ನಗರ ಪ್ರದೇಶಗಳಲ್ಲಿ ಸಮೀಪದ ರೆಸ್ಟೋರೆಂಟ್‌ಗಳಿಂದ ತಿಂಡಿ, ತಿನಿಸು, ಊಟವನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸೇವೆ ಒದಗಿಸುವ ಸ್ವಿಗ್ಗಿ ಅಪ್ಲಿಕೇಶನ್ ಬ್ರ್ಯಾಂಡ್‌ನ ಮಾತೃಸಂಸ್ಥೆ ಬಂಡ್ಲ್ ಟೆಕ್ನಾಲಜೀಸ್ ಪ್ರೈ. ಲಿ ನಿಂದ ಕಾನೂನುಬಾಹಿರವಾಗಿ ಸ್ವೀಕರಿಸಿರುವ ₹27.4 ಕೋಟಿಯನ್ನು ಮರಳಿಸುವಂತೆ ಕಂದಾಯ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ (ಭಾರತ ಸರ್ಕಾರ ಮತ್ತು ಇತರರು ವರ್ಸಸ್ ಬುಂಡ್ಲ್ ಟೆಕ್ನಾಲೀಜಿಸ್ ಪ್ರೈ.ಲಿ. ಅಂಡ್ ಅದರ್ಸ್).
ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿರುವ ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ಎಂ ಜಿ ಸಿ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ಅಕ್ರಮವಾಗಿ ಪಡೆದಿರುವ ಜಿಎಸ್‌ಟಿ ತೆರಿಗೆಯನ್ನು ವಾಪಸ್ ಮಾಡುವಂತೆ ಸರ್ಕಾರಕ್ಕೆ ಆದೇಶಿಸಿದೆ.
“ಕಾನೂನುಬಾಹಿರವಾಗಿ ತೆರಿಗೆ ಸಂಗ್ರಹಿಸಿದರೆ ಯಾವುದೇ ಅಧಿಕಾರವಿಲ್ಲದೆ ವ್ಯಕ್ತಿಯ ಆಸ್ತಿಯನ್ನು ಕಸಿದುಕೊಂಡಂತಾಗುತ್ತದೆ. ಇದು ಭಾರತದ ಸಂವಿಧಾನದ 300ಎ ವಿಧಿಯ ಅಡಿಯಲ್ಲಿ ವ್ಯಕ್ತಿಯ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಈಗ ಠೇವಣಿ ಇಟ್ಟಿರುವ ಹಣವನ್ನು ತನಿಖೆಯ ಅಂತಿಮ ಫಲಿತಾಂಶಕ್ಕೆ ಒಳಪಡಿಸಬೇಕು ಎಂಬ ಕೇಂದ್ರ ಸರ್ಕಾರದ ಕೋರಿಕೆಯನ್ನು ಒಪ್ಪಲಾಗದು. ಹೀಗಾಗಿ, ಇಲಾಖೆಯು ಸ್ವಿಗ್ಗಿಗೆ ಹಣ ಮರಳಿಸಬೇಕು” ಎಂದು ಪೀಠವು ತೀರ್ಪಿನಲ್ಲಿ ಹೇಳಿದೆ.
ಸ್ವಿಗ್ಗಿ ಜೊತೆ ನೇರವಾಗಿ ಭಾಗಿಯಾಗಿರುವ ಪಿಕ್ ಅಪ್ ಅಂಡ್ ಡಿಲೆವರಿ ಪಾರ್ಟನರ್ (ಪಿಡಿಪಿ) ಅವರು ಆಹಾರ ಪದಾರ್ಥಗಳನ್ನು ಪೂರೈಸುತ್ತಿದ್ದಾರೆ. ಶೇ. 90ರಷ್ಟು ಸೇವೆಗಳನ್ನು ಪಿಡಿಪಿ ಮಾಡುತ್ತದೆ. ಸ್ವಿಗ್ಗಿಯು ತಾತ್ಕಾಲಿಕ ಡಿಲೆವರಿ ಎಕ್ಸಿಕ್ಯುಟಿವ್‌ಗಳನ್ನು (ಟೆಂಪ್ ಡಿಇ) ಮೂರನೆಯ (ಥರ್ಡ್ ಪಾರ್ಟಿ) ಸೇವಾ ನೀಡುವವರನ್ನಾಗಿ ಪರಿಗಣಿಸಿ ಅವರ ಸೇವೆ ಪಡೆಯುತ್ತಿದೆ. ರಜಾದಿನಗಳು, ವಾರಂತ್ಯ ಇತ್ಯಾದಿ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿದ್ದಾಗ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ತಲುಪಿಸಲು ತಾತ್ಕಾಲಿಕ ಡಿಲೆವರಿ ಎಕ್ಸಿಕ್ಯುಟಿವ್‌ಗಳ ಸೇವೆ ಪಡೆಯಲಾಗುತ್ತದೆ.
