High Court of Karnataka 
ಸುದ್ದಿಗಳು

ನ್ಯಾಯಾಲಯಕ್ಕೆ ವಂಚನೆ: ಶ್ರೀ ರವಿಶಂಕರ್‌ ಸಂಸ್ಥಾಪಕರಾಗಿರುವ ಟ್ರಸ್ಟ್‌ಗೆ ಭೂಮಿ ಮಾರಾಟ ರದ್ದತಿಗೆ ಹೈಕೋರ್ಟ್‌ ನಕಾರ

2003ರಲ್ಲಿ ಭೂಮಿ ಖರೀದಿಸಲು ಕರ್ನಾಟಕ ಭೂ ಸುಧಾರಣಾ ಕಾಯಿದೆ ಸೆಕ್ಷನ್‌ 80ರ ಅಡಿ ನಿಷೇಧದಿಂದ ತಪ್ಪಿಸಿಕೊಳ್ಳಲು ಸಂಸ್ಥೆಯು ತನ್ನ ಟ್ರಸ್ಟಿ ಆರ್‌ ರಘು ಅವರನ್ನು ಖರೀದಿದಾರರನ್ನಾಗಿ ಮಾಡಿದೆ ಎಂದ ನ್ಯಾಯಾಲಯ.

Bar & Bench

ನ್ಯಾಯಾಲಯದ ಹರಾಜಿನ ಮೂಲಕ 2003 ಮತ್ತು 2005ರ ನಡುವೆ ಭೂಮಿಯನ್ನು ಖರೀದಿಸುವಾಗ ಶ್ರೀ ಶ್ರೀ ರವಿಶಂಕರ್ ಅವರು ಸ್ಥಾಪಕ ಟ್ರಸ್ಟಿಯಾಗಿರುವ ವೇದ ವಿಜ್ಞಾನ ಮಹಾವಿದ್ಯಾ ಪೀಠವು ಮೋಸದ ಚಟುವಟಿಕೆಯಲ್ಲಿ ಭಾಗಿಯಾಗಿದೆ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಹೇಳಿದೆ [ಆರ್‌ ರಘು ವರ್ಸಸ್‌ ಜಿ ಎಂ ಕೃಷ್ಣ].

ಭೂಮಿ ಮಾರಾಟ ಹರಾಜು ಬದಿಗೆ ಸರಿಸಿದ್ದ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರ್‌ ರಘು ಅವರು ಸಲ್ಲಿಸಿದ್ದ ಆದೇಶ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್‌ ನಟರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

2003ರಲ್ಲಿ ಭೂಮಿ ಖರೀದಿಸಲು ಕರ್ನಾಟಕ ಭೂ ಸುಧಾರಣಾ ಕಾಯಿದೆ ಸೆಕ್ಷನ್‌ 80ರ ಅಡಿ ನಿಷೇಧದಿಂದ ತಪ್ಪಿಸಿಕೊಳ್ಳಲು ತನ್ನ ಟ್ರಸ್ಟಿ ಆರ್‌ ರಘು ಅವರನ್ನು ಖರೀದಿದಾರರನ್ನಾಗಿ ಮಾಡಲಾಗಿದೆ. ಸೆಕ್ಷನ್‌ 80ರ ಪ್ರಕಾರ ಕೃಷಿಯೇತರರಿಗೆ ಭೂಮಿ ವರ್ಗಾಯಿಸುವಂತಿಲ್ಲ ಎನ್ನುವ ಅಂಶವನ್ನು ನ್ಯಾಯಾಲಯವು ಗಮನಿಸಿತು.

“ಭೂಮಿಯನ್ನು ಖರೀದಿಸುವುದಕ್ಕಾಗಿ ಟ್ರಸ್ಟ್‌, ಅರ್ಜಿದಾರರನ್ನು ಖರೀದಿರರನ್ನಾಗಿ ಮಾಡಿದೆ. ಕಾಯಿದೆಯ ಸೆಕ್ಷನ್‌ 80ರ ಅಡಿ ನಿಷೇಧ ತಪ್ಪಿಸಲು ಹೀಗೆ ಮಾಡಲಾಗಿದೆ. ಒಂದೊಮ್ಮೆ ಅರ್ಜಿದಾರರು ಆಸ್ತಿಯನ್ನು ಖರೀದಿಸದೆ ಹಾಗೂ ಟ್ರಸ್ಟ್‌ ಅದನ್ನು ಖರೀದಿಸಿದ್ದರೆ ಅರ್ಜಿದಾರರು ನ್ಯಾಯಾಲಯಕ್ಕೆ ವಂಚಿಸಿದ್ದಾರೆ ಎಂದಾಗುತ್ತದೆ. ಅಕ್ರಮ ಮತ್ತು ಬೇನಾಮಿ ವರ್ಗಾವಣೆಗೆ ನ್ಯಾಯಾಲಯವನ್ನು ಪಕ್ಷಕಾರವನ್ನಾಗಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.

