ಸುದ್ದಿಗಳು

ಅಪ್ರಾಪ್ತರಿಗೆ ಸನ್ಯಾಸತ್ವ ನೀಡುವಾಗ ಸರ್ಕಾರ ಸುಮ್ಮನೆ ಕೂರಲಾಗದು: ಶಿರೂರು ಯತಿ ನೇಮಕ ಕುರಿತು ಕರ್ನಾಟಕ ಹೈಕೋರ್ಟ್

ಉಡುಪಿಯ ಶಿರೂರು ಮಠಕ್ಕೆ ಹದಿನಾರು ವರ್ಷದ ಬಾಲಕನನ್ನು ಮಠಾಧಿಪತಿ ಮಾಡಿದ್ದನ್ನು ಪರಿಶೀಲನೆ ನಡೆಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

Bar & Bench

ಅಪ್ರಾಪ್ತ ವಯಸ್ಕರನ್ನು ಸನ್ಯಾಸಕ್ಕೆ ಒತ್ತಾಯಿಸಿದಾಗ, ಅವರ ಹಕ್ಕುಗಳಿಗೆ ಚ್ಯುತಿ ಬಂದಾಗ ಸರ್ಕಾರ ಮೂಕ ಪ್ರೇಕ್ಷಕನಾಗಿ ಕೂರಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಅಭಿಪ್ರಾಯಪಟ್ಟಿದೆ.

ಉಡುಪಿಯ ಶಿರೂರು ಮಠಕ್ಕೆ ಹದಿನಾರು ವರ್ಷದ ಬಾಲಕನನ್ನು ಮಠಾಧಿಪತಿ ಮಾಡಿದ್ದನ್ನು ಪರಿಶೀಲನೆ ನಡೆಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚಿಸುವ ವೇಳೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

“ಅಪ್ರಾಪ್ತ ವಯಸ್ಕನನ್ನು ಸನ್ಯಾಸಿಯಾಗುವಂತೆ ಬಲವಂತ ಮಾಡುವುದರಿಂದ ಅವನ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ. ಮನವಿಯಲ್ಲಿ ತಿದ್ದುಪಡಿ ಮಾಡಲು ಅರ್ಜಿದಾರರಿಗೆ ಅವಕಾಶ ನೀಡಲಾಗಿದೆ. ಪ್ರಕರಣವನ್ನು (ವಿಚಾರಣೆಗಾಗಿ) ಜೂನ್ 2ಕ್ಕೆ ಪಟ್ಟಿ ಮಾಡಿ” ಎಂದು ನ್ಯಾಯಾಲಯ ಸೂಚಿಸಿತು.

ಉಡುಪಿ ಶಿರೂರು ಮಠದ 31ನೇ ಯತಿಯಾಗಿ ಧರ್ಮಸ್ಥಳ ಸಮೀಪದ ನಿಡ್ಲೆಯ ಎಂ ಉದಯಕುಮಾರ್‌ ಸರಳತ್ತಾಯ ಹಾಗೂ ಶ್ರೀ ವಿದ್ಯಾ ದಂಪತಿಯ 16 ವರ್ಷದ ಪುತ್ರ ಅನಿರುದ್ಧ ಸರಳತ್ತಾಯ ಅವರನ್ನು ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಇತ್ತೀಚೆಗೆ ಘೋಷಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಠದ ನಿಕಟಪೂರ್ವ ಯತಿ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸಹೋದರ ಪಿ ಲಾತವ್ಯ ಆಚಾರ್ಯ ನೇತೃತ್ವದ ಉಡುಪಿಯ ಶ್ರೀ ಶಿರೂರು ಮಠ ಭಕ್ತರ ಸಮಿತಿ ಮತ್ತಿತರರು ಅರ್ಜಿ ಸಲ್ಲಿಸಿದ್ದರು. 2018ರಲ್ಲಿ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಮೃತಪಟ್ಟಿದ್ದರು.

ಮಠದ ಯತಿಯಾಗಿ ನೇಮಕವಾಗಿರುವುದು 16 ವರ್ಷದ ಬಾಲಕ ಎಂದು ಹಲವು ಪತ್ರಿಕಾ ವರದಿಗಳು ಹೇಳುತ್ತಿವೆ. ಇದಕ್ಕೆ ಮಠದ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಪ್ರಾಪ್ತ ವಯಸ್ಕ ಮಠದ ಶಿಷ್ಯ ಕೂಡ ಅಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಯಾವುದೇ ವ್ಯಕ್ತಿಯನ್ನು ಮಠದ ಪೀಠಾಧಿಪತಿ ಎಂದು ಘೋಷಿಸದಂತೆ ಮತ್ತು ಮಠದ ಯಾವುದೇ ಸ್ಥಿರಾಸ್ತಿ ಮತ್ತು ವಿಗ್ರಹಗಳ ಕುರಿತು ವ್ಯವಹಾರ ನಡೆಸದಂತೆ ಕಳೆದ ಮಾರ್ಚ್‌ನಲ್ಲಿ ಸಂಬಂಧಪಟ್ಟವರಿಗೆ ಕಾನೂನು ನೋಟಿಸ್‌ ನೀಡಲಾಗಿತ್ತು. ಇಷ್ಟಾದರೂ ಶಿರೂರು ಮಠಕ್ಕೆ ಯತಿಯನ್ನು ಘೋಷಿಸಲಾಗಿದೆ. ಇದು ಅಪ್ರಾಪ್ತ ವಯಸ್ಕರ ಹಕ್ಕುಗಳ ಉಲ್ಲಂಘನೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಜಿಯಲ್ಲಿ ವ್ಯಾಪಕ ಮನವಿಗಳಿರುವುದನ್ನು ಗಮನಿಸಿದ ನ್ಯಾಯಾಲಯ ಅರ್ಜಿಯನ್ನು ತಿದ್ದಪಡಿ ಮಾಡಲು ಅರ್ಜಿದಾರರಿಗೆ ಅವಕಾಶ ನೀಡಿದ್ದು ಪ್ರಕರಣದ ವಿಚಾರಣೆಯನ್ನು ಜೂನ್ 2ಕ್ಕೆ ನಿಗದಿಪಡಿಸಿದೆ.