ಕೋವಿಡ್‌ನಿಂದ ರಕ್ಷಣೆ ಪಡೆಯುವ ದೃಷ್ಟಿಯಿಂದ 45 ವರ್ಷ ತುಂಬಿದ ನ್ಯಾಯಾಲಯದ ಸಿಬ್ಬಂದಿ ಲಸಿಕೆ ಪಡೆದುಕೊಳ್ಳಲು ಮನವೊಲಿಸುವಂತೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ರಾಜ್ಯದಲ್ಲಿ ಈಚೆಗೆ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿರುವ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಸಹಿ ಮಾಡಿರುವ ಆಡಳಿತಾತ್ಮಕ ನಿರ್ದೇಶನ ಹೊರಡಿಸಲಾಗಿದೆ.
“ಕೋವಿಡ್ ನಿಯಂತ್ರಿಸಲು ಇರುವ ಅತ್ಯುತ್ತಮ ವಿಧಾನವೆಂದರೆ ಅರ್ಹರಾದ ನ್ಯಾಯಿಕ ಅಧಿಕಾರಿಗಳು, ನ್ಯಾಯಾಲಯದ ಸಿಬ್ಬಂದಿ ಮತ್ತು ಪರಿಷತ್‌ನ ಸದಸ್ಯರು ಲಸಿಕೆ ಪಡೆದುಕೊಳ್ಳುವಂತೆ ಮಾಡುವುದು. 45 ವರ್ಷ ತುಂಬಿದ ನ್ಯಾಯಾಲಯದ ಸಿಬ್ಬಂದಿ ಆದಷ್ಟು ಬೇಗ ಲಸಿಕೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಅವರನ್ನು ಮನವೊಲಿಸುವಂತೆ ಎಲ್ಲಾ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರು/ಘಟಕದ ಮುಖ್ಯಸ್ಥರು ಮಾಡಬೇಕು” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಏಪ್ರಿಲ್ 1ರಿಂದ 45 ವರ್ಷ ಅಥವಾ ಆ ವಯಸ್ಸು ಮೀರಿದವರಿಗೆ ಲಸಿಕೆ ನೀಡಲಾಗುವುದು ಎಂಬ ವಿಚಾರ ಹೊರಬಿದ್ದ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾಗಿದೆ. 45 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿ ಜಿಲ್ಲೆ ಮತ್ತು ತಾಲ್ಲೂಕು ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ಸದಸ್ಯರ ಪಟ್ಟಿಯನ್ನು ಸಿದ್ಧಪಡಿಸುವಂತೆ ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರಿಗೆ ನ್ಯಾಯಪೀಠ ಸೂಚಿಸಿದೆ.
“ಪ್ರತಿ ಜಿಲ್ಲೆ ಮತ್ತು ತಾಲ್ಲೂಕು ನ್ಯಾಯಾಲಯದಲ್ಲಿ 45 ವರ್ಷ ಮತ್ತು ಮೇಲ್ಪಟ್ಟ ಸಿಬ್ಬಂದಿ ಸದಸ್ಯರ ಪಟ್ಟಿಯನ್ನು ಸಿದ್ಧಪಡಿಸುವುದು ಸೂಕ್ತವಾಗಿದೆ. ಅಂತಹ ಸಿಬ್ಬಂದಿ ಸದಸ್ಯರ ಪಟ್ಟಿಯನ್ನು ಆಯಾ ನ್ಯಾಯಾಲಯಗಳಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಗಳಿಗೆ ಮತ್ತು ನ್ಯಾಯಾಂಗ ಅಧಿಕಾರಿಗಳಿಗೆ ಲಭ್ಯವಾಗುವಂತೆ ಮಾಡಬೇಕು, ಅವರು ತಕ್ಷಣವೇ ಲಸಿಕೆ ತೆಗೆದುಕೊಳ್ಳುವಂತೆ ಸಿಬ್ಬಂದಿ ಸದಸ್ಯರ ಮನವೊಲಿಸುವ ಪ್ರಯತ್ನ ಮಾಡುತ್ತಾರೆ” ಆದೇಶದಲ್ಲಿ ತಿಳಿಸಲಾಗಿದೆ.
ಹೆಚ್ಚುವರಿಯಾಗಿ, ಜಿಲ್ಲಾ ಅಥವಾ ತಾಲ್ಲೂಕು ಆಡಳಿತದೊಂದಿಗೆ ಸಮನ್ವಯ ಸಾಧಿಸುವ ಮೂಲಕ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮತ್ತು ತಾಲ್ಲೂಕು ಸ್ಥಳಗಳಲ್ಲಿನ ಹಿರಿಯ ನ್ಯಾಯಾಂಗ ಅಧಿಕಾರಿಗಳು ನ್ಯಾಯಾಂಗ ಅಧಿಕಾರಿಗಳು, ಸಿಬ್ಬಂದಿ ಸದಸ್ಯರು ಮತ್ತು ವಕೀಲರ ಸಂಘದ ಸದಸ್ಯರಿಗೆ ಲಸಿಕೆ ಕೊಡಿಸುವ ವ್ಯವಸ್ಥೆಯನ್ನು ಮಾಡಲು ಪ್ರಯತ್ನಿಸುತ್ತಾರೆ ಎಂದು ನ್ಯಾಯಪೀಠ ಹೇಳಿದೆ.
2021ರ ಏಪ್ರಿಲ್ 16ರೊಳಗೆ ಲಸಿಕೆ ತೆಗೆದುಕೊಂಡ ನ್ಯಾಯಾಂಗ ಅಧಿಕಾರಿಗಳು ಮತ್ತು ಸಿಬ್ಬಂದಿ ಸದಸ್ಯರ ವಿವರಗಳನ್ನು ಒಳಗೊಂಡಂತೆ ರಿಜಿಸ್ಟ್ರಾರ್ ಮೂಲಸೌಕರ್ಯ ಮತ್ತು ನಿರ್ವಹಣೆ ಅವರಿಗೆ ಅನುಸರಣೆ ವರದಿಗಳನ್ನು ಸಲ್ಲಿಸುವಂತೆ ಸಿಜೆ ಓಕಾ ಎಲ್ಲಾ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು / ಘಟಕ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ.
ಕೋವಿಡ್ ಸಾಂಕ್ರಾಮಿಕತೆ ಸಂದರ್ಭದಲ್ಲಿ ಕರ್ನಾಟಕದ ನ್ಯಾಯಾಂಗವು ಎಲ್ಲಾ ನ್ಯಾಯಾಲಯಗಳ ಕಾರ್ಯಚಟುವಟಿಕೆಯನ್ನು ಮುಂದುವರೆಸಲು ಸಾಧ್ಯವಾದಷ್ಟು ಉತ್ತಮ ಪ್ರಯತ್ನಗಳನ್ನು ಮಾಡಿತ್ತು, ಇದರಿಂದಾಗಿ ದಾವೆದಾರರ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಲಾಗಿದೆ ಎಂಬುದನ್ನೂ ಗಣನೆಗೆ ತೆಗೆದುಕೊಂಡಿದೆ.