ಕರ್ನಾಟಕ ಹೈಕೋರ್ಟ್‌ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾದ ಎಲ್ಲಾ ತೀರ್ಪುಗಳಿಗೆ ಕರ್ನಾಟಕ ಹೈಕೋರ್ಟ್ ತಟಸ್ಥ ಉಲ್ಲೇಖ ವ್ಯವಸ್ಥೆ ಜಾರಿಗೆ ತಂದಿದೆ.
ತನ್ನ ಪ್ರಕಟಣಾ ವಿಧಾನವನ್ನು ಲೆಕ್ಕಿಸದೆ ತೀರ್ಪೊಂದನ್ನು ಶಾಶ್ವತವಾಗಿ ಗುರುತಿಸುವ ಗುರಿ ಈ ತಟಸ್ಥ ಉಲ್ಲೇಖದ್ದಾಗಿದೆ. ಕರ್ನಾಟಕ ಹೈಕೋರ್ಟ್‌ನ ತಟಸ್ಥ ಉಲ್ಲೇಖ ಸಂಖ್ಯೆ ಈ ಕೆಳಗಿನಂತಿದೆ:
ನ್ಯಾಯಾಲಯದ ತೀರ್ಪುಗಳನ್ನು ಪಡೆಯಲು ಯಾವುದೇ ಚಂದಾದಾರಿಕೆ ಇಲ್ಲವೇ ಇತರೆ ಅಡೆತಡೆಗಳಿಲ್ಲ ಎಂಬುದನ್ನು ತಟಸ್ಥ ಉಲ್ಲೇಖ ವ್ಯವಸ್ಥೆ ಖಚಿತಪಡಿಸಲಿದ್ದು ಇದು ಎಲ್ಲರಿಗೂ ದೊರೆಯಲಿದೆ.
"ತಟಸ್ಥ ಉಲ್ಲೇಖ ವ್ಯವಸ್ಥೆಯಿಂದ ದಾವೆದಾರರು, ವಕೀಲರು, ಸರ್ಕಾರಿ ಇಲಾಖೆಗಳು ಹಾಗೂ ಕಾನೂನು ವಿದ್ಯಾರ್ಥಿಗಳಿಗೆ ದೊರೆಯುವ ಪ್ರಮುಖ ಪ್ರಯೋಜನವೆಂದರೆ, ಇವು ನ್ಯಾಯಾಲಯ ನಿಯೋಜಿಸಿರುವ ಉಲ್ಲೇಖಗಳಾಗಿದ್ದು ಅಧಿಕೃತತೆಯಿಂದ ಕೂಡಿವೆ. ಅಂತರ್ಜಾಲದ ಮೂಲಕ ಅವುಗಳನ್ನು ಪಡೆಯಬಹುದಾಗಿದೆ. ಬಹಳ ಮುಖ್ಯವಾಗಿ ಇವುಗಳು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲಾಗಿದ್ದು ಯಾವುದೇ ಪ್ರವೇಶ ಅಥವಾ ಚಂದಾದಾರಿಕೆಯ ಅಡೆತಡೆ ಇರುವುದಿಲ್ಲ” ಎಂದು ಹೈಕೋರ್ಟ್ ನೋಟಿಸ್ ತಿಳಿಸಿದೆ.
ಕರ್ನಾಟಕ ಹೈಕೋರ್ಟ್ ಜಾಲತಾಣದಲ್ಲಿ ಲಭ್ಯವಿರುವ ತೀರ್ಪುಗಳನ್ನು ಈಗ ಯಾವುದೇ ವಾಟರ್‌ಮಾರ್ಕ್ ಇಲ್ಲದೆ ಪಡೆಯಬಹುದಾಗಿದೆ ಮತ್ತು ಡಿಜಿಟಲ್ ಸಹಿಯ ದೃಢೀಕರಣ ಪರಿಶೀಲಿಸಲು ಕ್ಯು ಆರ್ ಕೋಡ್‌ನಂತಹ ಮೌಲ್ಯವರ್ಧಿತ ಅಂಶಗಳನ್ನು ಅಳವಡಿಸಲಾಗಿದೆ ಎಂದು ನೋಟಿಸ್ ತಿಳಿಸಿದೆ.
