Karnataka high court  
ಸುದ್ದಿಗಳು

ಜೈಲುಗಳಲ್ಲಿ ಕೈದಿಗಳ ಸಾಂದ್ರತೆ, ಸ್ವಚ್ಛತೆ, ವೈದ್ಯಕೀಯ ಕೊರತೆಗಳ ಪರಿಹಾರಕ್ಕೆ ಸರ್ಕಾರದ ಪ್ರತಿಕ್ರಿಯೆ ಬಯಸಿದ ಹೈಕೋರ್ಟ್

ರಾಜ್ಯದಲ್ಲಿರುವ ಜೈಲಿನಲ್ಲಿ ಕೈದಿಗಳ ದಟ್ಟಣೆ ನಿಯಂತ್ರಿಸಲು ಮತ್ತು ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಕೋರಿ ಸಲ್ಲಿಸಲಾಗಿದ್ದ ಮನವಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

Bar & Bench

ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ಕಲ್ಪಿಸಲಾಗಿರುವ ಸೌಲಭ್ಯಗಳ ಕುರಿತ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಗುರುವಾರ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ್ದು, ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ಜೈಲಿನಲ್ಲಿ ಕೈದಿಗಳ ದಟ್ಟಣೆ ನಿಯಂತ್ರಣ, ಸ್ವಚ್ಛತೆ, ವೈದ್ಯಕೀಯ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಹಲವಾರು ವಿಚಾರಗಳ ಕುರಿತು ಪ್ರತಿಕ್ರಿಯಿಸುವಂತೆ ರಾಜ್ಯ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರ ನೇತೃತ್ವದ ವಿಭಾಗೀಯ ಪೀಠವು ನಿರ್ದೇಶಿಸಿದೆ.

ಜೈಲಿನಲ್ಲಿ ಕೈದಿಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಅವರಿಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು. ಜೂನ್‌ 4ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಈ ಕೆಳಗಿನ ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಪ್ರತಿಕ್ರಿಯಿಸಬೇಕಿದೆ:

  • ಕೈದಿಗಳ ಸ್ವಚ್ಛತೆ: ಆರು ಮಂದಿ ಕೈದಿಗಳಿಗೆ ಒಂದು ಶೌಚಾಲಯ ಇರಬೇಕು. ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ದತ್ತಾಂಶದ ಪ್ರಕಾರ 9.41 ಕೈದಿಗಳಿಗೆ ಒಂದು ಶೌಚಾಲಯವಿದೆ.

  • ಮಾದರಿ ಜೈಲು ಕೈಪಿಡಿಯ ಪ್ರಕಾರ 10 ಕೈದಿಗಳಿಗೆ ಒಂದು ಸಾಮಾನ್ಯ ಸ್ನಾನಗೃಹ ಇರಬೇಕು ಎಂದು ಹೇಳಲಾಗಿದೆ. ರಾಜ್ಯದ ಅನೇಕ ಜೈಲುಗಳಲ್ಲಿ, 15ಕ್ಕೂ ಹೆಚ್ಚು ಕೈದಿಗಳಿಗೆ ಒಂದು ಸ್ನಾನಗೃಹ ಒದಗಿಸಲಾಗಿದೆ.

  • ಶೌಚ ಗೃಹದಲ್ಲಿ ಮಾತ್ರವಲ್ಲದೇ ಕೇಂದ್ರ ಕಾರಾಗೃಹದಲ್ಲಿ ಸ್ವಚ್ಛತೆ ಕಾಪಾಡಬೇಕು.

  • ಕೈದಿಗಳ ದಟ್ಟಣೆ: ವಿವಿಧ ವರ್ಗಗಳ ಕೈದಿಗಳಿಗೆ ವಿಭಿನ್ನ ಮಾದರಿಯ ಕೊಠಡಿಗಳನ್ನು ನಿರ್ಮಿಸುವ ಸಂಬಂಧ ಪ್ರಮಾಣಿತ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂಬುದನ್ನು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.

  • ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ದಟ್ಟಣೆಯ ನಿರಂತರ ಸಮಸ್ಯೆ ಇದ್ದಲ್ಲಿ, ಕೇಂದ್ರ ಕಾರಾಗೃಹಕ್ಕೆ ಹೆಚ್ಚುವರಿ ಆವರಣಗಳನ್ನು ನಿರ್ಮಿಸಲು ಯಾವುದೇ ಪ್ರಸ್ತಾಪಗಳು ಬಾಕಿ ಉಳಿದಿದೆಯೇ ಎಂದು ದಾಖಲೆಯಲ್ಲಿ ತಿಳಿಸಬೇಕು.

