Karnataka HC and Justice Suraj Govindaraj 
ಸುದ್ದಿಗಳು

ಬೆಂಗಳೂರಿನ ಪೀಣ್ಯದಲ್ಲಿ ಅಕ್ರಮವಾಗಿ ನಿರ್ಮಿಸಿರುವ 15 ಮಹಡಿಯ ಅಪಾರ್ಟ್‌ಮೆಂಟ್‌ ಕೆಡವಲು ಆದೇಶಿಸಿದ ಹೈಕೋರ್ಟ್‌

ಅಕ್ರಮವಾಗಿ ಕಟ್ಟಿರುವ ಕಟ್ಟಡದ ಭಾಗವನ್ನು ಉರುಳಿಸಲು ಸಾಧ್ಯವಿಲ್ಲ ಎಂದಾದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಇಡೀ ಅಪಾರ್ಟ್‌ಮೆಂಟ್‌ ಕೆಡವಲು ಯೋಜನೆ ರೂಪಿಸಬೇಕು ಎಂದು ಆದೇಶಿಸಿದ ಪೀಠ.

Bar & Bench

ಅಪಾರ್ಟ್‌ಮೆಂಟ್‌ನಲ್ಲಿ ನಿರ್ಮಿಸಿರುವ ಅಕ್ರಮ ಭಾಗವನ್ನು ತೆರವು ಮಾಡಲು ಅಸಾಧ್ಯ ಎಂದು ಡೆವಲಪರ್‌ ಹೇಳಿದ ಹಿನ್ನೆಲೆಯಲ್ಲಿ 15 ಮಹಡಿಯ ಇಡೀ ಕಟ್ಟಡವನ್ನು ಕೆಡವಿ, ತೆರವು ಮಾಡಲು ಯೋಜನೆ ರೂಪಿಸುವಂತೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಮಹತ್ವದ ನಿರ್ದೇಶನ ನೀಡಿದೆ.

ಬೆಂಗಳೂರಿನ ಪ್ಲಾಟಿನಮ್‌ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿನ ಕೆಲವು ಬ್ಲಾಕ್‌ಗಳಿಗೆ ವಾಸಸ್ಥಾನ ಪ್ರಮಾಣ ಪತ್ರ ವಿತರಿಸಲು ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ಕೋರಿ ಷರೀಪ್‌ ಕನ್‌ಸ್ಟ್ರಕ್ಷನ್‌ 2013ರಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಬೆಂಗಳೂರಿನ ಪೀಣ್ಯದ ಪ್ಲಾಟಿನಮ್‌ ಸಿಟಿ ಹೆಸರಿನ 15 ಮಹಡಿಯ ಅಪಾರ್ಟ್‌ಮೆಂಟ್‌ನ ಎ ವಿಂಗ್‌/ಬ್ಲಾಕ್‌ ತೆರವು ಮತ್ತು ಕೆಡವಲು ಡಿಸೆಂಬರ್‌ 11ರೊಳಗೆ ಯೋಜನೆ ರೂಪಿಸಲು ಬಿಡಿಎಗೆ ನ್ಯಾಯಾಲಯ ಕಾಲಾವಕಾಶ ನೀಡಿದೆ.  

“ಇಡೀ ಕಟ್ಟಡವನ್ನು ಹೊಡೆದುರುಳಿಸಿ ಅದನ್ನು ತೆರವು ಮಾಡುವುದಕ್ಕೆ ಸಂಬಂಧಿಸಿದಂತೆ ಬಿಡಿಎ ಆಯುಕ್ತರು ಯೋಜನೆ ರೂಪಿಸಬೇಕು. ಇದನ್ನು ಅನ್ವಯವಾಗುವ ಕಟ್ಟಡ ಬೈಲಾಗಳ ಪ್ರಕಾರ ನಡೆಸಬೇಕು” ಎಂದು ನ್ಯಾಯಾಲಯ ಹೇಳಿದೆ.

ಅಭಿವೃದ್ಧಿ ನಿಯಮಗಳನ್ನು ಉಲ್ಲಂಘಿಸಿ ಮತ್ತು ಅನುಮತಿ ಯೋಜನೆಗೆ ವಿರುದ್ಧವಾಗಿ ಕಟ್ಟಡ ನಿರ್ಮಿಸಿರುವುದನ್ನು ತೆರವುಗೊಳಿಸುವಂತೆ ಕಾಲಕಾಲಕ್ಕೆ ಮಾಡಿರುವ ಆದೇಶ ಪಾಲಿಸಲು ಹಲವು ಬಾರಿ ನಿರ್ದೇಶಿಸಿದ್ದರೂ ಅವುಗಳನ್ನು ಷರೀಫ್‌ ಕನ್‌ಸ್ಟ್ರಕ್ಷನ್‌ ಪಾಲಿಸಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