“1974ರಿಂದ ಅಸ್ತಿತ್ವದಲ್ಲಿದ್ದ 2020ರಲ್ಲಿ ಭೂಸುಧಾರಣಾ ಕಾಯಿದೆಯ ಸೆಕ್ಷನ್‌ 80 ಅನ್ನು ಹಿಂಪಡೆದಿರುವುದೂ ಸೇರಿದಂತೆ ಹಲವು ಕಾರಣಗಳಿಗಾಗಿ ಮಾರಾಟ ಹರಾಜನ್ನು ಬದಿಗೆ ಸರಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಮಾರಾಟ ಹರಾಜು ಪ್ರಶ್ನಿಸಿದ್ದ ಮತ್ತೊಂದು ಸುತ್ತಿನ ದಾವೆಯನ್ನು ಹೈಕೋರ್ಟ್‌ ಈಗಾಗಲೇ ವಜಾ ಮಾಡಿದೆ. ಆದರೆ, ನ್ಯಾಯಾಲಯವು ವಂಚನೆಯ ವಿಚಾರವನ್ನು ಪರಿಶೀಲಿಸಿಲ್ಲ ಎಂದು ಈ ನ್ಯಾಯಾಲಯ ಹೇಳಿದೆ.

“ಅರ್ಜಿದಾರರು (ರಘು) ವಂಚಿಸಿದ್ದರೆ ಖರೀದಿ ಹರಾಜು ಬದಿಗೆ ಸರಿಸಿ ಹೊಸದಾಗಿ ಆಸ್ತಿ ಖರೀದಿ ಹರಾಜು ಮಾಡಲು ಆದೇಶಿಸಲಾಗುತ್ತಿತ್ತು. ಆದರೆ, ಟ್ರಸ್ಟ್‌ಗೆ ಮೌಲ್ಯಯುತವಾದ ಹಕ್ಕು ಸಂಚಿತವಾಗಿದೆ ಎಂಬ ಅಂಶ ಪರಿಗಣಿಸಿ, ಹರಾಜು ಮಾರಾಟ ಮತ್ತು ಮಾರಾಟ ಪ್ರಮಾಣಪತ್ರ ಉಳಿಸುವ ಮೂಲಕ ಸಮಾನ (ಇಕ್ವಿಟಿ) ತತ್ವ ಮತ್ತು ಅದೇ ಸಮಯದಲ್ಲಿ ಮೊದಲನೇ ಪ್ರತಿವಾದಿಗೆ ಸೂಕ್ತ ಪರಿಹಾರ ನೀಡಬಹುದು" ಎಂದು ನ್ಯಾಯಾಲಯವು ವಿವರಿಸಿದೆ.

ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಭೂಮಿ ಹರಾಜು ಮಾರಾಟ ಬದಿಗೆ ಸರಿಸುವುದರಿಂದ ಹಿಂದೆ ಸರಿದಿದೆ. ಇದಕ್ಕೆ ಬದಲಾಗಿ, ವೇದ ವಿಜ್ಞಾನ ಮಹಾ ವಿದ್ಯಾಪೀಠದ ಟ್ರಸ್ಟಿಯಾಗಿ ಅರ್ಜಿದಾರ ರಘು ವಂಚನೆ ಎಸಗಿದ್ದಾರೆ ಎಂದು ಮಾರಾಟ ವಜಾ ಮಾಡಿದ್ದ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಬದಿಗೆ ಸರಿಸಿದೆ. ಹರಾಜು ಹಾಕಿರುವ ಭೂಮಿಯ ಬೆಲೆ ಏಕಾಏಕಿಯಾಗಿ ಏರಿಕೆಯಾಗಿರುವುದರಿಂದ ನ್ಯಾಯದ ಭಾಗವಾಗಿ ಮೂಲ ಭೂಮಾಲೀಕರಿಗೆ ಎಕರೆಗೆ ₹25 ಲಕ್ಷ ಪಾವತಿಸಲು ಅರ್ಜಿದಾರರಿಗೆ ಆದೇಶಿಸಿದೆ.

