Karnataka High Court 
ಸುದ್ದಿಗಳು

ಹಿಂದೂ ಜಾಗರಣಾ ವೇದಿಯಿಂದ ಮೈಸೂರಿನಲ್ಲಿ ಇಂದು ಪಂಜಿನ ಮೆರವಣಿಗೆ ನಡೆಸಲು ಹೈಕೋರ್ಟ್‌ ಅನುಮತಿ

ಮೆರವಣಿಗೆ ಸಂದರ್ಭದಲ್ಲಿ ಯಾವುದಾದರೂ ಅಹಿತಕರ ಅಥವಾ ಕಾನೂನುಬಾಹಿರ ಕ್ರಮಗಳು ನಡೆದಾಗ ಆಯೋಜಕರೇ ಜವಾಬ್ದಾರಿಯನ್ನು ಹೊರಬೇಕು ಎಂದ ನ್ಯಾಯಾಲಯ.

Bar & Bench

ಸ್ವಾತಂತ್ರ್ಯ ದಿನದ ನಿಮಿತ್ತ ಆಗಸ್ಟ್ 14ರಂದು (ಇಂದು) ಮೈಸೂರು ನಗರದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಹಮ್ಮಿಕೊಂಡಿರುವ 'ಅಖಂಡ ಭಾರತ ಸಂಕಲ್ಪ ದಿನ'ದ ಹಾಗೂ ಆರ್‌ಎಂಸಿ ಗಣೇಶ ದೇವಾಲಯದಿಂದ ದೊಡ್ಡ ಗಡಿಯಾರ ವೃತ್ತದವರೆಗೂ ನಡೆಯುವ ಪಂಜಿನ ಮೆರವಣಿಗೆ ಹೈಕೋರ್ಟ್‌ ಷರತ್ತಿನ ಅನುಮತಿ ನೀಡಿದೆ.

ಪೊಲೀಸರು ಅನುಮತಿ ನಿರಾಕರಿಸಿರುವುದನ್ನು ಪ್ರಶ್ನಿಸಿ ಕಾರ್ಯಕ್ರಮದ ಆಯೋಜಕರಾದ ಹಿಂದೂ ಜಾಗರಣ ವೇದಿಕೆ ಮೈಸೂರು ನಗರ ಸಂಚಾಲಕ ಎ ವೈ ವಸಂತಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್‌ ಅವರ ಏಕಸದಸ್ಯ ಪೀಠವು ಪುರಸ್ಕರಿಸಿತು.

Justice M Nagaprasanna

ಸಂಜೆ 5.30ರಿಂದ 7. 30ರವರೆಗೂ ಮೆರವಣಿಗೆ ನಡೆಯಬೇಕು. ಈ   ಮೆರವಣಿಗೆಯಲ್ಲಿ 100 ಮಂದಿ ಮಾತ್ರ ಭಾಗಿಯಾಗಬೇಕು. ಪ್ರತಿ ಸಾಲಿನಲ್ಲಿ 5 ಜನ ಮಾತ್ರ ನಡೆಯಬೇಕು. ಮೆರವಣಿಗೆ ಹೋಗುವ ಮಾರ್ಗದಲ್ಲಿ ಯಾವುದೇ ರೀತಿಯ ಸಂಚಾರ ದಟ್ಟಣೆಯಾಗದಂತೆ ನೋಡಿಕೊಳ್ಳಬೇಕು ಎಂದು ಪೀಠ ಹೇಳಿದೆ.

ಅನುಮತಿ ನೀಡಿರುವ 4 ಕಿಲೋ ಮೀಟರ್ ಮಾತ್ರ ಮೆರವಣಿಗೆ ನಡೆಯಬೇಕು. ಅದಕ್ಕಿಂತಲೂ ಹೆಚ್ಚು ದೂರ ನಡೆಯುವುದಕ್ಕೆ ಅವಕಾವಿರುವುದಿಲ್ಲ. ಮೆರವಣಿಗೆ ಸಂದರ್ಭದಲ್ಲಿ ಯಾವುದಾದರೂ ಅಹಿತಕರ ಅಥವಾ ಕಾನೂನುಬಾಹಿರ ಕ್ರಮಗಳು ನಡೆದಾಗ ಆಯೋಜಕರೇ ಜವಾಬ್ದಾರಿಯನ್ನು ಹೊರಬೇಕು ಎಂದು ಪೀಠ ವಿವರಿಸಿದೆ.