  • ಕೈದಿಗಳಿಗೆ ಜೈಲಿನಲ್ಲಿ ಆಹಾರ ಪೂರೈಕೆ: ಕೈದಿಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆಯೇ ಮತ್ತು ತಯಾರಿಸಿದ ಆಹಾರದ ಮೇಲೆ ಯಾವುದೇ ಗುಣಮಟ್ಟದ ನಿಯಂತ್ರಣವಿದೆಯೇ; ಕೈದಿಗಳಿಗೆ ಒದಗಿಸಲಾದ ಆಹಾರ ಪದಾರ್ಥಗಳ ವಿಧಗಳನ್ನು ಅಂತಿಮಗೊಳಿಸಲು ತಜ್ಞರ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗಿದೆಯೆ ಎಂದು ರಾಜ್ಯ ವಿವರಿಸಬೇಕು.

  • ಜೈಲುಗಳಲ್ಲಿನ ಅಡುಗೆ ಮನೆಗಳಲ್ಲಿ ಮೂಲಸೌಕರ್ಯ ಲಭ್ಯವಿದೆಯೇ ಮತ್ತು ಅಡುಗೆಮನೆಗಳನ್ನು ನಿರ್ವಹಿಸಲು ಸಾಕಷ್ಟು ಸಿಬ್ಬಂದಿ ಇದ್ದಾರೆಯೇ ಎಂದು ರಾಜ್ಯ ಸರ್ಕಾರ ವಿವರಿಸಬೇಕು.

  • ಕೈದಿಗಳಿಗೆ ತಮ್ಮ ಸಂಬಂಧಿಕರು ಮತ್ತು ಸ್ನೇಹಿತರನ್ನು ಭೇಟಿ ಮಾಡಲು ಸರಿಯಾದ ಸೌಲಭ್ಯ ಒದಗಿಸಲಾಗಿದೆಯೇ; ಸುನಿಲ್ ಬಾತ್ರಾ ವರ್ಸಸ್‌ ದೆಹಲಿ ಆಡಳಿತದ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಈ ವಿಷಯವನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದೆ. ಈ ವಿಷಯದ ಬಗ್ಗೆ ಸರ್ಕಾರ ಪ್ರತಿಕ್ರಿಯಿಸಬೇಕು.

  • ಕೈದಿಗಳ ಆರೋಗ್ಯ: ಕಾರಾಗೃಹಗಳಲ್ಲಿ ನಿರ್ಮಿಸಲಾದ ಆಸ್ಪತ್ರೆಗಳಲ್ಲಿ ಸಾಕಷ್ಟು ಹಾಸಿಗೆಗಳು ಲಭ್ಯವಿದೆಯೇ ಎಂದು ಮಾಹಿತಿ ನೀಡಬೇಕು. ಸಾಕಷ್ಟು ಸಂಖ್ಯೆಯ ವೈದ್ಯಕೀಯ ಸಿಬ್ಬಂದಿ ಮತ್ತು ಸಿಬ್ಬಂದಿ ಲಭ್ಯವಿದ್ದಾರೆಯೇ ಎಂಬುದನ್ನು ತಿಳಿಸಬೇಕು.

  • ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳು: ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಹೊರ ಮಿತಿಯನ್ನು ಒಳಗೊಂಡ ಅಫಿಡವಿಟ್ ಸಲ್ಲಿಸಬೇಕು.

  • ಜೈಲು ಆಸ್ಪತ್ರೆಗಳಲ್ಲಿನ ಕೆಲವು ಸಿಬ್ಬಂದಿಗಳನ್ನು ರಾಜ್ಯದ ಇತರೆ ಕಾರಾಗೃಹಗಳಿಗೆ ವರ್ಗಾಯಿಸಬಹುದೇ ಎಂದು ರಾಜ್ಯವು ಪರಿಗಣಿಸಬೇಕು.

  • ಜೈಲಿನಲ್ಲಿ ಕೈದಿಗಳಿಗೆ ಒದಗಿಸಿದ ಬಟ್ಟೆ, ಜೈಲಿನ ಕೈದಿಗಳಾಗಿರುವ ತಾಯಂದಿರೊಂದಿಗೆ ಉಳಿದುಕೊಳ್ಳುವ ಮಕ್ಕಳಿಗೆ ಒದಗಿಸಲಾದ ಸೌಲಭ್ಯಗಳು, ಕೈದಿಗಳಿಗೆ ವಹಿಸಲಾಗಿರುವ ಕೆಲಸಕ್ಕಾಗಿ ಕೈದಿಗಳಿಗೆ ನೀಡಲಾಗುವ ವೇತನ ಮುಂತಾದ ಪೂರಕ ವಿಷಯಗಳನ್ನೂ ಸಹ ರಾಜ್ಯವು ಪರಿಶೀಲಿಸಬೇಕು.

  • ವಿಚಾರಣಾಧೀನ ಕೈದಿಗಳ ಬಗೆಗೂ ರಾಜ್ಯ ಸರ್ಕಾರ ಪ್ರತಿಕ್ರಿಯಿಸಬೇಕು.