N Ram, Arun Shourie, and Prashant Bhushan, Contempt of Court 
ಸುದ್ದಿಗಳು

ನ್ಯಾಯಾಂಗ ನಿಂದನೆ ಕಾಯಿದೆ ಸೆಕ್ಷನ್‌ 2(ಸಿ)(ಐ) ಪ್ರಶ್ನಿಸಿ ಅರ್ಜಿ; ಕೇಂದ್ರದ ಪ್ರತಿಕ್ರಿಯೆ ಬಯಸಿದ ರಾಜ್ಯ ಹೈಕೋರ್ಟ್‌

ಸುಪ್ರೀಂ ಕೋರ್ಟ್‌ ವಕೀಲ ಪ್ರಶಾಂತ್‌ ಭೂಷಣ್‌, ಹಿರಿಯ ಪತ್ರಕರ್ತ ಎನ್‌ ರಾಮ್‌, ಮಾಜಿ ಕೇಂದ್ರ ಸಚಿವ ಅರುಣ್‌ ಶೌರಿ, ಪತ್ರಕರ್ತ ಕೃಷ್ಣಪ್ರಸಾದ್ ನ್ಯಾಯಾಂಗ ನಿಂದನೆ ಸೆಕ್ಷನ್‌ 2(ಸಿ)(ಐ) ಸಿಂಧುತ್ವ ಪ್ರಶ್ನಿಸಿ‌ ಅರ್ಜಿ ಸಲ್ಲಿಸಿದ್ದಾರೆ.

Bar & Bench

ನ್ಯಾಯಾಂಗ ನಿಂದನೆ ಕಾಯಿದೆ ಸೆಕ್ಷನ್‌ 2(ಸಿ)(ಐ) ಸಿಂಧುತ್ವ ಪ್ರಶ್ನಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ನೋಟಿಸ್‌ ಜಾರಿಗೊಳಿಸಿರುವ ಮಹತ್ವದ ಬೆಳವಣಿಗೆ ನಡೆದಿದೆ. ಈ ಸೆಕ್ಷನ್‌ ಅಡಿ ನ್ಯಾಯಾಲಯಗಳನ್ನು ವಿವಾದಾತ್ಮಕಗೊಳಿಸುವ ಅಥವಾ ಘನತೆಯನ್ನು ಕುಂದಿಸುವ ಯಾವುದೇ ವಿಷಯದ ಪ್ರಕಟಣೆಯನ್ನು ಅಪರಾಧೀಕರಿಸಲಾಗುತ್ತದೆ.

ಸಂವಿಧಾನದ 19ನೇ ವಿಧಿಯಡಿ ದೊರೆತಿರುವ ವಾಕ್‌ ಸ್ವಾತಂತ್ರ್ಯಕ್ಕೆ ಮೇಲಿನ ಕಾಯಿದೆಯು ಧಕ್ಕೆ ಉಂಟು ಮಾಡುತ್ತದೆ ಎಂದು ನಿಬಂಧನೆಯನ್ನು ಪ್ರಶ್ನಿಸಿ ಪತ್ರಕರ್ತ ಕೃಷ್ಣಪ್ರಸಾದ್‌, ಸುಪ್ರೀಂ ಕೋರ್ಟ್‌ ವಕೀಲ ಪ್ರಶಾಂತ್‌ ಭೂಷಣ್‌, ಹಿಂದೂ ಸಮೂಹದ ನಿರ್ದೇಶಕ ಮತ್ತು ಪತ್ರಕರ್ತ ಎನ್‌ ರಾಮ್‌, ಕೇಂದ್ರ ಸರ್ಕಾರದ ಮಾಜಿ ಸಚಿವ ಅರುಣ್‌ ಶೌರಿ ಅರ್ಜಿ ಸಲ್ಲಿಸಿದ್ದಾರೆ.

“ಆಕ್ಷೇಪಾರ್ಹವಾದ ಉಪ ಸೆಕ್ಷನ್‌ ಸಂವಿಧಾನದ 19(1)(ಎ)ನೇ ವಿಧಿಯಡಿ ದೊರೆತಿರುವ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ. 19(2)ನೇ ವಿಧಿಯಡಿ ಇದು ಸಮಂಜಸವಾದ ನಿರ್ಬಂಧಕ್ಕೆ ಒಳಪಡುವುದಿಲ್ಲ. ಆಕ್ಷೇಪಾರ್ಹವಾದ ಈ ಉಪ ಸೆಕ್ಷನ್‌ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗಂಭೀರವಾದ ಪರಿಣಾಮ ಉಂಟು ಮಾಡುತ್ತದೆ,” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರಿದ್ದ ವಿಭಾಗೀಯ ಪೀಠವು ಫೆಬ್ರವರಿ ವಿಚಾರಣೆ ಮುಂದೂಡಿದೆ.

ನ್ಯಾಯಾಂಗ ನಿಂದನೆ ಕಾಯಿದೆಯಲ್ಲಿ ಸಿವಿಲ್‌ ಮತ್ತು ಕ್ರಿಮಿನಲ್‌ ನಿಂದನೆ ಎಂಬ ಎರಡು ವಿಧಗಳಿವೆ. ನ್ಯಾಯಾಲಯವನ್ನು ವಿವಾದಾತ್ಮಕಗೊಳಿಸುವ ಅಥವಾ ಅದರ ಘನತೆಯನ್ನು ಕುಂದಿಸುವ ವಿಷಯದ ಪ್ರಕಟಣೆ ಅಥವಾ ನಡತೆಯನ್ನು ಅಪರಾಧೀಕರಣಗೊಳಿಸುವ ಉಪನಿಬಂಧನೆ (ಐ) ಅನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.