ಜೆಕೆ ಟೆಕ್ನೋಸಾಫ್ಟ್ ಲಿಮಿಟೆಡ್ ಮತ್ತು ಯುನಿಕುಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ನಡುವಣ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಗಾರರನ್ನು ನೇಮಿಸಿ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ [ಜೆಕೆ ಟೆಕ್ನೋಸಾಫ್ಟ್ ಲಿಮಿಟೆಡ್ ಮತ್ತು ಯುನಿಕುಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ].
ಯುನಿಕುಲ್ ಮೂಲ ದಾಖಲೆಗಳನ್ನು ಒದಗಿಸಿದ್ದಾಗ ಮಾತ್ರ ತಾನು ಅವಲಂಬಿಸಿರುವ ದಾಖಲೆಗಳನ್ನು ಅದು ಸ್ವಾಧೀನಪಡಿಸಿಕೊಳ್ಳುವ ಪ್ರಶ್ನೆ ಉದ್ಭವಿಸುತ್ತದೆ ಎಂಬ ಜೆಕೆ ಟೆಕ್ನೋಸಾಫ್ಟ್ ವಾದಕ್ಕೆ ನ್ಯಾಯಮೂರ್ತಿ ಆರ್ ದೇವದಾಸ್ ಸಮ್ಮತಿ ಸೂಚಿಸಿದರು.
ಈ ಎರಡೂ ಕಂಪೆನಿಗಳು 2016 ಮತ್ತು 2020ರಲ್ಲಿ ಸೇವಾ ಒಪ್ಪಂದ ಮಾಡಿಕೊಂಡಿದ್ದವು. ಆದರೂ ಯುನಿಕುಲ್ ಬಾಕಿ ಮೊತ್ತ ಪಾವತಿಸಲು ವಿಫಲವಾದ್ದರಿಂದ ಜೆ ಕೆ ಟೆಕ್ನೋಸಾಫ್ಟ್ ಸೇವಾ ಒಪ್ಪಂದದಲ್ಲಿ ಮಧ್ಯಸ್ಥಿಕೆ ಷರತ್ತನ್ನು ಅನ್ವಯಿಸಿತು. ಜೊತೆಗೆ ಸಂಭಾವ್ಯ ಮಧ್ಯಸ್ಥಗಾರರಾಗಿ ಮೂವರು ವಕೀಲರನ್ನು ನಾಮನಿರ್ದೇಶನ ಮಾಡಿತು. ನಂತರ ಯುನಿಕುಲ್‌ಗೆ ನೋಟಿಸ್ ನೀಡಿದ ಅವರು ಮಧ್ಯಸ್ಥಗಾರರೊಬ್ಬರನ್ನು ನೇಮಿಸುವಂತೆ ಮನವಿ ಮಾಡಿದ್ದರು. ಯುನಿಕುಲ್ ಮಧ್ಯಸ್ಥಿಕೆಗೆ ಒಪ್ಪದ ಕಾರಣ ಜೆಕೆ ಟೆಕ್ನೊಸಾಫ್ಟ್ ಹೈಕೋರ್ಟ್ ಮೊರೆ ಹೋಯಿತು.
ಸೇವಾ ಒಪ್ಪಂದಕ್ಕೆ ಯುನಿಕುಲ್ ಸಹಿ ಮಡಿರಲಿಲ್ಲ ಎಂದು ನ್ಯಾಯಾಲಯ ಹೇಳಿದ್ದು ಅವು ಮೂಲವೇ ಅಥವಾ ಇಲ್ಲವೇ ಎಂಬದು ಸ್ಪಷ್ಟವಾಗಿಲ್ಲ ಎಂದು ತಿಳಿಸಿತು.
ಎನ್ ಎನ್ ಗ್ಲೋಬಲ್ ಮರ್ಸೆಂಟೈಲ್ ಪ್ರೈವೇಟ್ ಲಿಮಿಟೆಡ್ ಮತ್ತು ಇಂಡೋ ಯೂನಿಕ್ ಫ್ಲೇಮ್ ಲಿಮಿಟೆಡ್ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಆಧಾರದಲ್ಲಿ ಸೇವಾ ಒಪ್ಪಂದಕ್ಕೆ ಸೂಕ್ತ ಅಂಕಿತ ದೊರೆತಿದೆಯೇ ಎಂಬುದನ್ನು ಪರಿಶೀಲಿಸಲು ನ್ಯಾಯಾಲಯ ಮುಂದಾಯಿತು.