“ಅರ್ಜಿದಾರರು ಮಂಜೂರಾತಿ ಯೋಜನೆ ಉಲ್ಲಂಘಿಸಿ ಕಟ್ಟಡ ನಿರ್ಮಿಸಿ, ಆನಂತರ ಅದನ್ನು ಕೆಡವುದಾಗಿ ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಈಗ ಕಟ್ಟಡ ಕೆಡವಿದರೆ ರಚನೆಯ ಅಸ್ಥಿರತೆ (ಸ್ಟ್ರಕ್ಚರಲ್‌ ಇನ್‌ಸ್ಟ್ಯಾಬಿಲಿಟಿ) ಉಂಟಾಗಲಿದೆ ಎಂಬ ಸಬೂಬು ನೀಡಿದ್ದಾರೆ. ಇಡೀ ಕಟ್ಟಡವನ್ನೇ ತೆರವು ಮಾಡುವ ಪರಿಸ್ಥಿತಿ ಇದ್ದಾಗಿಯೂ ಕಟ್ಟಡ ಮೇಲಂತಸ್ತುಗಳನ್ನು ತೆರವು ಮಾಡಿ ಉಳಿದ ಮಹಡಿಗಳನ್ನು ಉಳಿಸಿಕೊಳ್ಳಲು ಅನುಮತಿಸಲಾಗಿತ್ತು. ರಚನೆಯಲ್ಲಿ ಅಸ್ಥಿರತೆ ಉಂಟಾಗುವುದರಿಂದ ಕಟ್ಟಡದ ಮೇಲ್ಭಾಗದ ಭಾಗಶಃ ತೆರವು ಅಸಾಧ್ಯ ಎಂದು ಅರ್ಜಿದಾರರು ಹೇಳಿದ್ದಾರೆ. ಇದರಿಂದ ಸ್ಪಷ್ಟವಾಗುವುದೇನೆಂದರೆ ಭಾಗಶಃ ತೆರವು ಮಾಡಿದರೂ ಉಳಿದ ಭಾಗವನ್ನು ಉಳಿಸಿಕೊಳ್ಳುವುದು ಅಸಾಧ್ಯವಾಗಿದೆ. ಹೀಗಾಗಿ, ಇಡೀ ಕಟ್ಟಡವನ್ನು ಕೆಡವಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ ಖರೀದಿಸಿದ್ದವರಿಗೆ ಉಂಟಾಗುವ ನಷ್ಟವನ್ನು ಅರ್ಜಿದಾರರು ತುಂಬಿಕೊಡಬೇಕು. ಅಪಾರ್ಟ್‌ಮೆಂಟ್‌ ಕೆಡವುವ ದಿನಕ್ಕೆ ಅದರ ಬೆಲೆ ಆಧರಿಸಿ ಗ್ರಾಹಕರಿಗೆ ಪರಿಹಾರ ನೀಡಬೇಕು ಎಂದು ನ್ಯಾಯಾಲಯವು ಅರ್ಜಿದಾರರಿಗೆ ಆದೇಶಿಸಿದೆ.

2013 ಮತ್ತು 2024ರ ವಿಚಾರಣೆಯ ಸಂದರ್ಭದಲ್ಲಿ ಪೀಠವು 1990ರಲ್ಲಿ ಅಭಿವೃದ್ಧಿ ಯೋಜನೆಗೆ ಒಪ್ಪಿಗೆ ನೀಡಿದ್ದರೂ ಕಟ್ಟಡ ಯೋಜನೆಗೆ ಒಪ್ಪಿಗೆ ನೀಡಿರಲಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ. ಹೀಗಾಗಿ, ಬಿಡಿಎ ಬೈಲಾ ಪ್ರಕಾರ ಪರಿಷ್ಕೃತ ಅಭಿವೃದ್ಧಿ ಮತ್ತು ಕಟ್ಟಡ ಯೋಜನೆ ಸಲ್ಲಿಸುವಂತೆ ಷರೀಫ್‌ ಕನ್ಸ್ಟ್ರಕ್ಷನ್‌ಗೆ ನ್ಯಾಯಾಲಯ ಆದೇಶಿಸಿತ್ತು.

ಈ ನೆಲೆಯಲಿ ಅಪಾರ್ಟ್‌ಮೆಂಟ್‌ ಅಕ್ರಮ ಭಾಗ ತೆರವುಗೊಳಿಸುವಂತೆ ಡೆವಲಪರ್‌ಗೆ ನ್ಯಾಯಾಲಯ ನಿರ್ದೇಶಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಅಫಿಡವಿಟ್‌ ಸಲ್ಲಿಸಿದ್ದ ಷರೀಫ್‌ ಕನ್‌ಸ್ಟ್ರಕ್ಷನ್ಸ್, ಮಂಜೂರಾತಿ ಯೋಜನೆಯ ಅನುಮತಿಯಿಲ್ಲದೇ ನಿರ್ಮಿಸಲಾಗಿರುವ ಅಪಾರ್ಟ್‌ಮೆಂಟ್‌ ಮೇಲ್ತುದಿಯ ಮಹಡಿಗಳನ್ನು ತೆರವುಗೊಳಿಸಿದರೆ ಇಡೀ ಕಟ್ಟಡದ ರಚನೆಗೆ ಆತಂಕ ಎದುರಾಗಲಿದೆ ಎಂದಿತ್ತು. ಈ ನೆಲೆಯಲ್ಲಿ ಇಡೀ ಕಟ್ಟಡ ತೆರವುಗೊಳಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ವಿಚಾರಣೆಯನ್ನು ಡಿಸೆಂಬರ್‌ 11ಕ್ಕೆ ಮುಂದೂಡಿದೆ.