ಇದಕ್ಕೂ ಮುನ್ನ, ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಭಾನುಪ್ರಕಾಶ್‌, ನ್ಯಾಯಾಲಯದಿಂದ ಸೂಕ್ತ ಅನುಮತಿ ಪಡೆಯುವುದಕ್ಕೂ ಮುನ್ನ ಹೋರ್ಡಿಂಗ್‌ ಮತ್ತು ಬ್ಯಾನರ್‌ಗಳನ್ನು ಅವಳಡಿಸಿದ್ದು, ಇಂದು ಬೆಳಗ್ಗೆಯವರೆಗೂ ತೆರವು ಮಾಡಿಲ್ಲ. ಮೆರವಣಿಗೆ ನಡೆಸುವುದಕ್ಕೆ ಆಯ್ಕೆ ಮಾಡಿಕೊಂಡಿರುವ ಮಾರ್ಗ ಸೂಕ್ಷ್ಮ ಪ್ರದೇಶವಾಗಿದೆ. ಬೇರೊಂದು ಮಾರ್ಗದಲ್ಲಿ ಮಾಡಬಹುದಾಗಿದೆ. ಜೊತೆಗೆ, ಮೆರವಣಿಗೆಯಲ್ಲಿ ಭಾಗವಹಿಸುವವರು ಸಮಾಜಘಾತುಕ ವ್ಯಕ್ತಿಗಳಾಗಿದ್ದಾರೆ. ಕೆಲವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಆರೋಪ ಪಟ್ಟಿಯೂ ಸಲ್ಲಿಕೆಯಾಗಿದೆ” ಎಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲ ಎಂ ಅರುಣಶ್ಯಾಮ್‌ ಅವರು “ಪಂಜಿನ ಮೆರವಣಿಗೆಗೆ ಅನುಮತಿ ಕೋರಿರುವ ಅರ್ಜಿದಾರರು ಯಾವುದೇ ಹೋರ್ಡಿಂಗ್‌ ಮತ್ತು ಬ್ಯಾನ್‌ ಅಳವಡಿಸಿಲ್ಲ. ಆದರೆ, ಅವರ ಬೆಂಬಲಿಗರು ಈ ಕಾರ್ಯ ಮಾಡಿದ್ದಾರೆ. ಘಟನೆಗೆ ಕ್ಷಮೆ ಕೋರುತ್ತೇನೆ. ಜೊತೆಗೆ ಮೆರವಣಿಗೆ ಮಾಡುವುದು ಸಂವಿಧಾನ ಬದ್ಧವಾದ ಹಕ್ಕಾಗಿದೆ. ಅದಕ್ಕೆ ಸರ್ಕಾರವೇ ರಕ್ಷಣೆ ಮಾಡಬೇಕು.  ಕಾನೂನು ಬಾಃಇರ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬಹುದಾಗಿದೆ” ಎಂದು ಪೀಠಕ್ಕೆ ವಿವರಿಸಿದರು.

ಈ ವೇಳೆ ಪೀಠವು ಅರುಣ ಶ್ಯಾಮ್‌ ಅವರನ್ನು ಕುರಿತು “ನಿಮ್ಮ ಬೆಂಬಲಿಗರ ಮೇಲೆ ನಿಮಗೆ ಹಿಡಿತ ಇಲ್ಲ ಎಂದಾದರೆ ಹೇಗೆ” ಎಂದು ಪ್ರಶ್ನಿಸಿತು.  ಅಲ್ಲದೆ, ಮೆರವಣಿಗೆ ಸಂದರ್ಭದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆದಲ್ಲಿ ನೀವೇ ಜವಾಬ್ದಾರಾಗುಬೇಕು. ಅಲ್ಲದೆ, ಆರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂದ ಮಾತ್ರಕ್ಕೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಬಾರದು ಎಂಬ ನಿಯಮವಿಲ್ಲ ಎಂದು ತಿಳಿಸಿತು. ಅಲ್ಲದೇ, ವೇದಿಕೆ ಕಾರ್ಯಕ್ರಮ ನಡೆಸುವುದಕ್ಕೆ ಸರ್ಕಾರದಿಂದ ಅನುಮತಿ ಪಡೆದಿದ್ದರೆ, ಮುಂದುವರೆಸಬಹುದಾಗಿದೆ ಎಂದು ತಿಳಿಸಿ, ಮೆರವಣಿಗೆಗೆ ಅನುಮತಿ ನೀಡಿ ಆದೇಶಿಸಿತು.