"ಅಂತೆಯೇ, ಹೈಕೋರ್ಟ್ ಜಾಲತಾಣದ ತೀರ್ಪುಗಳ ಮೆನು ಕ್ಲಿಕ್ಕಿಸಿದಾಗ, ಉಲ್ಲೇಖದ ಸಂಖ್ಯೆಯ ಮೂಲಕ ಹುಡುಕಾಟ ನಡೆಸುವ ಅವಕಾಶ ಇದೆ, ಇದರಲ್ಲಿ ಆದೇಶದ ದಿನಾಂಕದ ಮೂಲಕ ಉಲ್ಲೇಖದ ಸಂಖ್ಯೆಯನ್ನು ಒದಗಿಸಲಾಗಿದ್ದು ಇದು ಪ್ರಕರಣಕ್ಕೆ ಅನುಗುಣವಾದ ತೀರ್ಪುಗಳನ್ನು ವೀಕ್ಷಿಸಲು/ ಡೌನ್‌ಲೋಡ್ ಮಾಡುವ ಅವಕಾಶ, ಪಕ್ಷಕಾರರ ವಿವರ, ತಟಸ್ಥ ಉಲ್ಲೇಖ ಸಂಖ್ಯೆ ಹಾಗೂ ಆದೇಶ ದಿನಾಂಕದಂತಹ ಮಾಹಿತಿ ಒದಗಿಸುತ್ತಿದೆ. ಇದಕ್ಕೆ ಈಗ ಯಾವುದೇ ವಾಟರ್‌ಮಾರ್ಕ್ ಇಲ್ಲದೆ ತೀರ್ಪುಗಳನ್ನು ಪಡೆಯುವ ಮತ್ತು ಡಿಜಿಟಲ್ ಸಹಿಯ ದೃಢೀಕರಣವನ್ನು ಪರಿಶೀಲಿಸುವ ಕ್ಯು ಆರ್ ಕೋಡ್‌ನಂತಹ ಮೌಲ್ಯವರ್ಧಿತ ಅಂಶಗಳನ್ನು ಅಳವಡಿಸಲಾಗಿದೆ” ಎಂದು ವಿವರಿಸಲಾಗಿದೆ.
ಇಂತಹ ತಟಸ್ಥ ಉಲ್ಲೇಖ ವ್ಯವಸ್ಥೆ ಜಾರಿಗೆ ತರುವ ಸಂಬಂಧ ಈ ವರ್ಷದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಮೊದಲ ಬಾರಿಗೆ ಘೋಷಣೆ ಮಾಡಿದ್ದರು. ನ್ಯಾಯಾಲಯ ನೀಡುವ ಎಲ್ಲಾ ತೀರ್ಪುಗಳಿಗೆ ತಟಸ್ಥ ಉಲ್ಲೇಖ ಸಂಖ್ಯೆ ನೀಡಲಾಗುತ್ತದೆ ಮತ್ತು ಮೂರು ಹಂತಗಳಲ್ಲಿ ಈ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಅವರು ಆಗ ಮಾಹಿತಿ ನೀಡಿದ್ದರು.
ತೀರ್ಪುಗಳಿಗೆ ಏಕರೂಪದ ಮತ್ತು ವಿಶಿಷ್ಟವಾದ ಉಲ್ಲೇಖ ಸಂಖ್ಯೆ ಅಭಿವೃದ್ಧಿಪಡಿಸಲು ಮತ್ತು ಜಾರಿಗೆ ತರಲು ಸುಪ್ರೀಂ ಕೋರ್ಟ್ ಕಳೆದ ವರ್ಷ ನವೆಂಬರ್‌ನಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳ ತ್ರಿಸದಸ್ಯ ಸಮಿತಿ ರಚಿಸಿತ್ತು.
ಸುಪ್ರೀಂ ಕೋರ್ಟ್, ದೆಹಲಿ, ಕೇರಳ, ಮದ್ರಾಸ್ ಹಾಗೂ ಬಾಂಬೆ ಹೈಕೋರ್ಟ್‌ಗಳು ಈಗಾಗಲೇ ತಮ್ಮ ತೀರ್ಪುಗಳಿಗೆ ತಟಸ್ಥ ಉಲ್ಲೇಖ ಸಂಖ್ಯೆ ನೀಡುತ್ತಿವೆ.