Congress MLA B Nagendra, ED & Karnataka HC 
ಸುದ್ದಿಗಳು

ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ: ಸಚಿವ ನಾಗೇಂದ್ರಗೆ ದೇಶಾದ್ಯಂತ ಪ್ರಯಾಣಿಸಲು ಅನುಮತಿಸಿದ ಹೈಕೋರ್ಟ್‌

ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ರಾಜ್ಯಬಿಟ್ಟು ತೆರಳುವಂತಿಲ್ಲ ಎಂದು ವಿಶೇಷ ನ್ಯಾಯಾಲಯ ವಿಧಿಸಿದ್ದ ಷರತ್ತಿಗೆ ತಡೆ ನೀಡಿದ ಹೈಕೋರ್ಟ್‌.

Bar & Bench

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭವೃದ್ಧಿ ನಿಗಮದ ಕೋಟ್ಯಂತರ ಹಣವನ್ನು ಅಕ್ರಮ ವರ್ಗಾವಣೆ ಮತ್ತು ದುರ್ಬಳಕೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವ ಬಿ ನಾಗೇಂದ್ರ ಅವರಿಗೆ ರಾಜ್ಯದ ಹೊರಗೆ ಪ್ರಯಾಣಿಸಲು ಕರ್ನಾಟಕ ಹೈಕೋರ್ಟ್‌ ಅನುಮತಿಸಿದೆ.

ಪ್ರಕರಣದಲ್ಲಿ ಬಿ ನಾಗೇಂದ್ರ ಅವರಿಗೆ ಜಾಮೀನು ಮಂಜೂರು ಮಾಡಿದ ಸಂದರ್ಭದಲ್ಲಿ ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ರಾಜ್ಯಬಿಟ್ಟು ತೆರಳುವಂತಿಲ್ಲ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತು ವಿಧಿಸಿತ್ತು. ಸದ್ಯ ಸಂಪುಟ ಸಚಿವರಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಅಧಿಕೃತ ಕರ್ತವ್ಯ ನಿರ್ವಹಣೆಗಾಗಿ ರಾಜ್ಯಬಿಟ್ಟು ಹೊರಗಡೆ ಪ್ರಯಾಣಿಸಬೇಕಾಗುತ್ತದೆ. ಹೀಗಾಗಿ, ರಾಜ್ಯಬಿಟ್ಟು ತೆರಳುವಂತಿಲ್ಲ ಎಂಬ ಷರತ್ತು ಸಡಿಲಿಸಬೇಕು. ದೆಹಲಿಗೆ ಪ್ರಯಾಣಿಸಲು ಅನುಮತಿ ನೀಡಬೇಕು ಎಂದು ಕೋರಿ ನಾಗೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ನಾಗೇಂದ್ರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

Justice M Nagaprasanna

ಅರ್ಜಿದಾರರು ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ರಾಜ್ಯಬಿಟ್ಟು ತೆರಳುವಂತಿಲ್ಲ ಎಂದು ವಿಶೇಷ ನ್ಯಾಯಾಲಯ ವಿಧಿಸಿದ್ದ ಷರತ್ತಿಗೆ ತಡೆ ನೀಡಿತು. ನಾಗೇಂದ್ರ ಅವರು ದೇಶದಾದ್ಯಂತ ಮಾತ್ರ ಪ್ರಯಾಣಿಸಬಹುದು. ಆದರೆ, ದೇಶಬಿಟ್ಟು ಹೊರಗಡೆ ಹೊರದೇಶಕ್ಕೆ ಪ್ರಯಾಣಿಸುವಂತಿಲ್ಲ ಎಂದು ಆದೇಶ ಮಾಡಿದೆ. ನಂತರ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ಸೂಚಿಸಿ ವಿಚಾರಣೆಯನ್ನು ಆಗಸ್ಟ್‌ 12ಕ್ಕೆ ಮುಂದೂಡಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ಬಿ ನಾಗೇಂದ್ರ ಅವರು ರಾಜ್ಯ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಸಚಿವರಾಗಿರುವ ಹಿನ್ನೆಲೆಯಲ್ಲಿ ತಮ್ಮ ಅಧಿಕೃತ ಕರ್ತವ್ಯ ನಿರ್ವಹಣೆ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಮೀರಿ ಪ್ರಯಾಣಿಸಬೇಕಾಗುತ್ತದೆ. ಅವರನ್ನು ಸಂಪುಟಕ್ಕೆ ಸೇರಿರುವ ಮೊದಲೇ, ರಾಜ್ಯಬಿಟ್ಟು ಹೊರಗಡೆ ಪ್ರಯಾಣಿಸುವಂತಿಲ್ಲ ಎಂಬುದಾಗಿ ಷರತ್ತು ವಿಧಿಸಲಾಗಿತ್ತು. ಆ ಷರತ್ತನ್ನು ಸಡಿಲಿಸಬೇಕು” ಎಂದು ಕೋರಿದರು.

ಈ ವಾದ ಪರಿಗಣಿಸಿದ ಪೀಠವು ಸದ್ಯ ನಾಗೇಂದ್ರ ಅವರು ರಾಜ್ಯ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಸಚಿವರಾಗಿರುವ ಹಿನ್ನೆಲೆಯಲ್ಲಿ ಈ ಷರತ್ತು ನಿಸ್ಸಂದೇಹವಾಗಿ  ನಾಗೇಂದ್ರ ಸ್ಥಾನಕ್ಕೆ ಮಾತ್ರವಲ್ಲದೆ, ಅವರ ಅಧಿಕೃತ ಕರ್ತವ್ಯಗಳ ನಿರ್ವಹಣೆಗೂ ಧಕ್ಕೆ ಉಂಟು ಮಾಡಲಿದೆ. ಈ ದೃಷ್ಟಿಯಲ್ಲಿ ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ರಾಜ್ಯವನ್ನು ಬಿಟ್ಟು ಹೊರಹೋಗುವಂತಿಲ್ಲ ಎಂಬುದಾಗಿ ವಿಧಿಸಲಾದ ಷರತ್ತು ಸಮರ್ಥನೀಯವಲ್ಲ. ಆದ್ದರಿಂದ, ಈ ಷರತ್ತಿಗೆ ತಡೆ ನೀಡಲಾಗುತ್ತಿದೆ. ಹಾಗೆಂದು ಈ ತಡೆ ಆದೇಶವು ನಾಗೇಂದ್ರ ಅವರು ರಾಷ್ಟ್ರದ ಗಡಿ ಮೀರಿ ಪ್ರಯಾಣಿಸಬಹುದು ಎಂದು ಅರ್ಥವಲ್ಲ. ಅವರು ದೇಶದೊಳಗೆ ಮಾತ್ರ ಪ್ರಯಾಣಿಸಬೇಕು ಎಂದು ಆದೇಶಿಸಿದೆ.