“ತನ್ನ ಟ್ರಸ್ಟಿಯ ಮೂಲಕ ಭೂಮಿ ಖರೀದಿಸುವ ಮೂಲಕ ಟ್ರಸ್ಟ್‌ ನ್ಯಾಯಾಲಯಕ್ಕೆ ವಂಚಿಸಿದೆ. ಮಾರಾಟ ಘೋಷಣೆಯಾಗುವವರೆಗೆ ಅರ್ಜಿದಾರ ತಾನೇ ಖರೀದಿದಾರ ಎಂದು ಹೇಳಿಕೊಂಡಿದ್ದು, ಆನಂತರ ಟ್ರಸ್ಟ್‌ ಭೂಮಿ ಖರೀದಿಸಿದೆ ಎಂದು ಹೇಳಿದ್ದಾರೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ಅರ್ಜಿದಾರರ ಬದಲಿಗೆ ಟ್ರಸ್ಟ್‌ ಆಸ್ತಿ ಖರೀದಿಸಿದ್ದರೆ ಅರ್ಜಿದಾರರು ನ್ಯಾಯಾಲಯಕ್ಕೆ ವಂಚಿಸಿದ್ದು, ಈ ಅಕ್ರಮ ಮತ್ತು ಬೇನಾಮಿ ವರ್ಗಾವಣೆಯಲ್ಲಿ ನ್ಯಾಯಾಲಯವನ್ನು ವಿನಾ ಕಾರಣ ಪಕ್ಷಕಾರವನ್ನಾಗಿ ಮಾಡಲಾಗಿದೆ” ಎಂದು ಪೀಠ ಹೇಳಿದೆ.

ಮಾರಾಟ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿರುವ ಸರ್ವೇ ನಂಬರ್‌ಗಳನ್ನು ರಘು ಅವರಿಗೆ ಮಾರಾಟ ಮಾಡಲಾಗಿಲ್ಲ ಎಂಬ ಭೂಮಿಯ ಮಾಲೀಕರ ವಾದವನ್ನು ಪರಿಗಣಿಸಿರುವ ನ್ಯಾಯಾಲಯವು ರಘು ಅವರಿಗೆ ಮಾರಾಟ ಮಾಡಿರುವ ಭೂಮಿಯ ಎಲ್ಲೆ ನಿಗದಿಪಡಿಸಲು ಕಂದಾಯ ಸರ್ವೇಗೆ ಆದೇಶಿಸಿದೆ. ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಪಕ್ಷಕಾರರಿಗೆ ನಿರ್ದೇಶಿಸಿದೆ.

ಅರ್ಜಿದಾರ ರಘು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ “ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ಜಿಲ್ಲಾ ನ್ಯಾಯಾಲಯವು ವಂಚನೆ ಎಂದು ಉಲ್ಲೇಖಿಸಿದೆ. ಇವೆಲ್ಲವೂ ಊಹಾತ್ಮಕ ಆರೋಪಗಳಾಗಿವೆ. ಟ್ರಸ್ಟ್‌ ಕಾನೂನಾತ್ಮಕ ಸಂಸ್ಥೆಯಲ್ಲ (ಲೀಗಲ್‌ ಎಂಟಿಟಿ) ಬದಲಿಗೆ ಟ್ರಸ್ಟಿಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಅರ್ಜಿದಾರರು ಕೃಷಿಕನಾಗಿರುವುದರಿಂದ ಟ್ರಸ್ಟ್‌ ಪರವಾಗಿ ಭೂಮಿ ಹೊಂದಲು ಅರ್ಹ” ಎಂದು ವಾದಿಸಿದ್ದರು.

ಪ್ರತಿವಾದಿ ಜಿ ಎಂ ಕೃಷ್ಣ ಅವರನ್ನು ವಕೀಲ ಬ್ರಿಜೇಶ್‌ ಸಿಂಗ್‌ “ಸಾಲ ವಸೂಲಾತಿಯ ಭಾಗವಾಗಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು (ಕೆಎಸ್‌ಎಫ್‌ಸಿ) ಭೂಮಿ ಹರಾಜು ಹಾಕಿದೆ. ಟ್ರಸ್ಟ್‌ನ ಹಣದ ಮೂಲಕ ಆಸ್ತಿ ಖರೀದಿಸಿದ್ದರೂ ತಾನೇ ಭೂಮಿಯ ಖರೀದಿದಾರರ ಎಂದು ಅರ್ಜಿದಾರರು ಸುಳ್ಳು ಹೇಳಿದ್ದಾರೆ” ಎಂದು ವಾದಿಸಿದ್ದರು.