Yediyurappa and Karnataka HC
Yediyurappa and Karnataka HC 
ಸುದ್ದಿಗಳು

ರಾಜಕೀಯ ಕಾರ್ಯದರ್ಶಿಯಾಗಿ ಎನ್‌ ಆರ್‌ ಸಂತೋಷ್‌ ನೇಮಕ: ರಾಜ್ಯ ಸರ್ಕಾರದ ಪ್ರತಿಕ್ರಿಯೆ ಬಯಸಿದ ಹೈಕೋರ್ಟ್‌

Bar & Bench

ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಎನ್‌ ಆರ್‌ ಸಂತೋಷ್‌ ಅವರ ನೇಮಕಾತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಬಯಸಿದೆ.

ಮುಖ್ಯಮಂತ್ರಿಯವರು ಯಾವುದೇ ನೀತಿ ನಿಯಮ ಅನುಸರಿಸದೇ ಸ್ವೇಚ್ಛೆಯಿಂದ ರಾಜಕೀಯ ಕಾರ್ಯದರ್ಶಿ ಹುದ್ದೆ ಸೃಷ್ಟಿಸಿ ಅದಕ್ಕೆ ಸಂಪುಟ ದರ್ಜೆ ಸ್ಥಾನಮಾನ ಕಲ್ಪಿಸಿದ್ದಾರೆ ಎಂದು ವಕೀಲ ಎಸ್‌ ಉಮಾಪತಿ ಅವರು ಮನವಿ ಸಲ್ಲಿಸಿದ್ದಾರೆ. ಯಡಿಯೂರಪ್ಪ ಅವರ ಸಂಬಂಧಿಯಾದ ಸಂತೋಷ್‌ ಅವರನ್ನು ಒಳಗೊಳ್ಳುವ ಏಕೈಕ ಉದ್ದೇಶದಿಂದ ಹುದ್ದೆ ಸೃಷ್ಟಿಸಲಾಗಿದ್ದು, ಅದನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.

ಬೆಂಗಳೂರಿನ ವಕೀಲರಾದ ಎಸ್ ಉಮಾಪತಿಯವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಂಬಂಧ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರ ಹಾಗೂ ಸಂತೋಷ್‌ ಅವರಿಗೆ ನೋಟಿಸ್‌ ನೀಡಿದೆ. 11ನೇ ಜನವರಿ, 2021ಕ್ಕೆ ಪ್ರಕರಣದ ವಿಚಾರಣೆ ಮುಂದೂಡಲ್ಪಟ್ಟಿದೆ.

ರಾಜಕೀಯ ಕಾರ್ಯದರ್ಶಿ ಹುದ್ದೆಯನ್ನು ಯಾವ ನಿಯಮಾವಳಿ, ಅಧಿಕಾರದಡಿ ಸೃಜಿಸಲಾಗಿದೆ ಎನ್ನುವ ಬಗ್ಗೆ ಮಾಹಿತಿ ಪಡೆದ ನಂತರ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರ ನೇತೃತ್ವದ ವಿಭಾಗೀಯ ಪೀಠವು ನೋಟಿಸ್‌ ಜಾರಿಗೊಳಿಸಿತು.

ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾದ ಸಂತೋಷ್‌ ಅವರನ್ನು ಇತ್ತೀಚೆಗೆ ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ನಂತರ ನ.30ರಂದು ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.