ಪಿಡಿಪಿ ಸೇವೆಗೆ ಯಾವುದೇ ಸರಕು ಮತ್ತು ಸೇವಾ ತೆರಿಗೆ ವಿಧಿಸಲಾಗುವುದಿಲ್ಲ. ನೋಂದಣಿ ಮಿತಿಗಿಂತ ಕೆಳಗಿರುವುದರಿಂದ ಅವರಿಗೆ ಜಿಎಸ್‌ಟಿ ಇರುವುದಿಲ್ಲ. ಆದರೆ, ತಾತ್ಕಾಲಿಕ ಡಿಲೆವರಿ ಎಕ್ಸಿಕ್ಯುಟಿವ್‌ಗಳಿಗೆ ಪಾವತಿಸುವ ಹಣಕ್ಕೆ ಶೇ. 5.5-10ರಷ್ಟು ಜಿಎಸ್‌ಟಿಯನ್ನಾಗಿ ಈ ಸೇವೆ ಕಲ್ಪಿಸುವ ಸಂಸ್ಥೆ ಶುಲ್ಕ ವಿಧಿಸುತ್ತದೆ.
ಈ ಸಂಬಂಧ 2017ರಲ್ಲಿ ಗ್ರೀನ್ ಫಿಂಚ್ ಟೀಮ್ ಮ್ಯಾನೇಜ್‌ಮೆಂಟ್ ಪ್ರೈ. ಲಿ. ಜೊತೆ ಮೂರನೇ ವ್ಯಕ್ತಿ ಒಪ್ಪಂದಕ್ಕೆ ಸ್ವಿಗ್ಗಿ ಸಹಿ ಹಾಕಿದೆ. ತಾತ್ಕಾಲಿಕ ಡೆಲಿವರಿ ಎಕ್ಸಿಕ್ಯುಟಿವ್‌ಗಳ ಸೇವೆಯನ್ನು ಆಹಾರ ಪದಾರ್ಥವನ್ನು ಗ್ರಾಹಕರಿಗೆ ಪೂರೈಸಲು ನೀಡಿ ಅದಕ್ಕೆ ಜಿಎಸ್‌ಟಿ ಶುಲ್ಕ ಸೇರಿಸಿ ಗ್ರೀನ್ ಫಿಂಚ್ ತನ್ನ ಮೊತ್ತ ಪಡೆಯಿತಿತ್ತು. ತನಿಖೆಗೆ ಒಳಪಟ್ಟಿರುವ 2017-20ರ ಅವಧಿಯಲ್ಲಿ ಗ್ರೀನ್ ಫಿಂಚ್ 10,31,464 ತಾತ್ಕಾಲಿಕ ಡೆಲಿವರಿ ಎಕ್ಸಿಕ್ಯುಟಿಗಳ ಸೇವೆ ನೀಡಿದ್ದು, ಅವರು 2,91,75,667 ಆಹಾರ ಪದಾರ್ಥವನ್ನು ಗ್ರಾಹಕರಿಗೆ ಪೂರೈಸಿದ್ದಾರೆ. ಇದಕ್ಕೆ ಸ್ವಿಗ್ಗಿಗೆ ಗ್ರೀನ್ ಫಿಂಚ್ ತೆರಿಗೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಜಿಎಸ್‌ಟಿ ಕಾಯಿದೆಯ ಸೆಕ್ಷನ್ 16ರ ಅಡಿ ಸ್ವಿಗ್ಗಿಯು ಇನ್‌ಪುಟ್ ತೆರಿಗೆ ಕ್ರೆಡಿಟ್ ಪಡೆದುಕೊಂಡಿತ್ತು.
ಇಲ್ಲಿ ಗ್ರೀನ್ ಫಿಂಚ್ ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಯಾಗಿದ್ದು, ಸ್ವಿಗ್ಗಿಯು ಗ್ರೀನ್ ಫಿಂಚ್‌ಗೆ ಪಾವತಿಸಿರುವ ಜಿಎಸ್‌ಟಿಯನ್ನು ಮುಂದು ಮಾಡಿ ಇನ್‌ಪುಟ್ ತೆರಿಗೆ ಕ್ರೆಡಿಟ್ ಲಾಭ ಪಡೆಯುವ ಮೂಲಕ ಅಕ್ರಮ ಎಸಗಿದೆ ಎಂದು ಜಿಎಸ್‌ಟಿ ವಿಚಕ್ಷಣಾ ಹೈದರಾಬಾದ್ ವಲಯ ಘಟಕದ ಮಹಾ ನಿರ್ದೇಶಕರು ತನಿಖೆ ಆರಂಭಿಸಿದ್ದರು. 2019ರ ನವೆಂಬರ್ 28ರಂದು ಬೆಳಿಗ್ಗೆ ಸ್ವಿಗ್ಗಿ ಕಚೇರಿ ಪ್ರವೇಶಿಸಿದ ಡಿಜಿಜಿಐ ಅಧಿಕಾರಿಗಳು ಮಾರನೇಯ ದಿನದವರೆಗೆ ತನಿಖೆ ನಡೆಸಿದ್ದರು. ಸ್ವಿಗ್ಗಿ ನಿರ್ದೇಶಕರು ಮತ್ತು ಸಿಬ್ಬಂದಿಗೆ ಸ್ಥಳದಲ್ಲೇ ಸಮನ್ಸ್ ಜಾರಿ ಮಾಡಿ ಅವರ ಹೇಳಿಕೆ ದಾಖಲಿಸಿಕೊಂಡಿದ್ದರು. ಈ ವೇಳೆ ಸ್ವಿಗ್ಗಿಯು ಜಿಎಸ್‌ಟಿ ನಗದು ಲೆಡ್ಜರ್ ವಿಭಾಗದಲ್ಲಿ ₹15 ಕೋಟಿ ಠೇವಣಿ ಇಟ್ಟಿತ್ತು.
