡುಗಡೆ ಮಾಡುವುದು ಸೂಕ್ತ.. ಮಧ್ಯಂತರ ಆದೇಶ ವಿಸ್ತರಣೆಯಾಗಲಿದೆ” ಎಂದು ನ್ಯಾ. ನಟರಾಜನ್ ಆದೇಶಿಸಿದರು.
“ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣವನ್ನು ತಾನೇ ವಿಚಾರಣೆ ನಡೆಸಬೇಕು ಎಂದು ವಕೀಲರು ಬಯಸಿದರೂ ಎಎಬಿ ಠರಾವು ಪಾಸು ಮಾಡಿರುವ ಹಿನ್ನೆಲೆಯಲ್ಲಿ ತನಗೆ ಆ ಪ್ರಕರಣ ವಿಚಾರಣೆ ನಡೆಸುವ ಇಚ್ಛೆ ಇಲ್ಲ. ಯಾವುದೇ ವಕೀಲರಿಗೆ ಸಮಸ್ಯೆ ಇದ್ದರೆ ಅವರು ಲಿಖಿತವಾಗಿ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿ, ಆ ಪ್ರಕರಣವನ್ನು ಪುನಾ ತಮ್ಮ ಮುಂದೆ ಪಟ್ಟಿ ಮಾಡಲು ಕೋರಬಹುದು” ಎಂದು ನ್ಯಾ. ನಟರಾಜನ್ ಸಲಹೆ ನೀಡಿದ್ದಾರೆ.
ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ತಂದೆ ಕೆ ಎನ್ ಸುಬ್ಬಾರೆಡ್ಡಿ ವಿಚಾರಣೆಯಲ್ಲಿ ಭಾಗಿಯಾಗಿದ್ದ ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣವನ್ನೂ ನ್ಯಾ. ನಟರಾಜನ್ ಬಿಡುಗಡೆ ಮಾಡಿದರು. “ಈ ಪ್ರಕರಣವನ್ನು ಬಹುತೇಕ ವಿಚಾರಣೆ ನಡೆಸಲಾಗಿದೆ… ಕೆ ಎನ್ ಸುಬ್ಬಾರೆಡ್ಡಿಯವರ ಪುತ್ರ ಎಎಬಿ ಅಧ್ಯಕ್ಷರಾಗಿದ್ದಾರೆ. ಅವರೇ ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣ ಬಿಡುಗಡೆ ಸಂಬಂಧ ಠರಾವು ಪಾಸು ಮಾಡಿದ್ದಾರೆ. ಹೀಗಾಗಿ, ಈ ಪ್ರಕರಣವನ್ನು ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣದ ಪಟ್ಟಿಯಿಂದ ಬಿಡುಗಡೆ ಮಾಡಲಾಗಿದೆ” ಎಂದು ನ್ಯಾ. ನಟರಾಜನ್ ಆದೇಶಿಸಿದ್ದಾರೆ.
ನ್ಯಾ. ವರ್ಮಾ ಪ್ರಕರಣದ ಹಿನ್ನೆಲೆಯಲ್ಲಿ ಎಎಬಿಯು ಮಾರ್ಚ್ 24ರಂದು ವಿಶೇಷ ಸಭೆ ನಡೆಸಿ, ಠರಾವು ಪಾಸು ಮಾಡಿತ್ತು. ಇದರಲ್ಲಿ ನ್ಯಾ. ಕೆ ನಟರಾಜನ್ ಅವರ ಮುಂದೆ ವಿನಾಕಾರಣ ಹಲವು ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣಗಳು ಬಾಕಿ ಉಳಿದಿದ್ದು, ಅವುಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಗಿತ್ತು.
ಎಎಬಿ ವಿಶೇಷ ಸಭೆಯ ಠರಾವು ಹೊರಬಿದ್ದ ಬೆನ್ನಿಗೇ ಭಾರತೀಯ ವಕೀಲರ ಪರಿಷತ್ ಪದಾಧಿಕಾರಿ ಸದಾಶಿವರೆಡ್ಡಿ, ಎಎಬಿ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್ ಸೇರಿದಂತೆ ಹಲವು ವಕೀಲರು ಮಾರ್ಚ್ 26ರಂದು ಎಎಬಿ ಠರಾವಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ವಿಶೇಷ ಸಭೆಯಲ್ಲಿ ಚರ್ಚಿಸಿದ್ದ ವಿಚಾರಗಳೆ ಬೇರೆ, ಹಂಚಿಕೆ ಮಾಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಿರುವ ನಿರ್ಣಯಗಳೇ ಬೇರೆಯಾಗಿವೆ. ತಕ್ಷಣ ಅದನ್ನು ವಿವೇಕ್ ಸುಬ್ಬಾರೆಡ್ಡಿ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದರು. ಅಲ್ಲದೇ, ನ್ಯಾ. ನಟರಾಜನ್ ಅವರ ಬಗ್ಗೆ ವ್ಯಕ್ತಪಡಿಸಿರುವ ಹೇಳಿಕೆಯನ್ನು ಪ್ರಶ್ನಿಸಿದ್ದರು.