Karnataka High Court 
ಸುದ್ದಿಗಳು

ಸಾರ್ವಜನಿಕ ಶೌಚಾಲಯಗಳನ್ನು ಅಡುಗೆ ಕೇಂದ್ರಗಳಾಗಿ ಬಳಸಲಾಗುತ್ತಿದೆಯೇ ಎಂದು ಪರಿಶೀಲಿಸಲು ಸೂಚಿಸಿದ ಕರ್ನಾಟಕ ಹೈಕೋರ್ಟ್‌

ಬೆಂಗಳೂರು ನಗರದಲ್ಲಿ ಅಗತ್ಯವಿರುವಷ್ಟು ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಹಾಗೂ ಸದ್ಯ ಇರುವ ಶೌಚಾಲಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಕೋರಿ ಸರ್ಕಾರೇತರ ಸಂಸ್ಥೆ ಲೆಟ್ಜ್‌ಕಿಟ್‌ ಫೌಂಡೇಷನ್‌ ಅರ್ಜಿ ಸಲ್ಲಿಸಿದೆ.

Bar & Bench

ರಾಜ್ಯದಲ್ಲಿರುವ ಶೌಚಾಲಯಗಳ ಸ್ಥಿತಿಗತಿಯನ್ನು ಪರಿಶೀಲಿಸಲು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ. ಕೆಲ ಶೌಚಾಲಯಗಳನ್ನು ಅಡುಗೆ ಕೇಂದ್ರಗಳಾಗಿ ಬಳಸಲಾಗುತ್ತಿದೆ ಎನ್ನುವ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಪೀಠವು ಈ ನಿರ್ದೇಶನವನ್ನು ನೀಡಿತು.

ಬೆಂಗಳೂರು ನಗರದಲ್ಲಿ ಅಗತ್ಯವಿರುವಷ್ಟು ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಹಾಗೂ ಸದ್ಯ ಇರುವ ಶೌಚಾಲಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಕೋರಿ ಸರ್ಕಾರೇತರ ಸಂಸ್ಥೆ ಲೆಟ್ಜ್‌ಕಿಟ್‌ ಫೌಂಡೇಷನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಸತೀಶ್‌ ಚಂದ್ರ ಶರ್ಮ ಮತ್ತು ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ಮೇಲಿನ ಆದೇಶವನ್ನು ನೀಡಿತು.

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಿಗೆ ಈ ಮಾಹಿತಿಯನ್ನು ತಿಳಿಸುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಪೀಠವು ಸೂಚಿಸಿತು. “ಸದಸ್ಯ ಕಾರ್ಯದರ್ಶಿಯವರು ಶೌಚಾಲಯಗಳಲ್ಲಿ ನೀರಿನ ಲಭ್ಯತೆ ಇದೆಯೇ, ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತಿದೆಯೇ ಎನ್ನುವುದೂ ಸೇರಿದಂತೆ ಅವುಗಳ ಕುರಿತಾದ ಸಮಗ್ರ ಸ್ಥಿತಿಗತಿ ಸಮೀಕ್ಷೆಯನ್ನು ಕೈಗೊಳ್ಳಬೇಕು,” ಎಂದು ಪೀಠವು ತನ್ನ ಆದೇಶದಲ್ಲಿ ಹೇಳಿದೆ.

ಮುಂದುವರೆದು, ಸದಸ್ಯ ಕಾರ್ಯದರ್ಶಿಯವರು ಈ ಕುರಿತಾದ ಸ್ಥಿತಿಗತಿ ವರದಿಯನ್ನು ಅರ್ಜಿದಾರರು ಹಾಗೂ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲರಾದ ವಿದ್ಯುಲ್ಲತಾ ಅವರಿಗೆ ಸಲ್ಲಿಸಬೇಕು ಎಂದು ಅದೇಶದಲ್ಲಿ ಹೇಳಲಾಗಿದೆ.

ಸ್ವಚ್ಛ ಭಾರತ್‌ ಮಿಷನ್‌ನ ಮಾರ್ಗಸೂಚಿಗಳಡಿ ಸಂಚಾರಿ ಜನಸಂಖ್ಯೆಯ ಆಧಾರದಲ್ಲಿ ಪ್ರತಿ ನೂರರಿಂದ ನಾಲ್ಕುನೂರು ಪುರುಷರಿಗೆ ಒಂದು ಸಾರ್ವಜನಿಕ ಮೂತ್ರಿ (ವಾಟರ್‌ ಕ್ಲೋಸೆಟ್‌) ಹಾಗೂ ನೂರರಿಂದ ಇನ್ನೂರು ಮಹಿಳೆಯರಿಗೆ ಎರಡು ಮೂತ್ರಿಗಳು ಲಭ್ಯವಿರಬೇಕಿದೆ ಎನ್ನುವುದು ಅರ್ಜಿದಾರರ ವಾದವಾಗಿದೆ.

ಅರ್ಜಿದಾರರರ ಪರ ವಕೀಲರಾದ ರಮೇಶ್ ಪುತ್ತಿಗೆ ಅವರು ರಾಜ್ಯದಲ್ಲಿ ಅಲ್ಪ ಸಂಖ್ಯೆಯಲ್ಲಿ ಸಾರ್ವಜನಿಕ ಶೌಚಾಲಯಗಳಿದ್ದು, ಅವುಗಳು ಸಹ ಶೋಚನೀಯ ಸ್ಥಿತಿಯಲ್ಲಿವೆ ಎಂದು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿದರು. ಇದೇ ವೇಳೆ ಕೆಲವೊಂದು ಸಾರ್ವಜನಿಕ ಶೌಚಾಲಯಗಳನ್ನು ಅಡುಗೆ ಕೇಂದ್ರಗಳಾಗಿ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದ ಅರ್ಜಿದಾರ ಪರ ವಕೀಲರು ಆ ಕುರಿತಾದ ಛಾಯಾಚಿತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಈ ಹಿಂದೆ ಜುಲೈನಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದ ವೇಳೆ ಬೆಂಗಳೂರು ನಗರದಲ್ಲಿರುವ ಸಾರ್ವಜನಿಕ ಶೌಚಾಲಯಗಳ ಕಳಪೆ ಸ್ಥಿತಿಯನ್ನು ಉತ್ತಮಪಡಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತಿಳಿಸುವಂತೆ ಬಿಬಿಎಂಪಿಗೆ ನ್ಯಾಯಾಲಯವು ನಿರ್ದೇಶಿಸಿತ್ತು.

ಪ್ರಕರಣದ ಮುಂದಿನ ವಿಚಾರಣೆಯು ಸೆ. 7ರಂದು ನಡೆಯಲಿದೆ.