ಮತ್ತೆ ಸ್ವಿಗ್ಗಿ ನಿರ್ದೇಶಕರಿಗೆ ಸಮನ್ಸ್ ಜಾರಿ ಮಾಡಿದ್ದ ಇಲಾಖೆಯು ಅವರನ್ನು ಬಿಡುಗಡೆ ಮಾಡಲು ಹೆಚ್ಚಿನ ಹಣವನ್ನು ತೆರಿಗೆ ರೂಪದಲ್ಲಿ ಠೇವಣಿ ಇಡಬೇಕು ಎಂದು ಬೇಡಿಕೆ ಇಟ್ಟಿದ್ದರು. ತಡರಾತ್ರಿಯಲ್ಲಿ ವಿಚಾರಣೆಯ ಹಂತದಲ್ಲಿ ಒಟ್ಟು ₹27,51,44,157 ಕೋಟಿಯನ್ನು ತನಿಖಾ ಸಂಸ್ಥೆಯು ಕಾನೂನುಬಾಹಿರವಾಗಿ ಪಡೆದುಕೊಂಡಿದೆ ಎಂದು ಸ್ವಿಗ್ಗಿ ಆಕ್ಷೇಪಿಸಿತ್ತು.
ಈ ಸಂಬಂಧ ವ್ಯಾಪ್ತಿ ಹೊಂದಿರುವ ಜಿಎಸ್‌ಟಿ ಕಚೇರಿಯಲ್ಲಿ ಸ್ವಿಗ್ಗಿ ಮನವಿ ಸಲ್ಲಿಸಿದ್ದು, ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ, ₹27,51,44,157 ಹಣ ಮತ್ತು ಅದಕ್ಕೆ ಶೇ. 12ರಷ್ಟು ಬಡ್ಡಿ ಸೇರಿಸಿ ಹಣ ಪಾವತಿಸಲು ಡಿಜಿಜಿಐಗೆ ಆದೇಶಿಸಬೇಕು. ಸಂವಿಧಾನದ 14 ಮತ್ತು 19(1)(ಜಿ) ಮತ್ತು 300ಎ ಅನ್ನು ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ ಸೆಕ್ಷನ್ 16(2)(ಸಿ) (ಇನ್‌ಪುಟ್ ತೆರಿಗೆ ಕ್ರೆಡಿಟ್ ಪಡೆಯಲು ಅರ್ಹತೆ ಮತ್ತು ಷರತ್ತುಗಳು) ಮತ್ತು ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ಕಾಯಿದೆ 2017 ಉಲ್ಲಂಘಿಸುತ್ತಿರುವುದರಿಂದ ಅವುಗಳನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಸ್ವಿಗ್ಗಿ ಕೋರಿತ್ತು.
ಈ ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು “ತನಿಖೆಯ ಹಂತದಲ್ಲಿ ಸ್ವಿಗ್ಗಿ ಪಾವತಿಸಿರುವ ತೆರಿಗೆ ಹಣವು ಸ್ವಯಂಪ್ರೇರಿತವಾಗಿರುವುದಿಲ್ಲ. ಇಲಾಖಾ ತನಿಖೆಗೆ ನ್ಯಾಯಾಲಯ ಯಾವುದೇ ಸಮಸ್ಯೆ ಮಾಡುವುದಿಲ್ಲ. ತನಿಖಾ ಪ್ರಕ್ರಿಯೆ ಭಾಗವಾಗಿ ತೆರಿಗೆ ವಾಪಸಾತಿ ಕೇಳುವ ಹಕ್ಕು ಅರ್ಜಿದಾರರಿಗೆ ಇರುತ್ತದೆ. ಇಲ್ಲಿ ಎರಡನ್ನು ಜೋಡಿಸುವ ಅಗತ್ಯವಿಲ್ಲ. ಹೀಗಾಗಿ, ಸ್ವಿಗ್ಗಿಗೆ ಹಣ ಹಿಂದಿರುಗಿಸುವುದನ್ನು ಪರಿಗಣಿಸಿ, ನಾಲ್ಕು ವಾರಗಳಲ್ಲಿ ಆದೇಶ ಮಾಡಬೇಕು” ಎಂದು ಇಲಾಖೆಗೆ ಆದೇಶ ಮಾಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಭಾಗೀಯ ಪೀಠವು ವಜಾ ಮಾಡಿದೆ.