BMRCL and Karnataka HC

 
ಸುದ್ದಿಗಳು

ನಮ್ಮ ಮೆಟ್ರೊ ರೈಲು ಹಳಿ ನಿರ್ಮಾಣ: 138 ಮರ ಕತ್ತರಿಸಲು ಬಿಎಂಆರ್‌ಸಿಎಲ್‌ಗೆ ಅನುಮತಿಸಿದ ಹೈಕೋರ್ಟ್‌

ಬೆಂಗಳೂರಿನಲ್ಲಿ ನಮ್ಮ ಮೆಟ್ರೊ ರೈಲು ಹಳಿ ನಿರ್ಮಾಣಕ್ಕೆ ಅಡ್ಡಿಯಾಗಿರುವ 138 ಮರಗಳನ್ನು ಕತ್ತರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ ಹೈಕೋರ್ಟ್‌ ಅನುಮತಿಸಿದ್ದು, 84 ಮರಗಳನ್ನು ಸ್ಥಳಾಂತರಿಸಲು ಆದೇಶಿಸಿದೆ.

Bar & Bench

ಬೆಂಗಳೂರಿನಲ್ಲಿ ನಮ್ಮ ಮೆಟ್ರೊ ರೈಲು ಹಳಿ ನಿರ್ಮಾಣಕ್ಕೆ ಅಡ್ಡಿಯಾಗಿರುವ 138 ಮರಗಳನ್ನು ಕತ್ತರಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ ಬುಧವಾರ ಅನುಮತಿಸಿರುವ ಕರ್ನಾಟಕ ಹೈಕೋರ್ಟ್‌, 84 ಮರಗಳನ್ನು ಸ್ಥಳಾಂತರಿಸಲು ಅಸ್ತು ಎಂದಿದೆ.

ಮರಗಳನ್ನು ಕಡಿಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬೆಂಗಳೂರು ಪರಿಸರ ಟ್ರಸ್ಟ್ ಮತ್ತು ಪರಿಸರವಾದಿ ಟಿ ದತ್ತಾತ್ರೇಯ ದೇವರೆ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್ ನೇತೃತ್ವದ ವಿಭಾಗೀಯ ನಡೆಸಿತು.

“ತಜ್ಞರ ಸಮಿತಿಯ ಶಿಫಾರಸ್ಸುಗಳನ್ನು ಅನುಸರಿಸಬೇಕು. ಗಿಡ ನೆಡುವುದು ಮತ್ತು ಪರಿಸರದ ಮೇಲಿನ ಪರಿಣಾಮದ ಕುರಿತು ಸ್ಥಿತಿಗತಿ ವರದಿ ಸಲ್ಲಿಸಬೇಕು” ಎಂಬ ಷರತ್ತನ್ನು ಬಿಎಂಆರ್‌ಸಿಎಲ್‌ಗೆ ಪೀಠವು ವಿಧಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಪ್ರದೀಪ್‌ ನಾಯಕ್‌ ಅವರು ”ಮರಗಳನ್ನು ಕಡಿಯುವುದರಿಂದ ಆಗುವ ದುಷ್ಪರಿಣಾಮ ಮತ್ತು ಹೊಸ ಗಿಡಗಳನ್ನು ನೆಡುವುದರ ಕುರಿತು ತಜ್ಞರ ಸಮಿತಿಯು ವರದಿ ಸಲ್ಲಿಸಬೇಕಿತ್ತು. ಆದರೆ, ಅದನ್ನು ಮಾಡಲಾಗಿಲ್ಲ. 2019ರಲ್ಲಿ ಸಿದ್ಧಪಡಿಸಿದ್ದ ಪರಿಸರದ ಮೇಲಿನ ಪರಿಣಾಮ ವಿಶ್ಲೇಷಣಾ ವರದಿಯನ್ನು ಸಮಿತಿ ಸಲ್ಲಿಸಿದೆ” ಎಂದರು.

ಬಿಎಂಆರ್‌ಸಿಎಲ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಮರ ಕಡಿದ ಬಳಿಕ ಪರಿಸರದ ಮೇಲಿನ ಪರಿಣಾಮ ವರದಿ ಸಿದ್ಧಪಡಿಸಲು ಎರಡು ವರ್ಷಗಳು ಬೇಕಾಗುತ್ತದೆ. ಹೀಗಾಗಿ, ಹಿಂದಿನ ವರದಿಯನ್ನು ಸಲ್ಲಿಸಲಾಗಿದೆ” ಎಂದರು.

“ಅದಾಗ್ಯೂ, ಹೊಸದಾಗಿ ಪರಿಸರದ ಮೇಲಿನ ಪರಿಣಾಮದ ಕುರಿತು ವಿಶ್ಲೇಷಣಾ ವರದಿ ಸಿದ್ಧಪಡಿಸಲಾಗುವುದು. ಪ್ರಕರಣವು ನ್ಯಾಯಾಲಯದಲ್ಲಿರುವುದರಿಂದ ಮೆಟ್ರೊ ಯೋಜನೆ ತಡವಾಗುತ್ತಿದ್ದು, ವೆಚ್ಚವೂ ಹೆಚ್ಚಾಗುತ್ತಿದೆ” ಎಂದರು.