ಸ್ಟಾಂಪ್ ಪೇಪರ್ ಮೂಲಕ ಒಪ್ಪಂದ ಮಾಡಿಕೊಂಡಿಲ್ಲ ಎಂಬುದನ್ನು ಜೆಕೆ ಟೆಕ್ನೊ ಸಾಫ್ಟ್ ಪರ ವಕೀಲರು ಒಪ್ಪಿಕೊಂಡರು. ಆದರೂ ಒಪ್ಪಂದಕ್ಕೆ ಪ್ರತಿವಾದಿ ಸಹಿ ಮಾಡದ ಕಾರಣ ಇದು ಮುದ್ರಾಂಕ ಶುಲ್ಕ ಬಯಸುವ ಅಂಶ ಎಂದು ಅರ್ಥೈಸಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು.
ಕಕ್ಷಿದಾರರು ಒಪ್ಪಂದಕ್ಕೆ ಸಹಿ ಮಾಡದಿದ್ದರೂ, ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಅದನ್ನು ಒಪ್ಪಂದ ಎಂದು ಅರ್ಥೈಸಿಕೊಳ್ಳಬಹುದು ಎಂದು ಅವರು ವಾದಿಸಿದರು.
ವಕೀಲರ ಎರಡನೇ ವಾದಕ್ಕೆ ಸಮ್ಮತಿ ಸೂಚಿಸಿದ ನ್ಯಾಯಾಲಯ, ಲಿಖಿತವಾಗಿರುವ ಆದರೆ ಸಹಿ ಮಾಡದ ದಾಖಲೆಯನ್ನು ಒಪ್ಪಂದವಾಗಿ ಸ್ವೀಕರಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ಸ್ಪಷ್ಟಪಡಿಸಿರುವುದಾಗಿ ತಿಳಿಸಿದೆ.
ಆದರೂ, ಅಂತಹ ದಾಖಲೆಗಳು ಮುದ್ರಾಂಕ ಕಾಯಿದೆಯ ನಿಯಮಾವಳಿಗಳ ಅಡಿಯಲ್ಲಿ ಮುದ್ರಾಂಕ ಶುಲ್ಕ ಆಕರ್ಷಿಸುವಲ್ಲೆಲ್ಲಾ, ಮುದ್ರಾಂಕ ಕಾಯಿದೆಯ ಮುದ್ರಾಂಕ ಮಾಡದ ದಾಖಲೆಗಳ ಸ್ವೀಕಾರಾರ್ಹತೆ ಮತ್ತು ಸ್ವಾಧೀನತೆಗೆ ಸಂಬಂಧಿಸಿದಂತೆ ಸೆಕ್ಷನ್ 33 ಮತ್ತು 35ರ ನಿಯಮಾವಳಿಗಳಿಗೆ ಒಳಪಡುತ್ತವೆ ಎಂದು ನ್ಯಾಯಾಲಯ ಹೇಳಿದೆ.
ದಾಖಲಾತಿಗಳು ಮೂಲವಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ ಜೆಕೆ ಟೆಕ್ನೋಸಾಫ್ಟ್ ಪರ ವಕೀಲರು ತಾನು ಮೂಲ ದಾಖಲೆಗಾಗಿ ಅರ್ಜಿ ಸಲ್ಲಿಸಿರುವುದಾಗಿ ಮಾಹಿತಿ ನೀಡಿದರು.
ಎರಡು ದಾಖಲೆಗಳು ಕೇವಲ ಛಾಯಾಪ್ರತಿಗಳಾಗಿರುವುದರಿಂದ ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸದು ಎಂದು ಅವರು ಪ್ರತಿಪಾದಿಸಿದರು. ಆದ್ದರಿಂದ ಪ್ರಕರಣವನ್ನು ಮಧ್ಯಸ್ಥಿಕೆಗೆ ಒಪ್ಪಿಸಬೇಕು ಎಂದು ಮನವಿ ಮಾಡಿದರು.
ಇದನ್ನು ಪುರಸ್ಕರಿಸಿದ ನ್ಯಾಯಾಲಯ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಚ್ ಎಂ ನಂಜುಂಡಸ್ವಾಮಿ ಅವರನ್ನು ಏಕೈಕ ಮಧ್ಯಸ್ಥಗಾರರನ್ನಾಗಿ ನೇಮಿಸಿ ಆದೇಶ ಹೊರಡಿಸಿತು. ಜೆಕೆ ಟೆಕ್ನೋಸಾಫ್ಟ್ ಪರವಾಗಿ ವಕೀಲರಾದ ಅನಿರುದ್ಧ್ ಸುರೇಶ್ ಮತ್ತು ಜಿ ಆಯುಷ್ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]